ಬಜಾಜ್ ಪ್ಲಾಟಿನಾ ಕಂಫರ್ಟೆಕ್ ಬಿಡುಗಡೆ; ಮೈಲೇಜ್ 104
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ, ಸದ್ದಿಲ್ಲದೆ ತನ್ನ ಜನಪ್ರಿಯ ಪ್ಲಾಟಿನಾ ಆವೃತ್ತಿಯ ಅತಿ ನೂತನ ಕಂಫರ್ಟೆಕ್ (Comfortec) ಮಾದರಿಯನ್ನು ಬಿಡುಗಡೆಗೊಳಿಸಿದೆ.
ಇದೀಗಷ್ಟೇ ತನ್ನ ಅವೆಂಜರ್ ಶ್ರೇಣಿಯ ಬೈಕ್ ಗಳಿಗೆ ಬಜಾಜ್ ಹೊಸ ಬಣ್ಣಗಳ ಆಯ್ಕೆಯನ್ನು ನೀಡಲಾಗಿತ್ತು. ಇದರ ಬೆನ್ನಲ್ಲೇ ಹೆಸರಲ್ಲೇ ಸೂಚಿಸಿರುವಂತೆಯೇ ಕಂಫರ್ಟೆಕ್ ಬೈಕನ್ನು ಬಿಡುಗಡೆಗೊಳಿಸಿದೆ.

ಪ್ರಯಾಣಿಕ ಬೈಕ್ ವಿಭಾಗದಲ್ಲಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡಿರುವ ಬಜಾಜ್ ಕಂಫರ್ಟೆಕ್ ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸಲಿದೆ.

ಬಜಾಜ್ ಪ್ಲಾಟಿನಾ ಕಂಫರ್ಟೆಕ್ ಎರಡು ವೆರಿಯಂಟ್ ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಪ್ಲಾಟಿನಾ 100 ಅಲಾಯ್ ಇಎಸ್ ಹಾಗೂ ಪ್ಲಾಟಿನಾ 100 ಅಲಾಯ್ ಕೆಎಸ್ ಮಾದರಿಗಳು ಕರ್ನಾಟಕ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 43,289 ಹಾಗೂ 45,337 ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಆರಾಮದಾಯಕತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಇತರೆ 100 ಸಿಸಿ ಮೋಟಾರ್ ಸೈಕಲ್ ಗಳನ್ನು ಹೋಲಿಸಿದಾಗ ನೂತನ ಪ್ಲಾಟಿನಾ ಕಂಫರ್ಟೆಕ್ ಮಾದರಿಯು ಶೇಕಡಾ 28ರಷ್ಟು ಉದ್ದವಾದ ಫ್ರಂಟ್ ಸಸ್ಪೆನ್ಷನ್ ಹಾಗೂ ಡಬಲ್ ಸ್ಪ್ರಿಂಗ್ ರಿಯರ್ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಪಡೆದುಕೊಂಡಿದೆ.

ಇದಲ್ಲದೆ ಸ್ಪ್ರಿಂಗ್ ಸಾಫ್ಟ್ ಸೀಟು, ರಬ್ಬರ್ ಫೂಟ್ ಪ್ಯಾಡ್ ವ್ಯವಸ್ಥೆಯು ಇದರಲ್ಲಿದ್ದು, ತನ್ನ ಪ್ರತಿಸ್ಪರ್ಧಿಗಿಂತಲೂ ಶೇಕಡಾ 20ರಷ್ಟು ಹೆಚ್ಚು ಸೆಳೆತ ನಿರೋಧಕವಾಗಿ ಕೆಲಸ ಮಾಡಲಿದೆ.

102 ಸಿಸಿ ಡಿಟಿಎಸ್-ಐ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಪ್ಲಾಟಿನಾ ಕಂಫರ್ಟೆಕ್, 8.6 ಎನ್ ಎಂ ತಿರುಗುಬಲದಲ್ಲಿ 8.2 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಮುಖಾಂತರ ಪವರ್ ವಿತರಣೆಯಾಗಲಿದೆ.

ಭಾರತೀಯ ವಾಹನ ಅಧ್ಯಯನ ಮಾನ್ಯತೆಯ ಪ್ರಕಾರ ಬಜಾಜ್ ಪ್ಲಾಟಿನಾ ಕಂಫರ್ಟೆಕ್ ಪ್ರತಿ ಲೀಟರ್ ಗೆ 104 ಕೀ.ಮೀ. ಮೈಲೇಜ್ ನೀಡಲಿದೆ.
ಬಣ್ಣಗಳು: ಕೆಂಪು, ಕಪ್ಪು, ನೀಲಿ.


Click it and Unblock the Notifications