ಹೊಸ ಯಮಹಾ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ
ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಯಮಹಾ ಮೋಟಾರ್ ಇಂಡಿಯಾ ಸಂಸ್ಥೆಯು ದೇಶದಲ್ಲಿ ಅತಿ ನೂತನ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್ ಬಿಡುಗಡೆಗೊಳಿಸಿದೆ.
ಆರಂಭಿಕ ಬೆಲೆ: 52,000 ರು. (ಎಕ್ಸ್ ಶೋ ರೂಂ ದೆಹಲಿ)
ಇದಕ್ಕೂ ಮೊದಲು ವರ್ಷಾಂರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಯಮಹಾ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್ ಭರ್ಜರಿ ಅನಾವರಣಗೊಂಡಿತ್ತು. ಈಗ ವಾಹನ ಪ್ರೇಮಿಗಳಿಗೆ ಯಮಹಾ ನೀಡಿರುವ ಭರವಸೆಗೆ ತಕ್ಕಂತೆ ನೂತನ ಸ್ಕೂಟರ್ ಬಿಡುಗಡೆಗೊಳಿಸಿದೆ.

ಬೆಲೆ, ವೆರಿಯಂಟ್ (ಎಕ್ಸ್ ಶೋ ರೂಂ ದೆಹಲಿ)
- ಟಾಪ್ ಎಂಡ್ ಡಿಸ್ಕ್ ಬ್ರೇಕ್: 54,500 ರು.
- ಬೇಸ್ ಡ್ರಮ್ ಬ್ರೇಕ್: 52,000 ರು.

ನೂತನ ಸ್ಕೂಟರ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿರುವ ಯಮಹಾ ಸಂಸ್ಥೆಯು ಮೇ ತಿಂಗಳಲ್ಲಿ ವಿತರಣೆಯನ್ನು ನಡೆಸಲಿದೆ. ಆಸಕ್ತ ಗ್ರಾಹಕರು ಯಮಹಾ ಅಧಿಕೃತ ಡೀಲರ್ ಶಿಪ್ ಗಳನ್ನು ಸಂಪರ್ಕಿಸಬಹುದಾಗಿದೆ.

ಮುಂದಿನ ತಲೆಮಾರಿನ ನೈಜ ಯುವಕರ ಸ್ಕೂಟರ್ ಎಂದೇ ಬಿಂಬಿತವಾಗಿರುವ ಯಮಹಾ ಸಿಗ್ನಸ್ ರೇ-ಝಡ್‌ಆರ್ ಕ್ರೀಡಾತ್ಮಕ ರೇಖೆ, ಡ್ಯುಯಲ್ ಟೋನ್ ಬಣ್ಣ ಮತ್ತು ಟ್ರೆಂಡಿ ಬಾಡಿ ಗ್ರಾಫಿಕ್ಸ್ ಗಳನ್ನು ಪಡೆದಿದೆ.

ಇನ್ನುಳಿದಂತೆ ಬೆಳ್ಳಿ ವರ್ಣ ಸ್ಪರ್ಶದ ಅಲಾಯ್ ವೀಲ್, ಕಪ್ಪು ವರ್ಣದ ಎಕ್ಸಾಸ್ಟ್, ಹೊಸತಾದ ಒಲೈವ್ ಗ್ರೀನ್ ಬಣ್ಣ, ಹ್ಯಾಂಡಲ್ ಬಾರ್ ಮತ್ತು ಸಸ್ಷೆನ್ಷನ್ ಫಾರ್ಕ್ ಎಲ್ಲವೂ ಆಕರ್ಷಕವೆನಿಸಿದೆ.

ನೂತನ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್ 113 ಸಿಸಿ 2 ವಾಲ್ವ್ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಸಂಸ್ಥೆಯ ನೂತನ ಬ್ಲೂ ಕೋರ್ ತಂತ್ರಜ್ಞಾನವನ್ನು ಪಡೆಯಲಿದೆ. ಅಲ್ಲದೆ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಮಾರುಕಟ್ಟೆಯಲ್ಲಿ ಹೀರೊ ಮ್ಯಾಸ್ಟ್ರೊ ಎಡ್ಜ್, ಟಿವಿಎಸ್ ವಿಗೊ ಮತ್ತು ಹೋಂಡಾ ಡಿಯೊ ಸವಾಲನ್ನು ನೂತನ ಯಮಹಾ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್ ಎದುರಿಸಲಿದೆ.

ಸಂಸ್ಥೆಯ ಪ್ರಕಾರ 103 ಕೆ.ಜಿ ತೂಕವನ್ನು ಹೊಂದಿರುವ ಯಮಹಾ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್ ಪ್ರತಿ ಲೀಟರ್ ಗೆ 66 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ದೇಶದ ಒಟ್ಟಾರೆ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 30ರಷ್ಟು ಮಾರಾಟವನ್ನು ಸ್ಕೂಟರ್ ವಿಭಾಗ ವಶಪಡಿಸಿಕೊಂಡಿದೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ಶೇಕಡಾ 10ರಷ್ಟು ಮಾರಾಟವನ್ನು ಕಸಿದುಕೊಳ್ಳುವುದು ಯಮಹಾ ಗುರಿಯಾಗಿದೆ.

ಕಳೆದ ವರ್ಷ ಫಾಸಿನೋ ಸ್ಕೂಟರ್ ಪರಿಚಯಿಸಿರುವ ಯಮಹಾ ಈಗ ಸ್ಟೈಲ್ ಮತ್ತು ತಂತ್ರಗಾರಿಕೆಗೆ ಮತ್ತಷ್ಟು ಒತ್ತು ನೀಡುವ ಮೂಲಕ ಹೆಚ್ಚು ಕ್ರೀಡಾತ್ಮಕ ಮತ್ತು ನಾವೀನ್ಯ ಶೈಲಿಯ ಸ್ಕೂಟರ್ ಮಾರುಕಟ್ಟೆಗೆ ಪರಿಚಯಿಸಿದೆ.

ಯಮಹಾ ಸಿಗ್ನಸ್ ರೇ-ಝಡ್‌ಆರ್ ಸ್ಕೂಟರ್ 21 ಲೀಟರ್ ಗಳ ಅಂಡರ್ ಸೀಟು ಸ್ಟೋರೆಜ್ ಜಾಗವನ್ನು, ಟ್ರೆಂಡಿ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ಯೂಬ್ ಲೆಸ್ ಚಕ್ರಗಳನ್ನು, ಯುಎಸ್ ಬಿ ಚಾರ್ಜಿಂಗ್ ಪಾಯಿಂಟ್ ಗಳನ್ನು ಪಡೆಯಲಿದೆ.


Click it and Unblock the Notifications








