'ಮೆಡ್ ಇನ್ ಇಂಡಿಯಾ' ಖ್ಯಾತಿಯ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬಿಡುಗಡೆ
ಬಹುನೀರಿಕ್ಷಿತ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಹತ್ತು ಹಲವು ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಬೈಕ್‌ಗಳು ಕಮ್ಯೂಟರ್ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸುಳಿವು ನೀಡಿವೆ.
ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಹತ್ತು ಹಲವು ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಬೈಕ್‌ಗಳು ಕಮ್ಯೂಟರ್ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸುಳಿವು ನೀಡಿವೆ.

ಬಿಎಂಡಬ್ಲ್ಯು ಸಂಸ್ಥೆಯ ಬೈಕ್ ಉತ್ಪಾದನಾ ವಿಭಾಗವಾದ ಬಿಎಂಡಬ್ಲ್ಯು ಮೊಟೊರಾಡ್‌ನಿಂದ ಭಾರತೀಯ ಗ್ರಾಹಕರಿಗಾಗಿಯೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿ 310 ಆರ್ ಬೈಕ್ ಮಾದರಿಯು ರೂ. 2.99 ಲಕ್ಷಕ್ಕೆ ಮತ್ತು ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿವೆ.

ಮೊದಲ ಬಾರಿಗೆ ಭಾರತದಲ್ಲೇ ತನ್ನ ಹೊಸ ಉತ್ಪನ್ನಗಳನ್ನ ಅಭಿವೃದ್ಧಿ ಮಾಡಿರುವ ಬಿಎಂಡಬ್ಲ್ಯು ಸಂಸ್ಥೆಯು ಬೈಕ್‌ಗಳ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಟಿವಿಎಸ್ ಜೊತೆ ಕೈಜೋಡಿಸಿದ್ದು, ತಮಿಳುನಾಡಿನ ಹೊಸೂರುನಲ್ಲಿರುವ ಟಿವಿಎಸ್ ಬೈಕ್ ಉತ್ಪಾದನಾ ಘಟಕದಲ್ಲೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನ ಉತ್ಪಾದನೆ ಮಾಡಿರುವುದು ಮತ್ತೊಂದು ವಿಶೇಷ.

ಜಿ 310 ಆರ್ ಬೈಕ್ (ಸ್ಟ್ರೀಟ್ ಫೈಟರ್)
ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಆವೃತ್ತಿಯು ಸಹ ನಕೆಡ್ ಮೋಟಾರ್ ಸೈಕಲ್ ವಿನ್ಯಾಸಗಳೊಂದಿಗೆ ಗ್ರಾಹಕರ ಕೈ ಸೇರಿದ್ದು, ಬಿಎಂಡಬ್ಲ್ಯು ಎಸ್ 1000 ಬೈಕ್ ಮಾದರಿಯಲ್ಲೇ 41ಎಂಎಂ ಯುಎಸ್‌ಡಿ ಗೋಲ್ಡನ್ ಫೋಕ್ಸ್, 17-ಇಂಚಿನ ಫೈವ್ ಸ್ಪೋಕ್ ಕಾಸ್ಟ್ ಅಲ್ಯುನಿಯಂ ವೀಲ್ಹ್‌ಗಳನ್ನು ಪಡೆದುಕೊಂಡಿದೆ.

ಬರೋಬ್ಬರಿ 158.5 ಕೆ.ಜಿ ತೂಕ ಹೊಂದಿರುವ ಜಿ 310 ಆರ್ ಬೈಕ್‌ಗಳು ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದೆ.

ಲಭ್ಯವಿರುವ ಬಣ್ಣಗಳು- ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿರುವ ಜಿ 310 ಆರ್ ಬೈಕ್‌ಗಳನ್ನ ಸ್ಟೈಲ್ ಹೆಚ್‌ಪಿ( ಪರ್ಲ್ ವೈಟ್ + ಹೆಚ್‌ಪಿ ಬ್ಯಾಡ್ಜ್), ಕಾಸ್ಮಿಕ್ ಬ್ಲ್ಯಾಕ್ ಮತ್ತು ರೇಸಿಂಗ್ ರೆಡ್ ಬಣ್ಣಗಳಲ್ಲಿ ಖರೀದಿಸಬಹುದು.

ಜಿ 310 ಜಿಎಸ್(ಅಂಡ್ವೆಚರ್)
ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆಗೊಳಿಸಿರುವ ಜಿ 310 ಜಿಎಸ್ ಬೈಕ್‌ಗಳು ಸಿಂಗಲ್ ಸಿಲಿಂಡರ್ ಅಡ್ವೆಂಚರ್ ಪ್ರಿಮಿಯಂ ಬೈಕ್ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಬೈಕ್ ಆವೃತ್ತಿಯಾಗಿದ್ದು, ಆಪ್ ರೋಡ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಇದೊಂದು ಹಬ್ಬ ಅಂದ್ರೆ ತಪ್ಪಾಗುವುದಿಲ್ಲ.

ಬಿಎಂಡಬ್ಲ್ಯು ಸಂಸ್ಥೆಯ ಆರ್ 1200 ಜಿಎಸ್ ಬೈಕ್‌ಗಳಲ್ಲಿ ಬಳಸಲಾಗಿರುವ 'ಬೆಬಿ ಜಿಸ್' ಡಿಸೈನ್‌ಗಳನ್ನು ಹೊಸ ಜಿ 310 ಜಿಎಸ್ ಬೈಕ್‌ಗಳಲ್ಲೂ ಬಳಸಲಾಗಿದ್ದು, ಬ್ರೇಕ್ ಫೆಂಡರ್ ಸೇರಿದಂತೆ ಆಪ್ ರೋಡ್ ಬೈಕ್‌ಗಳ ಪ್ರಮುಖ ಗುಣಲಕ್ಷಣವಾದ ಲಗ್ಗೆಜ್ ರಾಕ್ ಕೂಡಾ ಇದರಲ್ಲಿದೆ.

ಸ್ಟ್ರೀಟ್ ಫೈಟರ್ ಖ್ಯಾತಿಯ ಜಿ 310 ಆರ್ ಬೈಕಿಗಿಂತಲೂ ಉದ್ದಳತೆಯಲ್ಲಿ ಹೆಚ್ಚಿರುವ ಜಿ 310 ಜಿಎಸ್ ಬೈಕ್‌ಗಳು 169.5 ಕೆ.ಜಿ ತೂಕ ಪಡೆದುಕೊಂಡಿದ್ದು, ಮುಂಭಾಗದಲ್ಲಿ 19 ಇಂಚಿನ ವೀಲ್ಹ್‌ಗಳನ್ನ ಬಳಕೆ ಮಾಡಿದ್ದಲ್ಲಿ ಹಿಂಭಾಗ ಚಕ್ರಗಳು 17 ಇಂಚು ಗಾತ್ರ ಹೊಂದಿವೆ.

ಸುರಕ್ಷತೆಯಲ್ಲೂ ಜಿ 310 ಜಿಎಸ್ ಬೈಕಿನಲ್ಲಿ ಹೆಚ್ಚಿನ ಗಮನಹರಿಸಲಾಗಿದ್ದು, ಜಿ 310 ಆರ್ ಬೈಕಿನಂತೆಯೇ ಡ್ಯುಯಲ್ ಚಾನೆಲ್ ಎಬಿಎಸ್ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನ ಸೇರಿಸಲಾಗಿದೆ.

ಲಭ್ಯವಿರುವ ಬಣ್ಣಗಳು- ಪ್ರಮುಖ ಮೂರು ಬಣ್ಣಗಳಲ್ಲಿ ಲಭ್ಯವಿರುವ ಜಿ 310 ಜಿಎಸ್ ಬೈಕ್‌ಗಳು ರೇಸಿಂಗ್ ರೆಡ್, ಪರ್ಲ್ ವೈಟ್ ಮೆಟಾಲಿಕ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು.

ಎಂಜಿನ್ ಸಾಮರ್ಥ್ಯ
ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಎರಡು ಬೈಕ್‌ಗಳು ತಾಂತ್ರಿಕವಾಗಿ ಬೇರೆ ಬೇರೆ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ ಒಂದೇ ಮಾದರಿಯ ಎಂಜಿನ್ ಪಡೆದುಕೊಂಡಿವೆ. ಎರಡು ಬೈಕ್‌ಗಳಲ್ಲೂ 313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ. ಇದೇ ಎಂಜಿನ್ ಅನ್ನು ಟಿವಿಎಸ್ ಅಪಾಚೆ ಆರ್‌ಆರ್310 ಬೈಕ್‌ನಲ್ಲಿ ನೋಡಬಹುದಾಗಿದೆ.

313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ಗಳು 34-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಎರಡು ಬೈಕ್ ಮಾದರಿಗಳಲ್ಲೂ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಈ ಮೂಲಕ ಪ್ರತಿ ಗಂಟೆಗೆ 145 ಟಾಪ್ ಸ್ಪೀಡ್ ಹೊಂದಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಇಂಧನ ದಕ್ಷತೆಯಲ್ಲೂ ಉತ್ತಮವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 30ರಿಂದ 35 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು ಎನ್ನಲಾಗಿದೆ.

ಒಟ್ಟಿನಲ್ಲಿ ಈ ವರ್ಷದ ಬಹುನೀರಿಕ್ಷಿತ ಬೈಕ್ ಮಾದರಿಗಳೆಂದೇ ಬಿಂಬಿತವಾಗಿದ್ದ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಇದೀಗ ಗ್ರಾಹಕರ ಕೈಗೆ ಸೇರಲು ಅಣಿಯಾಗಿದ್ದು, ಆಸಕ್ತ ಗ್ರಾಹಕರು ರೂ. 50 ಸಾವಿರ ಮುಂಗಡದೊಂದಿಗೆ ಹೊಸ ಬೈಕ್‌ಗಳಿಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ.


Click it and Unblock the Notifications








