ಬೇರ್ಪಟ್ಟ ಐದು ವರ್ಷಗಳಲ್ಲೇ ಹೀರೊಗೆ ಹೋಂಡಾ ಪ್ರಬಲ ಪೈಪೋಟಿ
ಹೀರೊ-ಹೋಂಡಾ ಜುಗಲ್ ಬಂಧಿ ಬೇರ್ಪಟ್ಟು ಇದೀಗ ಐದು ವರ್ಷಗಳೇ ಸಂದಿವೆ. ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಿರುವ ಹೀರೊ ಮತ್ತು ಹೋಂಡಾ ಸಂಸ್ಥೆಗಳು ಈಗ ತನ್ನದೇ ಆದ ತಳಹದಿಯಲ್ಲಿ ಮಾರಾಟ ಕುದುರಿಸಿಕೊಳ್ಳುತ್ತಿದೆ.
ಭಾರತ ಮೂಲದ ಹೀರೊ ಜೊತೆಗಿನ ಜೊತೆಗಾರಿಕೆ ಬೇರ್ಪಟ್ಟ ಬಳಿಕ ತನ್ನದೇ ಶ್ರೇಣಿಯ ವಾಹನಗಳನ್ನು ಬಿಡುಗಡೆಗೊಳಿಸುತ್ತಿರುವ ಹೋಂಡಾ, ಕಳೆದ ಕೆಲವು ವರ್ಷಗಳಲ್ಲಿ ಗಮನಾರ್ಹ ಮಾರಾಟವನ್ನು ಸಾಧಿಸಿದ್ದು, ಹೀರೊಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ.

ವಾಹನ ವಿಶ್ಲೇಷಕರ ಪ್ರಕಾರ 2010-11ರಿಂದ 2015-16ರ ಅವಧಿಯಲ್ಲಿ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಮಾರುಕಟ್ಟೆ ಶೇರು ದ್ವಿಗುಣಗೊಂಡು, ಶೇಕಡಾ 26ಕ್ಕೆ ತಲುಪಿದೆ.

ಇದೇ ಅವಧಿಯಲ್ಲಿ ಹೀರೊ ಮೊಟೊಕಾರ್ಪ್ ಶೇರುಗಳು ಶೇಕಡಾ 4.75ರಷ್ಟು ಇಳಿಯಾಗಿ ಶೇಕಡಾ 38.95ಕ್ಕೆ ಬಂದು ನಂತಿದೆ. ಇದು ಕಳೆದ ಎರಡು ದಶಕಗಳಲ್ಲೇ ಅತಿ ಕಳಪೆ ಪ್ರದರ್ಶನವಾಗಿದೆ.

ಇನ್ನೊಂದೆಡೆ ಪುಣೆ ತಳಹದಿಯ ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ ನಿರ್ಮಾಣ ಮಾಡುತ್ತಿರುವ ಬಜಾಜ್ ಆಟೋ ಮಾರುಕಟ್ಟೆ ಶೇರುಗಳು ಶೇಕಡಾ 11.49ರಷ್ಟಿದೆ. ಆದರೆ ಬಜಾಜ್ ಯಾವುದೇ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿಲ್ಲ ಎಂಬುದು ಗಮನಾರ್ಹ.

ಭಾರತೀಯ ವಾಹನ ತಯಾರಕ ಸಂಸ್ಥೆಗಳ ಒಕ್ಕೂಟವು (ಸಿಯಾಮ್) ಈ ವರದಿಯನ್ನು ಬಿಡುಗಡೆ ಮಾಡಿದೆ. ಅಂತೆಯೇ ಚೆನ್ನೈ ತಳಹದಿಯ ಟಿವಿಎಸ್ ಮೋಟಾರು ಕಂಪನಿ ಮಾರುಕಟ್ಟೆ ಶೇರುಗಳಲ್ಲಿ ಏರಿಳಿತಗಳನ್ನು ಕಂಡು 2015-16ರ ವೇಳೆಯಾಗುವಾಗ ಶೇಕಡಾ 13.4ಕ್ಕೆ ತಲುಪಿದೆ. ಈ ಮೂಲಕ ಹೀರೊ, ಹೋಂಡಾ ಬಳಿಕ ದೇಶದ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯೆನಿಸಿದೆ.

ಒಟ್ಟಾರೆಯಾಗಿ ದೇಶದ ದ್ವಿಚಕ್ರ ವಾಹನ ವಿಭಾಗವು ವಾರ್ಷಿಕವಾಗಿ 11.79 ಮಿಲಿಯನ್ ಯುನಿಟ್ ಗಳಿಂದ 18 ದಶಲಕ್ಷಕ್ಕೆ ಬಂದು ತಲುಪಿದ್ದು, 2026ರ ವೇಳೆಯಾಗುವಾಗ 55 ದಶಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ನಿಮ್ಮ ಮಾಹಿತಿಗಾಗಿ, 2011ರಲ್ಲಿ ತನ್ನ ಶೇರುಗಳನ್ನು ಹೀರೊ ಸಂಸ್ಥೆಗೆ ಹೋಂಡಾ ಮಾರಾಟಗೊಳಿಸಿತ್ತು. ಇದರೊಂದಿಗೆ ದೇಶದ ಮಾರುಕಟ್ಟೆಯಲ್ಲಿ 26 ವರ್ಷಗಳ ಜುಗಲ್ ಬಂಧಿಗೆ ಬ್ರೇಕ್ ಬಿದ್ದಿತ್ತು. ಇದೀಗ ಎರಡು ಸಂಸ್ಥೆಗಳು ಪ್ರಯಾಣಿಕ ಬೈಕ್ ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟವನ್ನು ಕಾಯ್ದುಕೊಂಡಿದೆ.


Click it and Unblock the Notifications








