ದೇಶದೆಲ್ಲ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಕಡ್ಡಾಯ?
ವಾಹನ ಜಗತ್ತಿನ ಕ್ರಾಂತಿಕಾರಿ ಬೆಳವಣಿಗೆಯಲ್ಲಿ ದೇಶದೆಲ್ಲ ದ್ವಿಚಕ್ರ ವಾಹನಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಮತ್ತು ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಕಡ್ಡಾಯಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವಾಲಯವು ಕರಡು ಪತ್ರ ಸಿದ್ಧಪಡಿಸಿದೆ.
ರಸ್ತೆಗಳಲ್ಲಿ ಸಂಭವಿಸುವ ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಮೂಲಕ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವುದು ಯೋಜನೆ ಹಿಂದಿರುವ ಪ್ರಮುಖ ಗುರಿಯಾಗಿದೆ. ಭಾರತದಲ್ಲಿ ದ್ವಿಚಕ್ರ ವಾಹನ ಸವಾರಿ ಅತ್ಯಂತ ಅಪಾಯಕಾರಿಯೆನಿಸಿಕೊಂಡಿದ್ದು, ಕಳೆದ ವರ್ಷ 35,524 ಮಂದಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಅಷ್ಟೇ ಯಾಕೆ 1.27 ಲಕ್ಷಗಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದರು.

2018ರ ವೇಳೆಯಾಗುವಾಗ 125 ಸಿಸಿಗಿಂತಲೂ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಕಡ್ಡಾಯಗೊಳಿಸಲಾಗುವುದು. ಇನ್ನೊಂದೆಡೆ 125 ಗಿಂತಲೂ ಕಡಿಮೆ ಸಿಸಿಯ ಹೊಸ ದ್ವಿಚಕ್ರ ವಾಹನಗಳಿಗೆ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಜೋಡಿಸುವುದಕ್ಕೆ ಸಂಬಂಧಪಟ್ಟಂತೆ 2017 ಎಪ್ರಿಲ್ ವರೆಗೆ ಗಡುವು ನಿಗದಿಪಡಿಸಲಾಗಿದೆ.

ಎನಿದು ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ?
ಕಂಬೈನ್ಡ್ ಬ್ರೇಕ್ ಸಿಸ್ಟಂ ಮುಖಾಂತರ ಬೈಕ್ ಅಥವಾ ಸ್ಕೂಟರ್ ಮುಂದಿನ ಹಾಗೂ ಹಿಂದಿನ ಬ್ರೇಕ್‌ಗಳನ್ನು ಸಂಪರ್ಕಿಸಲಾಗುವುದು. ಇದರಂತೆ ಎರಡು ಬ್ರೇಕ್‌ಗಳು ಸಮಾನವಾಗಿ ಅನ್ವಯವಾಗಲಿದೆ. ಉದಾ:- ಹಿಂಭಾಗದ ಬ್ರೇಕ್ ಅದುವಿದರೆ ಎದುರಿನ ಬ್ರೇಕ್ ಸಹ ಬಳಕೆಯಾಗುತ್ತದೆ. ಇಲ್ಲಿ ಬ್ರೇಕ್ ಒತ್ತುವ ಪ್ರಮಾಣವನ್ನು ನಿಯಂತ್ರಣ ಕವಾಟವು (Valve) ನಿರ್ಧರಿಸುತ್ತದೆ.

ಎಬಿಎಸ್ ಎಂದರೇನು?
ಎಬಿಎಸ್ ಪೂರ್ಣ ರೂಪ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್). ಸಾಮಾನ್ಯವಾಗಿ ಹಠತ್ ಆಗಿ ಬ್ರೇಕ್ ಅದುಮಿದಾಗ ಚಕ್ರದ ಚಲನೆ ನಿಲುಗಡೆಯಾಗುತ್ತದೆ. ಚಕ್ರವನ್ನು ಬಿಗಿಯಾಗಿ ಹಿಡಿಯುವುದರಿಂದ ಹೀಗಾಗುತ್ತದೆ. ಇದರ ಪರಿಣಾಮ ಸ್ಟೀರಿಂಗ್ ಹಾಗೂ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು ಚಾಲಕರಿಗೆ ಅಪಘಾತವನ್ನು ತಪ್ಪಿಸುವ ಅವಕಾಶವಿರುವುದಿಲ್ಲ.

ಎಬಿಎಸ್ ಹೇಗೆ ಕೆಲಸ ಮಾಡುತ್ತದೆ?
ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಆಟೋ ಎಂಜಿನಿಯರ್‌ಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಎಂಬ ಬ್ರೇಕಿಂಗ್ ತಂತ್ರಜ್ಞಾನವನ್ನು ಕಂಡುಹುಡುಕಿದ್ದಾರೆ. ಇದರಂತೆ ಬ್ರೇಕ್ ಅದುಮಿದ ಸಂದರ್ಭದಲ್ಲಿ ಚಕ್ರ ಹಠಾತಿ ಆಗಿ ಬಂದ್ ಆಗುವುದಿಲ್ಲ. ಬದಲಾಗಿ ವೇಗವನ್ನು ಕಡಿತಗೊಳಿಸಿ, ತಿರುಗಿಸುತ್ತಲೇ ಇರುತ್ತದೆ. ಇದರಿಂದ ಅಪಘಾತ ಸಂದರ್ಭದಲ್ಲಿ ಸವಾರರಿಗೆ ಗಾಡಿಯ ದಿಕ್ಕನ್ನು ಬದಲಾಯಿಸುವ ಅವಕಾಶವಿರುತ್ತದೆ.

ಬೈಕ್ ಬೆಲೆ ಹೆಚ್ಚಳ?
ಭಾರತದಲ್ಲಿ ಪ್ರಯಾಣಿಕ ಬೈಕ್‌ಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ. ಹಾಗಿರುವಾಗ ಎಬಿಎಸ್‌ಗಳಂತಹ ಸುರಕ್ಷಾ ಮಾನದಂಡವನ್ನು ಕಡ್ಡಾಯಗೊಳಿಸಿದರೆ ಬೈಕ್ ಬೆಲೆ ಹೆಚ್ಚಳವಾಗಲಿದೆಯೆಂಬ ಭೀತಿ ಕಾಡುತ್ತಿದೆ. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.
ಎಬಿಎಸ್ ಕಾರ್ಯ ನಿರ್ವಹಣೆ ಹೇಗೆ - ವಿಡಿಯೋ ವೀಕ್ಷಿಸಿ?


Click it and Unblock the Notifications








