ಜಗತ್ತಿನ ಮೊದಲ ಚಾಲಕ ರಹಿತ ಬಸ್ ಇದೇನಾ?
ನೀವು ಈಗಾಗಲೇ ಚಾಲಕ ರಹಿತ ಸ್ವಯಂಚಾಲಿತ ಕಾರುಗಳ ಬಗ್ಗೆ ಕೇಳಿರಬಹುದು. ಈ ಬಗ್ಗೆ ನಿರಂತರ ಅಧ್ಯಯನ ಜಾರಿಯಾಗುತ್ತಲೇ ಇದೆ. ಆದರೆ ಯಾವತ್ತಾದರೂ ಡ್ರೈವರ್ ಲೆಸ್ ಬಸ್ಸಿನ ಬಗ್ಗೆ ಕೇಳಿರುವೀರಾ?
ಚೀನಾದಲ್ಲಿ ಇಂತಹದೊಂದು ಕಲ್ಪನೆಯು ನನಸಾಗಿದ್ದು, ಕಳೆದ 2015 ಆಗಸ್ಟ್ 29 ರಂದು ಚಾಲಕ ರಹಿತ ಸ್ವಯಂಚಾಲಿತ ಬಸ್ ಚೊಚ್ಚಲ ಪಯಣವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಜಗತ್ತಿನ ಚೊಚ್ಚಲ ಡ್ರೈವರ್ ಲೆಸ್ ಬಸ್ಸು ಅನ್ನು ಚೀನಾ ಮೂಲದ ಯೂಟಾಂಗ್ (Yutong) ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಅಷ್ಟೇ ಯಾಕೆ ಝೆಂಗ್‌ಝೂ (Zhengzhou) ಪ್ರದೇಶದಿಂದ ಕೀಫೆಂಗ್ (Kaifeng) ವರೆಗಿನ ಪಯಣವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ.

32.6 ಕೀ.ಮೀ. ದೂರದ ಈ ಇಂಟರ್ ಸಿಟಿ ನಗರದಲ್ಲಿ ಒಟ್ಟು 26 ಟ್ರಾಫಿಕ್ ಸಿಗ್ನಲ್ ಗಳಿವೆ. ಅತಿ ಹೆಚ್ಚಿನ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿರುವ ಹೊರತಾಗಿಯೂ ಈ ಚಾಲಕರಹಿತ ಬಸ್ ಯಶಸ್ವಿ ಸಂಚಾರ ಪ್ರಯೋಗವನ್ನು ನಡೆಸಿದೆ.

ಆಟೋಮ್ಯಾಟಿಕ್ ಆಗಿ ಲೇನ್ ಬದಲಾಯಿಸುವುದು, ಓವರ್ ಟೇಕ್, ಟ್ರಾಫಿಕ್ ಸಿಗ್ನಲ್ ಗಳನ್ನು ಪಾಲಿಸುವುದು ಮುಂತಾದ ಪರೀಕ್ಷೆಯಲ್ಲಿ ಚಾಲಕ ರಹಿತ ಬಸ್ ಪರಿಣಾಮಕಾರಿಯೆನಿಸಿಕೊಂಡಿದೆ ಎಂದು ಸಂಸ್ಥೆಯು ತಿಳಿಸಿದೆ.

ಮಾನವ ಸಹಾಯವಿಲ್ಲದೆ ಈ ಡ್ರೈವರ್ ಲೆಸ್ ಬಸ್ ಗಂಟೆಗೆ 68 ಕೀ.ಮೀ. ವೇಗದಲ್ಲಿ ಸಂಚರಿಸುತ್ತಾ ಬಂದು ತನ್ನ ಗುರಿ ಮುಟ್ಟಿದೆ. ಹಾಗಿದ್ದರೂ ಪ್ರಸ್ತುತ ಚಾಲಕರಹಿತ ಬಸ್ಸಿಗೆ ಇದುವರೆಗೆ ನಾಮಕರಣವಾಗಿಲ್ಲ. ಅಲ್ಲದೆ ಇದರಲ್ಲಿ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಪಾಲಿಸಲಾಗಿದೆ.

ಮೂರು ವರ್ಷಗಳ ನಿರಂತರ ಅಧ್ಯಯನದ ಬಳಿಕ ಡ್ರೈವರ್ ಲೆಸ್ ಬಸ್ ಅಭಿವೃದ್ಧಿಪಡಿಸಲಾಗಿದೆ. ಯೂಟಾಂಗ್ ನ ಈ ಪ್ರಯತ್ನಕ್ಕೆ ಚೀನಾದ ಎಂಜಿನಿಯರಿಂಗ್ ಅಕಾಡೆಮಿಯ ತಜ್ಞೆ ಲಿ ದೇಯಿ (Li Deyi) ನೆರವಾಗಿದ್ದರು.

ಇದರಲ್ಲಿ ಇಂಟೆಲಿಜೆನ್ಸ್ ಡ್ರೈವಿಂಗ್ ಸಿಸ್ಟಂ ಅನ್ನು ಬಳಕೆ ಮಾಡಲಾಗಿದೆ. ಇದು ಇಂಟೆಲಿಜೆನ್ಸ್ ಮಾಸ್ಟರ್ ಕಂಟ್ರೋಲರ್, ಇಂಟೆಲಿಜೆನ್ಸ್ ಸೆನ್ಸಿಂಗ್ ಸಿಸ್ಟಂ ಮತ್ತು ಇಂಟೆಲಿಜೆನ್ಸ್ ಕಂಟ್ರೋಲ್ ಸಿಸ್ಟಂಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇವೆಲ್ಲವೂ ಜೊತೆಯಾಗಿ ಕಾರ್ಯಾಚರಿಸುವ ಮೂಲಕ ಎಂಜಿನ್ ಸರಾಗವಾಗಿ ಮುಂದಕ್ಕೆ ಚಲಿಸುವಂತೆ ಮಾಡಲಿದೆ.

ಈ ಪೈಕಿ ಇಂಟೆಲಿಜೆನ್ಸ್ ಸೆನ್ಸಿಂಗ್ ಸಿಸ್ಟಂನಲ್ಲಿ ಬಸ್ಸಿನ ಎಲ್ಲ ನಾಲ್ಕು ಬದಿಯಲ್ಲಿ ಲೇಸರ್ ರಾಡಾರ್ ಮತ್ತು ಕ್ಯಾಮೆರಾಗಳನ್ನು ಆಳವಡಿಸಲಾಗಿದೆ. ಇದು ಸಂಪೂರ್ಣ ವಿಹಾಂಗಣ ನೋಟದೊಂದಿಗೆ ಎಲ್ಲ ರಸ್ತೆ ಪರಿಸ್ಥಿತಿಯನ್ನು ಒಂದುಗೂಡಿಸುತ್ತದೆ. ಇದನ್ನರಿತುಕೊಂಡು ವೆಹಿಕಲ್ ಮಾಸ್ಟರ್ ಕಂಟ್ರೋಲ್ ವೇಗವರ್ಧಿಸಲು ಹಾಗೂ ಕಡಿಮೆ ಮಾಡಲು ಹಾಗೂ ಟ್ರಾಫಿಕ್ ಸೂಚನೆಗಳನ್ನು ಪಾಲಿಸಲು ನೆರವಾಗಲಿದೆ.

ಇದರಲ್ಲಿ ಆಳವಡಿಸಲಾಗಿರುವ ಲೇಸರ್ ರಾಡಾರ್ ಮುಖಾಂತರ ಇತರ ವಾಹನಗಳಿಂದ ಅಂತರ ಪಾಲಿಸಲು ಹಾಗೂ ಅಪಘಾತವನ್ನು ತಪ್ಪಿಸಲು ಹಾಗೂ ತುರ್ತು ಬ್ರೇಕಿಂಗ್ ಗೆ ಸಹಕಾರಿಯಾಗುತ್ತದೆ.

ಒಟ್ಟಿನಲ್ಲಿ ಈ ಪರಿಸರ ಸ್ನೇಹಿ ಬಸ್ಸು ಇನ್ನು ಮೂರು ಪರೀಕ್ಷಾ ಘಟ್ಟವನ್ನು ದಾಟಬೇಕಾಗಿದೆ ಎಂದು ಸಂಸ್ಥೆಯು ತಿಳಿಸುತ್ತದೆ. ಈ ಎಲ್ಲದರ ಮೂಲಕ ಜಗತ್ತಿನ ಚೊಚ್ಚಲ ಡ್ರೈವರ್ ಲೆಸ್ ಸ್ವಯಂಚಾಲಿತ ಬಸ್ಸೆಂಬ ಕೀರ್ತಿಗೆ ಪಾತ್ರವಾಗಲಿದೆ.


Click it and Unblock the Notifications








