ಹೀರೋ ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಬಿಡುಗಡೆ
ಜಗತ್ತಿನ ಅತಿ ದೊಡ್ಡ ಬೈಕ್ ಉತ್ಪಾದನಾ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದ್ದ ತನ್ನ ಹೊಚ್ಚ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ನ್ನು ಇದೀಗ ದೇಶಾದ್ಯಂತ ಬಿಡುಗಡೆ ಮಾಡಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕಿನ ಬೆಲೆಯನ್ನ ರೂ.89,900ಕ್ಕೆ ನಿಗದಿಪಡಿಸಲಾಗಿದೆ.

ಹೀರೋ ಮೋಟೋಕಾರ್ಪ್ ಸಂಸ್ಥೆಯು ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳನ್ನ ಕಳೆದ ತಿಂಗಳು ಈಶಾನ್ಯ ರಾಜ್ಯಗಳಲ್ಲಿ ಮಾತ್ರವೇ ಬಿಡುಗಡೆ ಮಾಡಿದ್ದಲ್ಲದೇ ಈಶಾನ್ಯ ರಾಜ್ಯಗಳಲ್ಲಿ ಹೊಸ ಉತ್ಪನ್ನವನ್ನು ಉತ್ತೇಜಿಸುವ ಉದ್ದೇಶದಿಂದ ಬೈಕಿನ ಬೆಲೆಯಲ್ಲೂ ತುಸು ಇಳಿಕೆ ಮಾಡಿ ಮಾರಾಟ ಆರಂಭಿಸಿತ್ತು. ಇದೀಗ ದೇಶ್ಯಾದ್ಯಂತ ಹೊಸ ಬೈಕ್ ಬಿಡುಗಡೆ ಮಾಡಿರುವ ಹೀರೋ ಸಂಸ್ಥೆಯು 200ಸಿಸಿ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಹೀರೋ ಸಂಸ್ಥೆಯು ಕಮ್ಯೂಟರ್ ಬೈಕ್ ಪ್ರೇಮಿಗಳನ್ನು ಸೆಳೆಯುವ ಉದ್ದೇಶದೊಂದಿಗೆ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ಇದು ಹೀರೋ ಸಿಬಿಝೆಡ್ ಎಕ್ಸ್‌ಟ್ರಿಮ್ ಬೈಕಿನ ಮುಂದುವರೆದ ಮಾದರಿಯಾಗಿರಲಿದೆ. ಹೀಗಾಗಿ ಹೊಸ ಬೈಕಿನ ಮೇಲೆ ಭಾರೀ ನೀರಿಕ್ಷೆಗಳಿದ್ದು, 200ಸಿಸಿ ವಿಭಾಗದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಬೈಕ್ ಇದಾಗಿದೆ ಎನ್ನಬಹುದು.

ಎಂಜಿನ್ ಸಾಮರ್ಥ್ಯ
199 ಸಿಸಿ ಫೌರ್ ಸ್ಟೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು 18-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಇನ್ನು ಹೊಸ ಬೈಕಿನಲ್ಲಿ ಹೆಡ್‌ಲೈಟ್ಸ್ ಜೊತೆಗೆ ಎಲ್ಇಡಿ ಪೈಲೆಟ್ ಲ್ಯಾಂಪ್ಸ್, ಎಲ್ಇಡಿ ಟೈಲ್ ಲೈಟ್ಸ್, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಟೋನ್ ಗ್ರಾಫಿಕ್ಸ್ ಮತ್ತು ದೂರದ ಪ್ರಯಾಣದಲ್ಲೂ ಆರಾಮದಾಯಕವಾಗಿ ಕುಳಿತು ಸವಾರಿ ಮಾಡಬಲ್ಲ ಕೌಂಟರ್ಡ್ ಸೀಟುಗಳನ್ನು ಜೋಡಿಸಲಾಗಿದೆ.

ಸುರಕ್ಷಾ ಸಾಧನಗಳು
ಬೈಕ್ ಮುಂಭಾಗದಲ್ಲಿ 37-ಎಂಎಂ ಟೆಲಿಸ್ಕೋಪಿಕ್ ಸಸ್ಪೆಷನ್ ಹಾಗೂ 37-ಎಂಎಂ ಎಳು ಹಂತದಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಮೋನೋಶಾರ್ಕ್ ಸಸ್ಷೆಷನ್, 276-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಅನ್ನು ಸಹ ಹೊಂದಿದೆ.

ಖರೀದಿಗೆ ಲಭ್ಯವಿರುವ ಬಣ್ಣಗಳು
ಒಟ್ಟು 5 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಪ್ಯಾಂಥರ್ ಬ್ಲ್ಯಾಕ್ ಜೊತೆ ಕೂಲ್ ಸಿಲ್ವರ್, ಬ್ಲ್ಯಾಕ್ ಆ್ಯಂಡ್ ರೆಡ್, ಸ್ಪೋರ್ಟ್ ರೆಡ್, ಚಾರ್ಕೋಲ್ ಗ್ರೇ ಜೊತೆ ಆರೇಂಜ್ ಮತ್ತು ಟೆಕ್ನೋ ಬ್ಲ್ಯೂ ಬಣ್ಣಗಳನ್ನ ಹೊಂದಿರಲಿದೆ.

ಈ ಮೂಲಕ 200ಸಿಸಿ ವಿಭಾಗದ ಬೈಕ್‌ಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಹೀರೋ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಬಜಾಜ್ ಪಲ್ಸರ್ 200ಎನ್ಎಸ್, ಕೆಟಿಎಂ ಡ್ಯೂಕ್ 200 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳಿಗೆ ಇದು ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ ಬೈಕ್ ಬಿಡುಗಡೆ ಕುರಿತು ಮಾತನಾಡಿರುವ ಹೀರೋ ಸಂಸ್ಥೆಯ ನಿರ್ದೇಶಕ ಪವನ್ ಮಂಜಲ್ ಸಹ ಎಕ್ಸ್‌ಟ್ರಿಮ್ ಬೈಕ್ ಬಗೆಗೆ ಭಾರೀ ನೀರಿಕ್ಷೆ ವ್ಯಕ್ತಪಡಿಸಿದ್ದು, ಯುವ ಸಮುದಾಯಕ್ಕಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಬೈಕ್ ಬೈಕ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸಲಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಹೊಸ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಇದುವರೆಗೆ ಮಾರುಕಟ್ಟೆಯಲ್ಲಿರುವ 200ಸಿಸಿ ಬೈಕ್‌ಗಳಿಂತಲೂ ಹೆಚ್ಚಿನ ಸೌಲಭ್ಯ ಮತ್ತು ಕಡಿಮೆ ಬೆಲೆ ಹೊಂದಿರುವ ಈ ಬೈಕಿನ ವಿಶೇಷ ಎನ್ನಬಹುದು.


Click it and Unblock the Notifications