ಬರುತ್ತಿದೆ ಬಜಾಜ್ ವಿ15 ತಳಹದಿಯಲ್ಲಿ ವಿ12 ಪ್ರಯಾಣಿಕ ಬೈಕ್
ವಿ15 ಯಶಸ್ಸಿನ ಬಳಿಕವೀಗ ವಿ12 ಎಂಬ ಅತಿ ನೂತನ 125 ಸಿಸಿ ಪ್ರಯಾಣಿಕ ಬೈಕ್ ಬಿಡುಗಡೆ ಮಾಡುವ ಯೋಜನೆಯನ್ನು ಬಜಾಜ್ ಹೊಂದಿದೆ.
ಐತಿಹಾಸಿಕ ಐಎನ್ ಎಸ್ ವಿಕ್ರಾಂತ್ ಹಡಗಿನ ಲೋಹದಿಂದ ನಿರ್ಮಿಸಲಾಗಿರುವ ಬಜಾಜ್ ವಿ15 ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್ ಗೆ ದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು. ದೇಶದ ಮುಂಚೂಣಿಯ ಬಜಾಜ್ ಆಟೋ ಸಂಸ್ಥೆಯು ವಿ15 ತಳಹದಿಯಲ್ಲೇ ವಿ12 ಪ್ರಯಾಣಿಕ ಬೈಕ್ ನಿರ್ಮಿಸುವ ಯೋಜನೆಯಲ್ಲಿದೆ.

ವಿ ಶ್ರೇಣಿಯಲ್ಲಿ ಮತ್ತಷ್ಟು ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಇರಾದೆಯಲ್ಲಿರುವ ಬಜಾಜ್ ಆಟೋ, ಪ್ರಯಾಣಿಕ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ವಿ12 ಬಿಡುಗಡೆ ಮಾಡಲಿದೆ.

1971ರಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಕದನದಲ್ಲಿ ಯುದ್ಧ ವಿಮಾನ ವಾಹಕವಾಗಿರುವ ಐಎನ್ ಎಸ್ ವಿಕ್ರಾಂತ್ ಯುದ್ಧನೌಕೆ ನಿರ್ಣಾಯಕ ಪಾತ್ರವಹಿಸಿತ್ತು.

ನೂತನ ವಿ12 ಬೈಕ್ ಜನಪ್ರಿಯ ಡಿಸ್ಕವರ್ ಗೆ ಸಮಾನವಾದ 124.6 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆಯಲಿದೆ. ಇದರ ಡಿಟಿಎಸ್-ಐ ಎಂಜಿನ್ 10.8 ಎನ್ ಎಂ ತಿರುಗುಬಲದಲ್ಲಿ 11 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಡಿಸ್ಕವರ್ 125 ಬೈಕ್ ನಲ್ಲಿರುವ ಎಂಜಿನ್ ಬಿಎಸ್ III ಆಗಿರುವುದರಿಂದ ಮುಂಬರುವ ಬಿಎಸ್ IV ಮಾಲಿನ್ಯ ಮಟ್ಟದ ನಿಯಮ ಜಾರಿಗೆ ಬರುವುದನ್ನು ಗಮನದಲ್ಲಿಟ್ಟುಕೊಂಡು ಬಜಾಜ್ ಆಟೋ, ಇದಕ್ಕೆ ತಕ್ಕುದಾಗಿ ಬದಲಾವಣೆ ತರುವ ಸಾಧ್ಯತೆಯಿದೆ.

ಬಲ್ಲ ಮೂಲಗಳ ಪ್ರಕಾರ 2017 ವರ್ಷಾರಂಭದಲ್ಲಿ ಬಜಾಜ್ ವಿ12 ಬೈಕ್ ಬಿಡುಗಡೆಯಾಗಲಿದೆ. ಇದು 125 ಸಿಸಿ ವಿಭಾಗದಲ್ಲಿ ಹೆಚ್ಚಿನ ಸ್ಪರ್ಧೆಗೆ ವೇದಿಕೆಯೊದಗಿಸಲಿದೆ.

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ವಿ15 ಮಾದರಿಗೆ ಸಮಾನವಾದ ಶೈಲಿಯನ್ನು ಕಾಪಾಡಿಕೊಳ್ಳಲಾಗುವುದು.

ಇನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ಬಜಾಜ್ ವಿ12, ಸರಿ ಸುಮಾರು 53,000 ರು.ಗಳಷ್ಟು ದುಬಾರಿಯೆನಿಸಲಿದೆ.

ಅಂತಿಮವಾಗಿ ಈ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟದಲ್ಲಿರುವ ಹೋಂಡಾ ಸಿಬಿ ಶೈನ್ ಮತ್ತು ಹೀರೊ ಗ್ಲಾಮರ್ ಸವಾಲನ್ನು ನೂತನ ಬಜಾಜ್ ವಿ12 ಬೈಕ್ ಎದುರಿಸಲಿದೆ.

ಇದಕ್ಕೂ ಮೊದಲು ಪ್ರಸ್ತಕ ಸಾಲಿನಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿತ್ತು. ಆದರೆ ಬಹುನಿರೀಕ್ಷಿತ 400 ಸಿಸಿ ಬೈಕ್ ಆಗಮನದ ಹಿನ್ನಲೆಯಲ್ಲಿ ವಿ12 ಬಿಡುಗಡೆ ವಿಳಂಬವಾಗಿದೆ.


Click it and Unblock the Notifications








