ಅತಿ ನೂತನ ರಾಯಲ್ ಎನ್‌ಫೀಲ್ಡ್ 750 ಸಿಸಿ ಎಂಜಿನ್ ಟೆಸ್ಟಿಂಗ್ ಅಬ್ಬರ
ಬೈಕ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ದೇಶದ ಅಗ್ರ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ರಾಯಲ್ ಎನ್ ಫೀಲ್ಡ್, ಅತಿ ನೂತನ 750 ಸಿಸಿ ಟ್ವಿನ್ ಸಿಲಿಂಡರ್ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಭರದಿಂದ ನಡೆಸುತ್ತಿದೆ.
ಕಳೆದ ಕೆಲವು ಸಮಯಗಳಿಂದ ಚೆನ್ನೈ ತಳಹದಿಯ ರಾಯಲ್ ಎನ್ ಫೀಲ್ಡ್ ನೂತನ ಎಂಜಿನ್ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದು, ಈ ನಡುವೆ ಪರಿವರ್ತಿತ ಕಾಂಟಿನೆಂಟಲ್ ಜಿಟಿ ಬೈಕ್ ನಲ್ಲಿ ಟೆಸ್ಟಿಂಗ್ ಅಬ್ಬರದ ವೇಳೆ ಸೆರೆ ಹಿಡಿಯಲಾಗಿದೆ.

ರಾಯಲ್ ಎನ್ ಫೀಲ್ಡ್ ನೂತನ 750 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ನಲ್ಲಿ ಕಂಡುಬಂದಿರುವ ಗಮನಾರ್ಹ ಅಂಶವೆಂದರೆ ಫ್ಯೂಯಲ್ ಇಂಜೆಕ್ಟಡ್ ಬದಲು ಕಾರ್ಬ್ಯುರೇಟರ್ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ.

ಆಧುನಿಕತೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಸಾಬೀತುಪಡಿಸಿರುವ ರಾಯಲ್ ಎನ್ ಫೀಲ್ಡ್ ಬಹಳ ವರ್ಷಗಳ ಬಳಿಕ ಹೊಸತೊಂದು ಎಂಜಿನ್ ಅಭಿವೃದ್ಧಿಯತ್ತ ಗಮನ ಹರಿಸಿದೆ.

ದೇಶದಲ್ಲಿ 4.5 ಲಕ್ಷ ಯುನಿಟ್ ಗಳ ಮಾರಾಟವನ್ನು ಕಾಪಾಡಿಕೊಂಡಿರುವ ರಾಯಲ್ ಎನ್ ಫೀಲ್ಡ್ ಪಾಲಿಗೆ ಭಾರತ ನಿರ್ಣಾಯಕವೆನಿಸುತ್ತದೆ.

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಹಾರ್ಲೆ ಡೇವಿಡ್ಸನ್ ಗಳಂತಹ ಅಮೆರಿಕದ ಐಕಾನಿಕ್ ಸಂಸ್ಥೆಗಳು ದೇಶಕ್ಕೆ ಕಾಲಿರಿಸುತ್ತಿರುವಂತೆಯೇ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತಾಜಾತನ ಕಾಪಾಡಿಕೊಳ್ಳುವುದು ಅನಿವಾರ್ಯವೆನಿಸಿದೆ.

ಬ್ರಿಟನ್ ನಲ್ಲಿರುವ ರಾಯಲ್ ಎನ್ ಫೀಲ್ಡ್ ಟೆಕ್ನಾಲಜಿ ಘಟಕದಲ್ಲಿ ನೂತನ ಎಂಜಿನ್ ಅಭಿವೃದ್ಧಿಪಡಿಸಲಾಗುತ್ತಿದೆ. ನಿರ್ಮಾಣ ಸಿದ್ಧ ಆವೃತ್ತಿಯಲ್ಲಿ ಬದಲಾವಣೆಗಳು ಕಂಡುಬರಲಿದೆ.

ಈಗ ಮಾರಾಟದಲ್ಲಿರುವ ಕಾಂಟಿನೆಂಟಲ್ ಜಿಟಿ 535 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದ್ದು 29 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮುಂದೆ ಮಂಕಾಗಿದೆ. ಹಾಗಿರುವಾಗ 45-50 ಅಶ್ವಶಕ್ತಿ ಉತ್ಪಾದಿಸಬಲ್ಲ 750 ಸಿಸಿ ಎಂಜಿನ್ ಗೆ ಮೊರೆ ಹೋಗುತ್ತಿದೆ.

ಅಂದ ಹಾಗೆ 2017 ವರ್ಷಾಂತ್ಯದಲ್ಲಿ ಅಥವಾ 2018 ವರ್ಷಾರಂಭದಲ್ಲಷ್ಟೇ ನೂತನ ಎಂಜಿನ್ ಒಳಗೊಂಡಿರುವ ರಾಯಲ್ ಎನ್ ಫೀಲ್ಡ್ ಹೊಸ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.

ಜಾಗತಿಕ ಮಾರುಕಟ್ಟೆಯನ್ನು ಮೊದಲು ಪ್ರವೇಶಿಸಲಿರುವ ನೂತನ ಎನ್ ಫೀಲ್ಡ್ ತದಾ ಬಳಿಕವಷ್ಟೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications