ವಿಶ್ವ ದಾಖಲೆ: ಐದು ಸೀಟಿನ ಕಾರಿನಲ್ಲಿ ಬರೋಬ್ಬರಿ 27 ಮಂದಿ: ಯುವತಿಯರ ಫ್ಲೆಕ್ಸಿಬಲ್‌ಗೆ ನೆಟ್ಟಿಗರು ಫಿದಾ
ಒಂದು ಮಿನಿ ಕೂಪರ್ ಕಾರಿನಲ್ಲಿ ಅಬ್ಬಬ್ಬಾ ಅಂದ್ರೂ ನಾಲ್ಕರಿಂದ ಐದಿ ಮಂದಿ ಕೂರಬಹುದು, ಆದರೆ ಮೂರು ನಿಮಿಷಗಳ ಅವಧಿಯಲ್ಲಿ ಬರೋಬ್ಬರಿ 27 ಮಂದಿ ಯುವತಿಯರು ಒಬ್ಬರ ನಂತರ ಒಬ್ಬರಂತೆ ಮಿನಿ ಕೂಪರ್ ಕಾರನ್ನು ಪ್ರವೇಶಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ಕುರಿತ ವಿಡಿಯೋ ಟ್ವಿಟ್ಟರ್‌ನಲ್ಲಿ ಸದ್ದು ಮಾಡುತ್ತಿದ್ದು, ಈ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಪೇಜ್‌ನಲ್ಲಿ ಹಂಚಿಕೊಂಡಿದೆ. ಮಿನಿ ಕೂಪರ್ ಕಾರಿನಲ್ಲಿ ಒಬ್ಬರ ಮೇಲೊಬ್ಬರಂತೆ ಒಟ್ಟು 27 ಮಂದಿ ಯುವತಿಯರು ಕಾರನ್ನು ಏರಿ ಇಕ್ಕಟ್ಟಿನಲ್ಲೂ ಸ್ಥಳವನ್ನು ಹೊಂದಿಸಿಕೊಂಡಿದ್ದಾರೆ.
ಈ ದಾಖಲೆಯನ್ನು 2014 ರಲ್ಲೇ ನಿರ್ಮಿಸಲಾಗಿದ್ದರೂ, ಈ ಕುರಿತ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ 2022 ಸೆಪ್ಟಂಬರ್ 6 ರಂದು ಹಂಚಿಕೊಂಡಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ 8 ವರ್ಷಗಳ ಹಿಂದೆ ಈ ದಾಖಲೆಯನ್ನು ನಿರ್ಮಿಸಲಾಯಿತು. ಆಗ, ದಾಖಲೆ ರಚಿಸಲು ಯುವತಿಯರು ವಿವಿಧ ತಂತ್ರಗಳನ್ನು ಬಳಸಿದ್ದರು.

ಅವರು ಕಾರಿನೊಳಗಿನ ಸೀಟ್‌ಗಳನ್ನು ಸರಿಹೊಂದಿಸಿಕೊಂಡು ಒಬ್ಬರು ಇನ್ನೊಬ್ಬರ ಮೇಲೆ ಏರಿ ಒಂದಷ್ಟು ಮಂದಿ ಕೂತರೆ, ಕಾರಿನ ಹಿಂದಿನ ವಿಭಾಗದಲ್ಲಿ ಮತ್ತಷ್ಟು ಮಂದಿ ಯುವತಿಯರು ದೇಹವನ್ನು ಹೊಂದಿಸಿಕೊಂಡು ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಹೆಚ್ಚು ಮಂದಿ ಕಾರಿನಲ್ಲಿ ಇಡಿಸುವಂತೆ ಸೀಟ್‌ಗಳನ್ನು ಸರಿಹೊಂದಿಸಿ ಹತ್ತಿದ್ದಾರೆ. ಸ್ಟೀರಿಂಗ್ ಮುಂದೆ ಕನ್ನಡಿಯ ಮಧ್ಯೆ ಕೂಡ ಯುವತಿಯೊಬ್ಬರು ಮಲಗಿದ್ದು, ಡಿಕ್ಕಿಯಲ್ಲಿ ನಾಲ್ವರು ಹತ್ತಿರುವುದು ಗಮನಾರ್ಹ. ಹೀಗೆ ಒಟ್ಟಾರೆ 27 ಮಂದಿ ಹತ್ತಿದ್ದಾರೆ.

ಮೂರು ನಿಮಿಷಗಳ ಅವಧಿಯ ಕ್ಲಿಪ್‌ನಲ್ಲಿ ಜನರು ಒಬ್ಬರ ನಂತರ ಒಬ್ಬರಂತೆ ಮಿನಿ ಕೂಪರ್‌ಗೆ ಪ್ರವೇಶಿಸುವುದನ್ನು ಕಾಣಬಹುದು, ಮೊದಲು ಮುಂದಿನ ಯುವತಿಗೆ ಹೊಂದಿಕೊಳ್ಳಲು ಜಾಗವನ್ನು ಮಾಡುತ್ತಾರೆ. ಇದು ಉಳಿದ ಯುವತಿಯರು ತಮ್ಮ ದೇಹವನ್ನು ಬಾಗಿಸಿ, ತಮ್ಮ ಕಾಲುಗಳನ್ನು ಸೀಟ್‌ಗಳಲ್ಲಿ ಪರಸ್ಪರ ಇಕ್ಕಟ್ಟಿನಲ್ಲೂ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಯುವತಿಯರೆಲ್ಲರ ದೇಹವು ಬಹಳ ಫ್ಲೆಕ್ಸಿಬಲ್ ಇದ್ದು, ಸಣ್ಣ ಇಕ್ಕಟ್ಟಿನಲ್ಲೂ ತಮ್ಮ ದೇಹವನ್ನು ಹೊಂದಿಸಿಕೊಳ್ಳುತ್ತಿದ್ದರು. ಇದು ಕೂಡ ಅವರ ವಿಶ್ವ ದಾಖಲೆಗೆ ಸಹಕಾರಿಸಿದೆ. ಅಲ್ಲದೇ ಅಷ್ಟು ಮಂದಿ ಕಾರಿನಲ್ಲಿ ಏರಿದಾಗ ಉಸಿರಾಟ ಸಮಸ್ಯೆಯಾಗಬಹುದು, ಆದರೆ ಯುವತಿಯರು ಸಾಕಷ್ಟು ಅಭ್ಯಾಸ ಮಾಡಿರುವುದರಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ.

ಈ ವಿಡಿಯೋ ಅಪ್‌ಲೋಡ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲವು ಇಂಟರ್ನೆಟ್ ಬಳಕೆದಾರರು ವಿಡಿಯೋವನ್ನು ವಿನೋದಮಯವಾಗಿ ನೋಡಿದರೆ ಇನ್ನೂ ಕೆಲವರು ಗೊಂದಲಕ್ಕೊಳಗಾಗಿದ್ದಾರೆ. ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಸಾಮನ್ಯವಾಗಿ ಆರು ಮಂದಿ ಕೂರುವುದೇ ಅಸಾಧ್ಯ ಅಂತದರಲ್ಲಿ ಬರೋಬ್ಬರಿ 27 ಮಂದಿ ಕೂತಿರುವುದು ಆಶ್ಚರ್ಯಕ್ಕೊಳಗಾಗಿಸಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಈ ದಾಖಲೆಯನ್ನು ಮಾಡಿ ಸದ್ಯ ಎಂಟು ವರ್ಷ ಕಳೆದಿದೆ, ಆದರೆ ಈ ವರೆಗೂ ಯಾರೂ ಕೂಡ ಮತ್ತೊಮ್ಮೆ ಇಂತಹ ಸಾಹಸ ಮಾಡಿಲ್ಲ. ಮಾಡಿದ್ದರೂ ಕೂಡ ಇವರ ದಾಖಲೆಯನ್ನು ಮುರಿದಿಲ್ಲ. ಮುಂದಿನ ದಿನಗಳಲ್ಲಿ ಈ ದಾಖಲೆಯನ್ನು ಮುರಿಯುವುದ ಕೂಡ ಕಷ್ಟವೆಂದೇ ಹೇಳಬಹುದು.

ಹೊಸ ಮಿನಿ ಕೂಪರ್
ಮಿನಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕೂಪರ್ ಎಸ್‌ಇ ಎಂಬ ಹೊಸ ಎಲೆಕ್ಟ್ರಿಕ್ ಕಾರನ್ನು 2022ರ ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಡುಗಡೆಗೊಳಿಸಿ ವಿತರಣೆ ಕೂಡ ಮಾಡಿದ್ದ ಕಂಪನಿ, ಇದೀಗ ತನ್ನ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ನ್ಯೂ ಜನರೇಷನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಸ್ವೀಡನ್‌ನ ಆರ್ಜೆಪ್ಲಾಗ್‌ನಲ್ಲಿರುವ ಬಿಎಂಡಬ್ಲ್ಯು ಗ್ರೂಪ್‌ನ ವಿಂಟರ್ ಪರೀಕ್ಷಾ ಕೇಂದ್ರದಲ್ಲಿ ಕಾರನ್ನು ಪರೀಕ್ಷಿಸಲಾಗುತ್ತಿದೆ. ನ್ಯೂ ಜನರೇಷನ್ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಸಾಂಪ್ರದಾಯಿಕ ವೃತ್ತಾಕಾರದ ಹೆಡ್‌ಲೈಟ್‌ಗಳು ಮತ್ತು ಮುಂಭಾಗದ ಗ್ರಿಲ್ ಅನ್ನು ಉಳಿಸಿಕೊಂಡಿದೆ, ಒಟ್ಟಾರೆ ಸಿಲೂಯೆಟ್ ಮೊದಲಿಗಿಂತ ಸ್ವಲ್ಪ ಹೆಚ್ಚು ದುಂಡಾಗಿರುತ್ತದೆ.

ನ್ಯೂ ಜನರೇಷನ್ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಅದರ ICE ಮಾದರಿಯಲ್ಲಿ ಫೇಸ್‌ಲಿಫ್ಟ್ ಅನ್ನು ಪಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ, ಟೀಸರ್ ಚಿತ್ರಗಳು ಕ್ಯಾಬಿನ್ ಬಗ್ಗೆ ಹೆಚ್ಚಿನದನ್ನು ಬಹಿರಂಗಪಡಿಸಿಲ್ಲ, ಆದರೆ ಕೆಲವು ಹೊಸ ನವೀಕರಣಗಳನ್ನು ಪಡೆಯುವ ಸಾಧ್ಯತೆಗಳಿವೆ.

ಡ್ರೈವರ್‌ಗಾಗಿ ಡಿಜಿಟಲ್ ಡಿಸ್‌ಪ್ಲೇ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ದೊಡ್ಡ ವೃತ್ತಾಕಾರದ ಪರದೆಯ ಮೂಲಕ ಸಂಯೋಜಿಸಲಾಗುತ್ತಿದೆ. ಅದು ಹೆಡ್ಸ್-ಅಪ್ ಡಿಸ್ ಪ್ಲೇ ಅನ್ನು ಸಹ ಬಳಸುತ್ತದೆ. ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಬ್ರ್ಯಾಂಡೆಡ್ ಆಡಿಯೋ ಸಿಸ್ಟಮ್, ಚಾಲಿತ ಮುಂಭಾಗದ ಸೀಟುಗಳು ಮತ್ತು ADAS ನಂತಹ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು.

ಭಾರತದಲ್ಲಿ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಖರೀದಿಗಾಗಿ ಬುಕ್ಕಿಂಗ್ ಅನ್ನು 2021ರ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭಿಸಲಾಗಿತ್ತು. ಕೆಲವೇ ದಿನಗಳಲ್ಲಿ ಮಾಡೆಲ್‌ಗಾಗಿ ನಿಗದಿಪಡಿಸಿದ ಎಲ್ಲಾ ಯುನಿಟ್ ಗಳು ಸೋಲ್ಡ್ ಔಟ್ ಆಗಿದ್ದವು. ಈ ಹೊಸ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.47.20 ಲಕ್ಷವಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸಣ್ಣ ಮಿನಿ ಕೂಪರ್ ಕಾರಿನಲ್ಲಿ 27 ಮಂದಿ ಕೂತಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನೀವು ಕೂಡ ಈ ವಿಡಿಯೋವನ್ನು ವೀಕ್ಷಿಸಿದ್ದರೇ ಖಂಡಿತ ಹುಬ್ಬೇರಿಸಿರಬಹುದು, ಯುವತಿಯರ ಅಸಾಧಾರಣವಾಗಿ ಹೊಂದಿಕೊಳ್ಳುವ ದೇಹವು ಎಂಥವರನ್ನು ಒಂದು ಕ್ಷಣ ದಂಗಾಗಿಸಿರಬಹುದು. ಈ ಸಾಧನೆ 2014ರಲ್ಲಿ ಮಾಡಿದ್ದರೂ ಇಂದು ವೈರಲ್ ಆಗಿ ಪ್ರಶಂಸೆ ವ್ಯಕ್ತವಾಗುತ್ತಿದೆ.


Click it and Unblock the Notifications