ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
ಸಾಫ್ಟ್‌ವೇರ್ ದೈತ್ಯ ಜೊಹೊ ಕಾರ್ಪೊರೇಷನ್ (Zoho Corporation) ಸಿಇಒ ಶ್ರೀಧರ್ ವೆಂಬು (Sridhar Vembu), ಬಿಲಿಯನೇರ್ ಆಗಿದ್ದರೂ ಸಾಮಾನ್ಯರಂತೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. 2021ರಲ್ಲಿ ಬರೋಬ್ಬರಿ 3.75 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅವರು, ದೇಶದ 55ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು.
ದಕ್ಷಿಣ ತಮಿಳುನಾಡಿನ ಸುಂದರವಾದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ತೆಂಕಶಿ ಜಿಲ್ಲೆ ಸಮೀಪದ ಮಥಲಂಪರೈ ಗ್ರಾಮದಲ್ಲಿ ಶ್ರೀಧರ್ ವೆಂಬು ಅವರು ನೆಲೆಸಿದ್ದಾರೆ. ನಗರ ಪ್ರದೇಶಕ್ಕೆ ಸೀಮಿತವಾಗಿರುವ ಐಟಿ ಉದ್ಯಮವನ್ನು ಹಳ್ಳಿಗಳಿಗೂ ತೆಗೆದುಕೊಂಡು ಹೋಗಿರುವ ಖ್ಯಾತಿ ಅವರದ್ದಾಗಿದೆ. ತಾವಿರುವ ಮಥಲಂಪರೈ ಮತ್ತು ಆಂಧ್ರಪ್ರದೇಶದ ರೇಣಿಗುಂಟಾದಲ್ಲಿ ಕಚೇರಿಗಳನ್ನು ಹೊಂದಿದ್ದಾರೆ. ಅವರ ಸಾಧನೆಗೆ 2021ರಲ್ಲಿ 'ಪದ್ಮಶ್ರೀ' ಪ್ರಶಸ್ತಿಯೂ ಲಭಿಸಿದೆ.

ಶ್ರೀಧರ್ ವೆಂಬು ಅವರಿಗೆ ಪರಿಸರದ ಬಗ್ಗೆ ವಿಶೇಷ ಪ್ರೀತಿಯಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಇಷ್ಟಪಡುತ್ತಾರೆ. ಅವರು 2022ರಲ್ಲಿ ತಮ್ಮ ದಿನನಿತ್ಯದ ಬಳಕೆಗಾಗಿ 'ಟಾಟಾ ನೆಕ್ಸಾನ್ ಇವಿ'ಯನ್ನು ಖರೀದಿಸಿದ್ದರು. ಇತ್ತೀಚೆಗೆ ಹೊಚ್ಚ ಹೊಸ 'ಮೊಂಟ್ರಾ' ಎಲೆಕ್ಟ್ರಿಕ್ ಆಟೋವನ್ನು ಕೊಂಡುಕೊಂಡಿದ್ದಾರೆ. ಈ ಕುರಿತು ತಮ್ಮ 'ಎಕ್ಸ್' ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅವರು, 'ನೂತನ ಮೊಂಟ್ರಾ ಎಲೆಕ್ಟ್ರಿಕ್ ಆಟೋವನ್ನು ತೆಗೆದುಕೊಂಡಿರುವುದು ಖುಷಿ ತಂದಿದೆ. ಇದರ ಕಾರ್ಯಕ್ಷಮತೆ ತುಂಬಾ ಚೆನ್ನಾಗಿದೆ' ಎಂದು ಬರೆದುಕೊಂಡಿದ್ದಾರೆ.
ಸದ್ಯ, ಶ್ರೀಧರ್ ವೆಂಬು ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಗೌರಿಪ್ರಸಾದ್ ಮೊಹಂತಿ ಎಂಬ ಬಳಕೆದಾರ, 'ಹೊಸ ಎಲೆಕ್ಟ್ರಿಕ್ ಆಟೋ ಕುರಿತ ನಿಮ್ಮ ಆಸಕ್ತಿಯನ್ನು ನೋಡಿ ಸಂತೋಷವಾಯಿತು. ಆದರೆ ನಾನು ನಿಮ್ಮನ್ನು ಕೇಳಲು ಬಯಸುವುದೇನೆಂದರೆ, ಇ-ಆಟೋ ಖರೀದಿಸಿದ್ದಕ್ಕಾಗಿ ನೀವು ಖುಷಿಯಲ್ಲಿದ್ದೀರಿ. ಅದೇ ಎಲೆಕ್ಟ್ರಿಕ್ ಕಾರಿನ ಬಗ್ಗೆ ಏಕಿಲ್ಲ' ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಶ್ರೀಧರ್ ವೆಂಬು, 'ನಾನು ನನ್ನ ಟಾಟಾ ನೆಕ್ಸಾನ್ ಇವಿ ಕುರಿತಾಗಿಯೂ ಪೋಸ್ಟ್ ಮಾಡಿದ್ದೇನೆ. ನಾನು ದೂರದ ಪ್ರಯಾಣಗಳಿಗೆ ಅದನ್ನು ಬಳಕೆ ಮಾಡುತ್ತೇನೆ. 10 ಕಿ.ಮೀ ಒಳಗೆ ಇ-ಆಟೋವನ್ನು ಓಡಿಸುತ್ತೇನೆ' ಎಂದು ಹೇಳಿದ್ದಾರೆ. ಶಂಕರ್ ರಾವ್ ಎಂಬ ನೆಟ್ಟಿಗ, 'ಎಲೆಕ್ಟ್ರಿಲ್ ಆಟೋ ದೊಡ್ಡ ಎಸ್ಟೇಟ್ ಹಾಗೂ ನಗರ ಸಂಚಾರಕ್ಕೆ ಒಳ್ಳೆಯ ಆಯ್ಕೆಯಾಗಿ ತೋರುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ.
ಶ್ರೀಧರ್ ವೆಂಬು ಅವರು ನೆಟ್ಟಿಗ ಶಂಕರ್ ರಾವ್‌ರ ಕಾಮೆಂಟ್‌ಗೂ ಪ್ರತಿಕ್ರಿಯೆ ನೀಡಿದ್ದು, 'ಎಲೆಕ್ಟ್ರಿಕ್ ಆಟೋ ಸ್ಕೂಟರ್ ಅಥವಾ ಮೋಟಾರ್‌ಸೈಕಲ್‌ಗೆ ಉತ್ತಮ ಮತ್ತು ಸುರಕ್ಷಿತ ಪರ್ಯಾಯವಾಗಿದೆ. ನಾನು ಇದನ್ನು ಕುಟುಂಬದ ಸ್ಕೂಟರ್ ಎಂದು ಪರಿಗಣಿಸುತ್ತೇನೆ. ಇಕ್ಕಟ್ಟಾದ ಜಾಗಗಳಲ್ಲಿಯೂ ಓಡಿಸಬಹುದು. ಪಾರ್ಕಿಂಗ್ ಮಾಡುವುದು ಸುಲಭವಾಗಿದ್ದು, ಇ-ಆಟೋ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳಲಿದೆ' ಎಂದಿದ್ದಾರೆ.
ಬಿಲಿಯನೇರ್ ಶ್ರೀಧರ್ ವೆಂಬು ಮೊಂಟ್ರಾ ಎಲೆಕ್ಟ್ರಿಕ್ ಆಟೋದ ಯಾವ ಮಾದರಿಯನ್ನು ಖರೀದಿಸಿದ್ದಾರೆ ಎಂಬುದರ ಕುರಿತು ಸ್ಪಷ್ಟವಾದ ವಿವರಗಳಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಆಟೋ, ರೂ.3.02 ಲಕ್ಷದಿಂದ ರೂ.3.50 ಲಕ್ಷ ಎಕ್ಷ್ ಶೋರೂಂ ಬೆಲೆಯನ್ನು ಹೊಂದಿದೆ. ಕೇವಲ 4 ಗಂಟೆಗಳಲ್ಲಿ ಇದರ ಬ್ಯಾಟರಿ ಪ್ಯಾಕ್ ಚಾರ್ಜ್ ಆಗಲಿದ್ದು, 160 ಕಿಲೋಮೀಟರ್ ಗೂ ಹೆಚ್ಚಿನ ರೇಂಜ್ (ಮೈಲೇಜ್) ಕೊಡುತ್ತದೆ. ಗಂಟೆಗೆ 55 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








