ಮಹಿಳೆಯರ ಸಾನಿಧ್ಯದಲ್ಲಿ ಹೊರಬಂದ ಬಜಾಜ್ ಪಲ್ಸರ್ 400 ಸಿಸಿ ಬೈಕ್; ಹೆಸರು ಇನ್ನೂ ನಿಗೂಢ!
ಬಜಾಜ್ ಪಲ್ಸರ್ 400 ಸಿಸಿ ಬೈಕ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಹೆಸರು ಇನ್ನೂ ನಿಗೂಢವಾಗಿದೆ.
ಮಹಾರಾಷ್ಟ್ರದಲ್ಲಿ ಸ್ಥಿತಗೊಂಡಿರುವ ಬಜಾಜ್ ಆಟೋ ಘಟಕದಲ್ಲಿ ಬಹುನಿರೀಕ್ಷಿತ ಪಲ್ಸರ್ 400 ಸಿಸಿ ಬೈಕ್ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದೆ. ಇಲ್ಲಿ ಕಂಡುಬಂದಿರುವ ವಿಶೇಷ ಅಂಶವೆಂದರೆ ಮಹಿಳಾ ಎಂಜಿನಿಯರ್ ಗಳೇ ಬಜಾಜ್ ಪಲ್ಸರ್ ಚೊಚ್ಚಲ 400 ಸಿಸಿ ಬೈಕ್ ಹೊರತರುವ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಆದರೆ ನೂತನ ಬೈಕ್ ನ ಹೆಸರು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಬಜಾಜ್ ಪಲ್ಸರ್ ನೂತನ 400 ಸಿಸಿ ಬೈಕ್ ಕ್ರೆಟೊಸ್ ಎಂಬುದಾಗಿ ಹೆಸರಿಸಿಕೊಂಡರೂ ಕೃತಿಸ್ವಾಮ್ಯ ಸಮಸ್ಯೆಯ ಹಿನ್ನಲೆಯಲ್ಲಿ ಹೆಸರು ಬದಲಾಯಿಸುವುದು ಅನಿವಾರ್ಯವೆನಿಸಿದೆ.

ಬಜಾಜ್ ಪಲ್ಸರ್ ನೂತನ 400 ಸಿಸಿ ಬೈಕ್ ಮುಂದಿನ ತಿಂಗಳ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗಲಿದೆ. ಇದರಂತೆ ಘಟಕದಿಂದ ಚೊಚ್ಚಲ ಬೈಕ್ ಹೊರಬಿಡಲಾಗಿದೆ.

ಸಂಸ್ಥೆಯ ಪಾಲಿಗೆ ಇದೊಂದು ಐತಿಹಾಸಕ ಮುಹೂರ್ತವಾಗಿದ್ದು, 15 ವರ್ಷಗಳ ಹಿಂದೆ ಅಂದರೆ 2001 ನವೆಂಬರ್ ತಿಂಗಳಲ್ಲೇ ಚೊಚ್ಚಲ ಪಲ್ಸರ್ ಬೈಕ್ ಬಿಡುಗಡೆಗೊಳಿಸಲಾಗಿತ್ತು.

ನೂತನ ಬೈಕ್ ನಲ್ಲಿರುವ ವೈಶಿಷ್ಟ್ಯ, ವಿಶಿಷ್ಟತೆಗಳ ಬಗ್ಗೆ ತಿಳಿದುಕೊಳ್ಳಲುವ ವಾಹನ ಪ್ರೇಮಿಗಳು ಅತೀವ ಕುತೂಹಲ ಭರಿತರಾಗಿದ್ದಾರೆ. ಇದು ದೇಶದಲ್ಲಿ ಹೆಚ್ಚಿನ ಸದ್ದು ಮಾಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಬಿಎಂಡಬ್ಲ್ಯು ಮತ್ತು ಟಿವಿಎಸ್ ಮುಂಬರುವ ಬೈಕ್ ಗಳ ಜೊತೆಗೆ 2017 ಡ್ಯೂಕ್ 390 ಮಾದರಿಗಳಿಗೆ ನೂತನ ಪಲ್ಸರ್ ಬೈಕ್ ಪ್ರತಿಸ್ಪರ್ಧಿಯಾಗಲಿದೆ.

ಇದುವರೆಗೆ ಎರಡು ಬಾರಿ ಹೆಸರನ್ನು ಬದಲಾಯಿಸಲಾಗಿದೆ. ಈ ಹಿಂದೆ ಪಲ್ಸರ್ ಸಿಎಸ್400 ಎಂದು ಹೆಸರಿಸಿಕೊಂಡಿದ್ದ ಬಜಾಜ್ ಪಲ್ಸರ್ 400 ಸಿಸಿ ಬೈಕ್ ಬಳಿಕ ಕ್ರೆಟೊಸ್ ವಿಎಸ್400 ಎಂದು ಗುರುತಿಸಿಕೊಂಡಿತ್ತು.

ಬಜಾಜ್ ಪಲ್ಸರ್ 400 ಸಿಸಿ ಬೈಕ್ ಹೆಸರು ಇನ್ನೂ ನಿಗೂಢವಾಗಿದ್ದರೂ ಬಲ್ಲ ಮೂಲಗಳ ಪ್ರಕಾರ ನೂತನ ಬೈಕ್ 'ಡೊಮಿನರ್ 400' ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದೆ.

ಡಿಸೆಂಬರ್ ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆಯನ್ನು ತಲುಪಲಿರುವ ಬಜಾಜ್ ಪಲ್ಸರ್ ಹೊಸ ಬೈಕ್, ಕೆಟಿಎಂ ಡ್ಯೂಕ್ 390 ಬೈಕ್ ನಲ್ಲಿರುವದಕ್ಕೆ ಸಮಾನವಾದ 373.27 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 34.50 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇನ್ನು ಕೆಟಿಎಂನಲ್ಲಿರುವುದಕ್ಕೆ ಸಮಾನವಾದ ಸ್ಲಿಪರ್ ಕ್ಲಚ್ ಗಿಟ್ಟಿಸಿಕೊಳ್ಳಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಇದರಲ್ಲಿರುತ್ತದೆ. ಸ್ಲಿಪ್ಪರ್ ಕ್ಲಚ್ ವ್ಯವಸ್ಥೆಯನ್ನು ಪ್ರಮುಖವಾಗಿಯೂ ನಿರ್ವಹಣಾ ಬೈಕ್ ಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕ್ಲಚ್ ಬದಲಾಯಿಸುವಾಗ ಎಂಜಿನ್ ನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್, ಟೆಲಿಸ್ಕಾಪಿಕ್ ಫಾರ್ಕ್, ಡ್ಯುಯಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಇತ್ಯಾದಿ ವ್ಯವಸ್ಥೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ ಇಡಿ ಟೈಲ್ ಲೈಟ್ಸ್, ಸೆಲ್ಫ್ ಕ್ಯಾನ್ಸಲಿಂಗ್ ಟರ್ನ್ ಸಿಗ್ನಲ್ ಮುಂತಾದ ವಿಶಿಷ್ಟತೆಗಳನ್ನು ಪಡೆಯಲಿದೆ.

ಅಂತಿಮವಾಗಿ ಬೆಲೆಯ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ 400 ಸಿಸಿ ಬೈಕ್ ಮಾರುಕಟ್ಟೆಯಲ್ಲಿ 1.6 ಲಕ್ಷ ರು.ಗಳಿಂದ 1.7 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.


Click it and Unblock the Notifications








