ಬಜಾಜ್ 'ವಿ12' 125 ಸಿಸಿ ಬೈಕ್ ಬಿಡುಗಡೆ, ಬೆಲೆ ಬಗ್ಗೆ ಸಂಪೂರ್ಣ ಮಾಹಿತಿ
ಮುಂದಿನ ಡಿಸೆಂಬರ್ ತಿಂಗಳಲ್ಲಿ ಬಜಾಜ್ ವಿ12 ಬೈಕನ್ನು ಬಿಡುಗಡೆಗೊಳಿಸಲಿದೆ.
ದೇಶದ ಬೈಕ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಮಗದೊಂದು ಬೈಕ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸಂಬಂಧ ಊಹಾಪೋಹಗಳಿಗೆ ತೆರೆ ಎಳೆದಿರುವ ಬಜಾಜ್ ಆಟೋ ಸಂಸ್ಥೆಯು ಮುಂದಿನ ತಿಂಗಳಲ್ಲಿ ಬಹು ನಿರೀಕ್ಷಿತ 'ವಿ12' ಬೈಕ್ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ಐಕಾನಿಕ್ ವಿಕ್ರಾಂತ್ ಯುದ್ಧ ಹಡಗಿನಿಂದ ನಿರ್ಮಾಣಗೊಂಡಿರುವ ವಿ15 ತಳಹದಿಯಲ್ಲೇ ಈ 125 ಸಿಸಿ ವಿ12 ಪ್ರಯಾಣಿಕ ಬೈಕ್ ನಿರ್ಮಿಸಲಾಗಿದೆ.

ನೂತನ ಬಜಾಜ್ ವಿ12 ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 56,200 ರು.ಗಳಷ್ಟು ದುಬಾರಿಯೆನಿಸಲಿದೆ. ಈ ವಿಭಾಗದಲ್ಲಿ ಪ್ರತಿಸ್ಪರ್ಧಿಗಳ ಬೆಲೆ ಹೋಲಿಸಿದಾಗ ಭಾರಿ ಬೆಲೆ ಕಡಿತ ಕಂಡುಬಂದಿದೆ.

ಬಜಾಜ್ ಆಟೋ ಏರ್ಪಡಿಸಿದ್ದ 'ಇನ್ವಿಸಿಬಲ್ ಇಂಡಿಯನ್ಸ್' ಕಾರ್ಯಕ್ರಮದಲ್ಲಿ ಈ ಎಲ್ಲ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ವೇಳೆಯಲ್ಲಿ ದೇಶಕ್ಕೆ ಹೆಮ್ಮೆಯಾಗಿರುವ ಐದು ವ್ಯಕ್ತಿಗಳನ್ನು ಗೌರವಿಸಲಾಯಿತು.

ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾಗಿಯಾಗಿದ್ದ ಐಎನ್ ಎಸ್ ವಿಕ್ರಾಂತ್ ಲೋಹದಿಂದಲೇ ವಿ12 ಸಹ ತಯಾರಿಸಲಾಗುವುದು. ಇಲ್ಲಿ ಸಣ್ಣ ಪ್ರಮಾಣದ ಲೋಹವನ್ನಷ್ಟೇ ಯುದ್ಧ ಹಡಗಿನ ಪ್ರತೀಕವಾಗಿ ಬಳಕೆ ಮಾಡಲಾಗುವುದು.

ಬಜಾಜ್ ವಿ12 ಪ್ರಯಾಣಿಕ ಬೈಕ್ ನಿರ್ಮಾಣ ಪ್ರಕ್ರಿಯೆಗೆ ಆಗಲೇ ಚಾಲನೆ ನೀಡಲಾಗಿದ್ದು, ಡಿಸೆಂಬರ್ ನಲ್ಲಿ ಬಿಡುಗಡೆಯ ಬಳಿಕ ವಿತರಣೆಯು ಆರಂಭವಾಗಲಿದೆ.

ವಿ15 ಮಾದರಿಗೆ ಸಮಾನವಾದ ರೀತಿಯಲ್ಲಿ ಬಜಾಜ್ ವಿ12 ಬೈಕ್ 125 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಇನ್ನು ಶೈಲಿಯಿಂದ ಹಿಡಿದು ಬಹುತೇಕ ಬಿಡಿಭಾಗಗಳನ್ನು ತನ್ನ ಹಿರಿಯ ಸೋದರನೊಂದಿಗೆ ಹಂಚಿಕೊಳ್ಳಲಿದೆ. ಇದು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ನೆರವಾಗಲಿದೆ.

2016 ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಬಜಾಜ್ ವಿ15 ಬೈಕ್ ಗೆ ಅಭೂತಪೂರ್ವ ಪ್ರತಿಕ್ರಿಯೆ ದೊಕಿತ್ತಲ್ಲದೆ ಇದುವರೆಗೆ 1.6 ಲಕ್ಷಕ್ಕೂ ಹೆಚ್ಚು ಯುನಿಟ್ ಗಳು ಮಾರಾಟಗೊಂಡಿದೆ.

125 ಸಿಸಿ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟದಲ್ಲಿರುವ ಹೋಂಡಾ ಸಿಬಿ ಶೈನ್ ಮತ್ತು ಹೀರೊ ಗ್ಲಾಮರ್ ಸವಾಲನ್ನು ನೂತನ ಬಜಾಜ್ ವಿ12 ಬೈಕ್ ಎದುರಿಸಲಿದೆ.


Click it and Unblock the Notifications








