ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ದರ ಹೆಚ್ಚಳದ ಹೊಡೆತ

ವರದಿಗಳ ಪ್ರಕಾರ ಅಕ್ಟೋಬರ್ ತಿಂಗಳ ನಂತರ ಐದಾರು ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ದರವನ್ನು ಶೇಕಡ 3-4ರಷ್ಟು ಹೆಚ್ಚಿಸಿವೆ. ಇದು ಎಲೆಕ್ಟ್ರಿಕ್ ದ್ವಿಚಕ್ರ ಮಾರಾಟ ಇಳಿಕೆಗೆ ಕಾರಣವಾಗಿದೆ ಎಂದು ಭಾರತೀಯ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ ತಿಳಿಸಿದೆ.
ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದರ ಹೆಚ್ಚಿಸಲು ಪ್ರಮುಖ ಕಾರಣ ರೂಪಾಯಿ ಮೌಲ್ಯ ಇಳಿಕೆ ಕಂಡಿರುವುದಾಗಿದೆ. ಈಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ದರ ಸುಮಾರು 26 ಸಾವಿರ ರು.ನಿಂದ 40 ಸಾವಿರ ರು.ವರೆಗಿದೆ.
ಅಕ್ಟೋಬರ್ ತಿಂಗಳ ನಂತರ ಉತ್ಪನ್ನಗಳ ದರ ಹೆಚ್ಚಾಗಿದೆ. ಇದರಿಂದ ವಾಹನ ಮಾರಾಟ ಗಣನೀಯವಾಗಿ ಇಳಿಕೆ ಕಂಡಿದೆ ಎಂದು ಎಲೆಕ್ಟ್ರಿಕ್ ವಾಹನ ಒಕ್ಕೂಟದ ನಿರ್ದೇಶಕ ಸೊಹಿಂದರ್ ಗಿಲ್ ಹೇಳಿದ್ದಾರೆ.
"ಇಂಧನ ದರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಜನರು ಪರಿಸರ ಸ್ನೇಹಿ ವಾಹನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಒಟ್ಟಾರೆ ಆರ್ಥಿಕ ವರ್ಷದಲ್ಲಿ ಮಾರಾಟ ಶೇಕಡ 50-55ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈಗಾಗಲೇ 2010-11ರ ಆರ್ಥಿಕ ವರ್ಷದಲ್ಲಿ 70 ಸಾವಿರ ಎಲೆಕ್ಟ್ರಿಕ್ ವಾಹನ ಮಾರಾಟವಾಗಿದೆ" ಎಂದು ಗಿಲ್ ಹೇಳಿದ್ದಾರೆ.
"ರೂಪಾಯಿ ಮೌಲ್ಯ ಕುಸಿದಿರುವುದು ಎಲೆಕ್ಟ್ರಿಕ್ ವಾಹನ ಕಂಪನಿಗಳಿಗೆ ಹೆಚ್ಚು ಹೊಡೆತ ನೀಡುತ್ತದೆ. ಯಾಕೆಂದರೆ ಬ್ಯಾಟರಿ, ಎಂಜಿನ್ ಸೇರಿದಂತೆ ಇ-ವಾಹನಗಳಿಗೆ ಹೆಚ್ಚಿನ ಬಿಡಿಭಾಗಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ" ಎಂದು ಗಿಲ್ ಹೇಳಿದ್ದಾರೆ.


Click it and Unblock the Notifications








