ಬಿಡುಗಡೆಗೂ ಮುನ್ನವೇ ಎಪ್ರಿಲಿಯಾ 150 ಸಿಸಿ ಸ್ಕೂಟರ್ ಬೆಲೆ ಲೀಕ್
ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿರುವ ಇಟಲಿಯ ಐಕಾನಿಕ್ ಸ್ಕೂಟರ್ ಎಪ್ರಿಲಿಯಾ ಎಸ್‌ಆರ್150, ಮುಂದಿನ ತಿಂಗಳಲ್ಲಿ ಬಿಡುಗಡೆ ಭಾಗ್ಯ ಕಾಣಲಿದೆ. ಇದರಂತೆ ಬಿಡುಗಡೆಗೂ ಮೊದಲೇ ಬೆಲೆ ಮಾಹಿತಿಗಳು ಲೀಕ್ ಆಗಿವೆ.
ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಪಿಯಾಜಿಯೊ, ಭಾರತಕ್ಕೆ ವೆಸ್ಪಾ ಬಳಿಕವೀಗ ಎಪ್ರಿಲಿಯಾ ಬ್ರಾಂಡ್ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ನೂತನ ಎಪ್ರಿಲಿಯಾ ಎಸ್‌ಆರ್150 ಕ್ರಾಸೋವರ್ ಶೈಲಿಯ ಸ್ಕೂಟರ್ ಆಗಿರಲಿದೆ.

ಇದೇ ಮೊದಲ ಬಾರಿಗೆ ಭಾರತಕ್ಕೆ ದಾಪುಗಾಲನ್ನಿಡುತ್ತಿರುವ ಎಪ್ರಿಲಿಯಾ, ದ್ವಿಚಕ್ರ ಪ್ರೇಮಿಗಳಿಗಾಗಿ ಪರಿಚಯಾತ್ಮಕ 65,000 ರು.ಗಳಲ್ಲಿ ಬಿಡುಗಡೆಗೊಳ್ಳಲಿದೆ.

ಸ್ಕೂಟರ್ ನಲ್ಲೂ ಕ್ರೀಡಾ ಬೈಕ್ ಚಾಲನಾ ಅನುಭವ ನಿಮ್ಮದಾಗಿಸಲಿರುವ ಎಪ್ರಿಲಿಯಾ ಕ್ರಾಸೋವರ್ ಶೈಲಿಯ ಸ್ಕೂಟರನ್ನು ಸಂಂಪೂರ್ಣವಾಗಿ ತವರೂರಾದ ಇಟಲಿಯಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಲಿದ್ದು, ಮಹಾರಾಷ್ಟ್ರದ ಬರಮತಿ ಘಟಕದಲ್ಲಿ ನಿರ್ಮಿಸಲಾಗುವುದು.

ಸಮಕಾಲೀನ ಯುರೋಪಿಯನ್ ವಿನ್ಯಾಸ ಮೈಗೂಡಿಸಿಕೊಂಡು ಬಂದಿರುವ ನೂತನ ಎಪ್ರಿಲಿಯಾ ಸ್ಕೂಟರ್ ನಲ್ಲಿ ಕ್ರೀಡಾತ್ಮಕ ಹಾಗೂ ಆಕ್ರಮಣಕಾರಿ ಶೈಲಿಗೆ ಆದ್ಯತೆ ಕೊಡಲಾಗಿದೆ.

ಮೊಟೊ ಜಿಪಿ ಚಾಂಪಿಯನ್ ಶಿಪ್ ಗಳಲ್ಲಿ ಕಂಡುಬರುವ ಎಪ್ರಿಲಿಯಾ ರೇಸಿಂಗ್ ಬೈಕ್ ಗಳಲ್ಲಿರುವುದಕ್ಕೆ ಸಮಾನವಾದ ದೊಡ್ಡದಾದ 14 ಇಂಚುಗಳ ಫೈವ್ ಸ್ಪೋಕ್ ಚಕ್ರಗಳು ಇದಕ್ಕೆ ಜೋಡಣೆ ಮಾಡಲಾಗಿದೆ.

ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಎಪ್ರಿಲಿಯಾ, 150 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 11.5 ಎನ್ ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಇನ್ನು ಬ್ರೇಕ್ ಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂದುಗಡೆ 220 ಎಂಎಂ ಡಿಸ್ಕ್ ಹಾಗೂ ಹಿಂಬದಿಯಲ್ಲಿ 140 ಎಂಎಂ ಡ್ರಮ್ ಬ್ರೇಕ್ ಕಂಡುಬರಲಿದೆ.

ಭಾರತದಲ್ಲಿ ಸ್ಕೂಟರ್ ವಿಭಾಗಕ್ಕೆ ಅತಿ ಹೆಚ್ಚಿನ ಬೇಡಿಕೆಯಿದ್ದು, 2015ನೇ ಸಾಲಿನಲ್ಲಿ ಒಟ್ಟು ಐದು ದಶಲಕ್ಷ ಯುನಿಟ್ ಗಳು ಮಾರಾಟವಾಗಿದೆ. ಅಷ್ಟೇ ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದಾಗ 2016ನೇ ಸಾಲಿನ ಮೊದಲಾರ್ಧದಲ್ಲಿ ಸ್ಕೂಟರ್ ವಿಭಾಗದ ಮಾರಾಟದಲ್ಲಿ ಶೇಕಡಾ 20ರಷ್ಟು ಏರಿಕೆಯನ್ನು ದಾಖಲಿಸಿದೆ.


Click it and Unblock the Notifications








