ಎಕ್ಸ್‌ಕ್ಲೂಸಿವ್; ಬಜಾಜ್ 400 ಸಿಸಿ ಬೈಕ್ ಹೆಸರು, ಬಿಡುಗಡೆ ವಿವರ ಇಲ್ಲಿದೆ
ಕೊನೆಗೂ ಬಜಾಜ್ 400 ಸಿಸಿ ಬೈಕ್ ಬಿಡುಗಡೆ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಭಾರಿ ಕುತೂಹಲ ಮೂಡಿಸಿರುವ ಬಜಾಜ್ 400 ಸಿಸಿ ಬೈಕ್ ಹೆಸರು ಕೊನೆಗೂ ಅಂತಿಮಗೊಂಡಿದೆ. ಅತಿ ನೂತನ ಬಜಾಜ್ 400 ಸಿಸಿ ಬೈಕ್ 'ಡೊಮಿನರ್ 400' ಎಂದು ಹೆಸರಿಸಿಕೊಳ್ಳಲಿದ್ದು, 2016 ಡಿಸೆಂಬರ್ 15ರಂದು ಬಿಡುಗಡೆ ಭಾಗ್ಯ ಕಾಣಲಿದೆ.

ಬಜಾಜ್ ಡೊಮಿನರ್ 400 ಕ್ರೀಡಾ ಬೈಕ್ ಬಿಡುಗಡೆಯನ್ನು ಖಚಿತಪಡಿಸಿರುವ ಬಜಾಜ್ ಆಟೋ ಮೋಟಾರ್ ಸೈಕಲ್ ವಿಭಾಗದ ಅಧ್ಯಕ್ಷ ಎರಿಕ್ ವ್ಯಾಸ್, ನೂತನ ಬಜಾಜ್ ಹೆಸರನ್ನು ಘೋಷಿಸಲು ಅತ್ಯಂತ ಹರ್ಷವಾಗುತ್ತಿದೆ ಎಂದಿದ್ದಾರೆ.

ಬಜಾಜ್ ಡೊಮಿನರ್ 400 ಈಗಾಗಲೇ ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ. ತನ್ಮೂಲಕ ಎಂಟ್ರಿ ಲೆವೆಲ್ ವಿಭಾಗದಿಂದ ಹೆಚ್ಚು ಶಕ್ತಿಶಾಲಿ ವಿಭಾಗಕ್ಕೆ ಬಜಾಜ್ ಕಾಲಿಡುತ್ತಿದೆ.

ಕ್ರೂಸರ್ ಸ್ಪೋರ್ಟ್ ಮೋಟಾರ್ ಸೈಕಲ್ ಆಗಿರುವ ಬಜಾಜ್ ಡೊಮಿನರ್ 400, ಅತ್ಯುತ್ತಮ ನಿರ್ವಹಣೆ ಜೊತೆಗೆ ಟೂರಿಂಗ್ ಅನುಕೂಲಕತೆಯನ್ನು ಕಾಪಾಡಿಕೊಳ್ಳಲಿದೆ.

ಸ್ಪಾನಿಶ್ ಪದ ಡೊಮಿನರ್ ಎಂಬುದು ಮೀರಿಸು ಅಥವಾ ಉತ್ಕೃಷ್ಟ ಶಕ್ತಿಯ ಅರ್ಥವನ್ನು ನೀಡುತ್ತಿದೆ.

ಪುಣೆ ತಳಹದಿಯ ಜನಪ್ರಿಯ ಬಜಾಜ್ ನಿರ್ಮಿಸುತ್ತಿರುವ ನೂತನ ಡೊಮಿನರ್ ಎರಡು ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುತ್ತಿರುವುದು ಗಮನಾರ್ಹವೆನಿಸುತ್ತದೆ.

ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಜೊತೆಗೆ ಮಹೀಂದ್ರ ಮೊಜೊ ಮತ್ತು ಕೆಟಿಎಂ ಡ್ಯೂಕ್ 200 ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಇದಕ್ಕೂ ಮೊದಲು ನವೆಂಬರ್ 18ರಂದು ಡೊಮಿನರ್ 400 ಚೊಚ್ಚಲ ಬೈಕನ್ನು ಘಟನ್ ಘಟಕದಲ್ಲಿ ಮಹಿಳಾ ಎಂಜಿನಿಯರ್ ಗಳ ಸಾರಥ್ಯದಲ್ಲಿ ಹೊರತರಲಾಗಿತ್ತು.

373.2 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಲ್ಪಡುವ ಬಜಾಜ್ ಡೊಮಿನರ್ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಹೊಂದಿರುತ್ತದೆ.

ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಮತ್ತು ಮೊನೊಶಾಕ್ ರಿಯರ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಹೊಂದಿರಲಿದೆ. ಇದರ ಜೊತೆಗೆ ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ಸೌಲಭ್ಯವೂ ಇರುತ್ತದೆ.

ನೂತನ ಬಜಾಜ್ ಡೊಮಿನರ್ 400 ಬೈಕ್ ವಿತರಣೆ ಪ್ರಕ್ರಿಯೆಯು ಜನವರಿ ತಿಂಗಳಲ್ಲಿ ಆರಂಭವಾಗಲಿದೆ. ಈ ಮೂಲಕ ಹೊಸ ವರ್ಷಕ್ಕೆ ದೊಡ್ಡ ಉಡುಗೊರೆಯನ್ನು ನೀಡಲಿದೆ.

2014 ಆಟೋ ಎಕ್ಸ್ ಪೋದಲ್ಲಿ ಬಜಾಜ್ ಕ್ರೂಸರ್ ಸ್ಪೋರ್ಟ್ 400 ಬೈಕ್ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ತದಾ ಬಳಿಕ ವ್ಯಾಂಟೇಜ್ ಸ್ಪೋರ್ಟ್ 400 ಹಾಗೂ ಕ್ರೆಟೊಸ್ 400 ಎಂದು ಹೆಸರಿಸಿಕೊಂಡರೂ ಕೊನೆಗೆ ಡೊಮಿನರ್ ನಲ್ಲಿ ಅಂತ್ಯ ಕಂಡಿದೆ.


Click it and Unblock the Notifications








