ಹೀರೊ ಇಗ್ನೈಟರ್ ಬೈಕ್ ರಸ್ತೆಗೆ, ದರ 56 ಸಾವಿರ ರು.
ನೂರ ಇಪ್ಪತ್ತೈದು ಸಿಸಿಯ ಹೊಸ ಬೈಕೊಂದರ ಹುಡುಕಾಟದಲ್ಲಿದ್ದವರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ದೇಶದ ಬೈಕ್ ಮಾರುಕಟ್ಟೆಯ ಅಗ್ರಜ ಹೀರೊ ಮೊಟೊಕಾರ್ಪ್ ಹೆಚ್ಚು ಸದ್ದಿಲ್ಲದೇ 125 ಸಿಸಿಯ ನೂತನ ಇಗ್ನೈಟರ್ ಬೈಕ್ ಪರಿಚಯಿಸಿದೆ. ಇದರ ದರವೂ ಕೈಗೆಟುಕುವ ಮಟ್ಟದಲ್ಲಿದೆ.
ನೂತನ ಹೀರೊ ಇಗ್ನೈಟರ್ ಬೈಕ್ ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ಬೇಸ್ ಆವೃತ್ತಿಯು ಡ್ರಮ್ ಬ್ರೇಕ್ ಮತ್ತು ಸೆಲ್ಫ್ ಸ್ಟಾರ್ಟ್ ಸಿಸ್ಟಮ್ ಆಯ್ಕೆಯಲ್ಲಿ ದೊರಕುತ್ತಿದೆ. ಇದರ ಎಕ್ಸ್ ಶೋರೂಂ ದರ ಸುಮಾರು 55,900 ರುಪಾಯಿ. ಹೀರೊ ಇಗ್ನಿಷನ್ ಟಾಪ್ ಎಂಡ್ ಆವೃತ್ತಿಯು ಡಿಸ್ಕ್ ಬ್ರೇಕ್ ಹೊಂದಿದ್ದು, ದೆಹಲಿ ಎಕ್ಸ್ ಶೋರೂಂ ದರ 57,900 ರುಪಾಯಿ ಇದೆ.
ನೂತನ ಇಗ್ನೈಟರ್ ಬೈಕನ್ನು ಕಂಪನಿಯು 2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು. ಹೀರೊ ಇಗ್ನೈಟರ್ ಬೈಕ್ ಕಂಪನಿಯ ಮಾಜಿ ಪಾಲುದಾರ ಹೋಂಡಾದ ಸಿಬಿಎಫ್ ಸ್ಟನ್ನರ್ ಬೈಕ್ ಮಾದರಿಯಂತಿದೆ. ಅಂದರೆ ಈ ಬೈಕ್ ಸಿಬಿಎಫ್ ನದ್ದೇ ಎಂಜಿನ್, ತಂತ್ರಜ್ಞಾನ ಹೊಂದಿದೆ. ವಿನ್ಯಾಸವೂ ಬಹುಪಾಲು ಸಿಬಿಎಫ್ ಸ್ಟನ್ನರ್ ಬೈಕಿನಂತೆ ಇದೆ.
ನೂತನ ಹೀರೊ ಇಗ್ನೈಟರ್ ಬೈಕಿನ 125 ಸಿಸಿಯ ಎಂಜಿನ್ 8 ಸಾವಿರ ಆವರ್ತನಕ್ಕೆ 11 ಹಾರ್ಸ್ ಪವರ್ ಮತ್ತು 5 ಸಾವಿರ ಆವರ್ತನಕ್ಕೆ 11 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇಗ್ನೈಟರ್ ಬೈಕ್ 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಈ ಬೈಕ್ ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಸಸ್ಪೆನ್ಷನ್ ಸಿಸ್ಟಮ್ ಹೊಂದಿದೆ.
ಹೀರೊ ಮೊಟೊಕಾರ್ಪ್ ಪರಿಚಯಿಸಿದ ನೂತನ ಇಗ್ನೈಟರ್ ಬೈಕಿನಲ್ಲಿ ಕೆಲವು ಆಕರ್ಷಕ ಫೀಚರುಗಳೂ ಇವೆ. ಅಂದರೆ ಆಕರ್ಷಕ ಟ್ರಾಪ್ ಜೊಡಿಯಲ್ ಹೆಡ್ ಲ್ಯಾಂಪ್, ಬಾಗಿದ ಸೀಟು, ಡ್ಯೂಯಲ್ ಟೋನ್ ರಿಯರ್ ವ್ಯೂ ಮಿರರ್ ಮತ್ತು ಹೊಂದಾಣಿಕೆ ಮಾಡಬಹುದಾದ ಷಾಕಅಬ್ಸರ್ಬಾರ್ ಈ ಬೈಕಿನಲ್ಲಿ ಇದೆ. ನೂತನ ಬೈಕ್ ಪರ್ಲ್ ಬಿಳಿ, ಸ್ಪೋರ್ಟ್ಸ್ ಕೆಂಪು, ವೈಬ್ರೆಂಟ್ ನೀಲಿ ಮತ್ತು ಪಂಥೇರ್ ಕಪ್ಪು ಮೆಟಾಲಿಕ್ ಬಣ್ಣಗಳ ಆಯ್ಕೆಗಳಲ್ಲಿ ಇಗ್ನೈಟರ್ ಬೈಕ್ ದೊರಕುತ್ತದೆ.
ನೂತನ ಹೀರೊ ಇಗ್ನೈಟರ್ ಬೈಕ್ ಬಜಾಜ್ ಡಿಸ್ಕವರ್ 125 ಎಸ್ ಟಿ ಬೈಕಿಗೆ ಪೈಪೋಟಿ ನೀಡಲಿದೆ. ಜೊತೆಗೆ ಟಿವಿಎಸ್ ಶೀಘ್ರದಲ್ಲಿ ಪರಿಚಯಿಸಲು ಉದ್ದೇಶಿಸಿರುವ 125 ಸಿಸಿ ಬೈಕಿಗೂ ಎದುರಾಳಿಯಾಗಲಿದೆ. ಕಂಪನಿಯು ನೂತನ ಬೈಕಿಗೆ 3 ವರ್ಷ/40 ಸಾವಿರ ಕಿ.ಮೀ. ವಾರೆಂಟಿ ಮತ್ತು ಎರಡು ವರ್ಷಗಳ ಕಾಲಕ್ಕೆ 6 ಉಚಿತ ಸರ್ವಿಸ್ ನೀಡಲಿದೆ.


Click it and Unblock the Notifications









