2016 ಆಟೋ ಎಕ್ಸ್ ಪೋದಲ್ಲಿ ಇಂಡಿಯನ್ ಬೈಕ್‌ಗಳ ಅಬ್ಬರ!
ಕ್ಲಾಸಿಕ್ ವಿನ್ಯಾಸದ ದೈತ್ಯಕಾರಾದ ಇಂಡಿಯನ್ ಬೈಕ್ ಗಳನ್ನು ಓಡಿಸುವುದು ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸಾಗಿರುತ್ತದೆ. ಹೀಗೆ ದೇಶ ನಿವಾಸಿಗಳ ಬಯಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇಂಡಿಯನ್ ಮೋಟಾರ್ ಸೈಕಲ್, 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪಾದಾರ್ಪಣೆಗೈದಿದೆ.
2016 ಆಟೋ ಎಕ್ಸ್ ಪೋದಲ್ಲಿ ಎರಡು ಐಕಾನಿಕ್ ಬೈಕ್ ಗಳನ್ನು ಇಂಡಿಯನ್ ಮೋಟಾರ್ ಸೈಕಲ್ ಪ್ರದರ್ಶನಕ್ಕಿರಿಸಿತ್ತು. ಅವುಗಳೆಂದರೆ,
- ಇಂಡಿಯನ್ ರೋಡ್ ಮಾಸ್ಟರ್ ಮತ್ತು
- ಇಂಡಿಯನ್ ಚೀಫ್ ಕ್ಲಾಸಿಕ್

ಅಕ್ಷರಶ: ವಾಹನ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಇಂಡಿಯನ್ ಮೋಟಾರ್ ಸೈಕಲ್ ಅಬ್ಬರಿಸಿದೆ. ಈ ಎರಡು ಬೈಕ್ ಗಳು ಪರಿಷ್ಕೃತ ವಿನ್ಯಾಸ ಹಾಗೂ ನೋಟವನ್ನು ಪಡೆದಿತ್ತು.
ಇಂಡಿಯನ್ ರೋಡ್ ಮಾಸ್ಟರ್ ಮತ್ತು ಚೀಫ್ ಕ್ಲಾಸಿಕ್ ಶಕ್ತಿಶಾಲಿ 1811 ಸಿಸಿ ಥಂಡರ್ ಸ್ಟ್ರೋಕ್ 111 ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 2600 ಆರ್‌ಪಿಎಂನಲ್ಲಿ 138.9 ಎನ್‌ಎಂ ತಿರುಗುಬಲವನ್ನು ಉತ್ಪಾದಿಸುತ್ತದೆ.

ಲೆಥರ್ ಸೀಟು, ಕೀಲೆಸ್ ಇಗ್ನಿಷನ್, ಎಲ್‌ಇಡಿ ಬೆಳಕು, ಆಡಿಯೋ ಸಿಸ್ಟಂ, ಬ್ಲೂಟೂತ್ ಕನೆಕ್ಟಿವಿಟಿ, ರಿಮೋಟ್ ಲಾಕಿಂಗ್, ಸ್ಯಾಡಲ್ ಬ್ಯಾಗ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ವಿಂಡ್ ಸ್ಕ್ರೀನ್ ಹೀಗೆ ಹತ್ತು ಹಲವಾರು ವೈಶಿಷ್ಟ್ಯಗಳನ್ನು ಇಂಡಿಯನ್ ಬೈಕ್ಸ್ ಪಡೆದುಕೊಂಡಿರುತ್ತದೆ.
ಬೃಹತ್ತಾದ 20.8 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿರುವ ಇಂಡಿಯನ್ ಬೈಕ್ಸ್ ಗಳು ಪರಿಪೂರ್ಣ ಕ್ರೂಸರ್ ಚಾಲನಾ ಅನುಭವವನ್ನು ನೀಡಲಿದೆ. ಅಂತೆಯೇ 639 ಕೆ.ಜಿ ತೂಕದ ಈ ಬೈಕ್ 35ರಿಂದ 40 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.
ಇದೇ ಸಂದರ್ಭದಲ್ಲಿ ಪೊಲರಿಸ್ ಅಧೀನತೆಯಲ್ಲಿರುವ ಇಂಡಿಯನ್ ಮೋಟಾರ್ ಸೈಕಲ್, ಇಂಡಿಯನ್ ಚೀಫ್ ಡಾರ್ಕ್ ಹಾರ್ಸ್, ಚೀಫ್ ವಿಂಟೇಜ್, ಇಂಡಿಯನ್ ಸ್ಕೌಟ್ ಮತ್ತು ಚೀಫ್ಟೈನ್ ಮಾದರಿಗಳನ್ನು ಪ್ರದರ್ಶಿಸಿದ್ದವು.


Click it and Unblock the Notifications


























