ಹೆಲ್ಮೆಟ್ ಬಳಕೆ ಮಾಡಿದ್ರೆ ಸಾಲದು, ಈ ವಿಚಾರಗಳನ್ನು ತಪ್ಪದೇ ತಿಳಿದುಕೊಳ್ಳಿ..!
ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ರೆ ದಂಡ ಪಾವತಿಸಬೇಕಾಗುತ್ತೆ ಎಂಬ ಭಯದಿಂದಾಗಿ ಇತ್ತೀಚೆಗೆ ಬಹುತೇಕ ಬೈಕ್ ಸವಾರರು ಜೀವರಕ್ಷಕ ಹೆಲ್ಮೆಟ್ ಅನ್ನು ಬಳಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಂದ್ರೆ ತಪ್ಪಾಗುವುದಿಲ್ಲ. ಆದ್ರೆ ಕೇವಲ ದಂಡದಿಂದ ಬಚಾವ್ ಆಗಲು ಖರೀದಿ ಮಾಡಲಾಗುವ ಅಗ್ಗದ ಬೆಲೆಯ ಹೆಲ್ಮೆಟ್ ಬಳಕೆ ಬಗ್ಗೆ ಎಚ್ಚರವಹಿಸದೇ ಇದ್ದಲ್ಲಿ ಅದರಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚು.

ಹೌದು, ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಗ್ಗಿಸುವ ಸಂಬಂಧ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಇದರಿಂದ ಸಂಚಾರಿ ನಿಯಮವನ್ನು ಪಾಲಿಸಬೇಕೆಂಬ ಒಂದೇ ಒಂದು ಕಾರಣಕ್ಕೆ ನಕಲಿ ಹೆಲ್ಮೆಟ್ ಬಳಕೆಯು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ನಕಲಿ ಹೆಲ್ಮೆಟ್‌ಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಮತ್ತು ಬ್ರಾಂಡ್ ಹೆಸರಿನಲ್ಲಿ ಮಾರಾಟಗೊಳ್ಳುವ ಹೆಲ್ಮೆಟ್‌ಗಳ ಆಯ್ಕೆಯ ಕುರಿತಾಗಿ ನಾವಿಂದು ಕೆಲವೊಂದು ಮಹತ್ವದ ವಿಚಾರಗಳನ್ನು ಪ್ರತಿಯೊಬ್ಬರು ತಪ್ಪದೇ ತಿಳಿದುಕೊಳ್ಳಬೇಕಿದೆ.

ಹೆಲ್ಮೆಟ್ ಖರೀದಿ ವಿಚಾರಕ್ಕೆ ಬಂದಾಗ ಬಹುತೇಕ ಬೈಕ್ ಸವಾರರ ಮನಸ್ಸಿನಲ್ಲಿ ಬರುವ ವಿಚಾರ ಅಂದ್ರೆ ಬೈಕ್ ಖರೀದಿಸುವುದೇ ದೊಡ್ಡ ವಿಷಯ, ಇನ್ನು ಹೆಲ್ಮೆಟ್ ಕ್ವಾಲಿಟಿ ವಿಷಯ ಎಲ್ಲಿಂದ ಬಂತು ಹೇಳಿ? ಇದೇ ಕಾರಣಕ್ಕಾಗಿ ಬಹುತೇಕರು ಬಳಿಕ ನಾನಾ ಕಿರಿಕಿರಿಗಳನ್ನು ಎದುರಿಸುತ್ತಾರೆ.

ಇವೆಲ್ಲವನ್ನು ತಪ್ಪಿಸಿಕೊಳ್ಳಲು ಆರಂಭದಲ್ಲೇ ಗುಣಮಟ್ಟದ ಹೆಲ್ಮೆಟ್ ಧರಿಸಿದ್ದರೆ ಸಮಸ್ಯೆಗೆ ಪರಿಹಾರವಾಯಿತ್ತಲ್ಲವೇ? ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ಡ್ರೈವ್ ಸ್ಪಾರ್ಕ್ ತಂಡವು ಬೈಕ್ ಸವಾರಿಗೆ ಹೆಲ್ಮೆಟ್ ಖರೀದಿ ವೇಳೆ ಗಮನ ಹರಿಸಬೇಕಾದ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಡಲಿದ್ದೇವೆ. ಇದು ನಿಮ್ಮ ನೆರವಿಗೆ ಬರುವ ವಿಶ್ವಾಸ ನಮ್ಮದು.

ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಹೆಲ್ಮೆಟ್‌ಗಳು ಲಭ್ಯವಿರುತ್ತದೆ. ಆದರೆ ಹೆಲ್ಮೆಟ್ ಖರೀದಿ ವಿಷಯದಲ್ಲಿ ಖಂಜೂಸ್ ಮಾಡಿಕೂಳ್ಳದೆ ಗುಣಮಟ್ಟದ ಉತ್ಪನ್ನ ಖರೀದಿಸಿದರೆ ಒಳಿತು. ಹಾಗಾದ್ರೆ ಎಂತಹ ಹೆಲ್ಮೆಟ್ ಆಯ್ಕೆ ನಿಮಗೆ ಗರಿಷ್ಠ ರಕ್ಷಣೆ ನೀಡುತ್ತವೇ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.
ಹೆಲ್ಮೆಟ್ ವಿಧಗಳು
ಹೆಲ್ಮೆಟ್ ಖರೀದಿ ವೇಳೆ ಗಮನವಹಿಸಬೇಕಾದ ಪ್ರಮುಖ ಅಂಶವೆಂದರೆ, ಇದು ನಿಮ್ಮ ಮುಖ ಹಾಗೂ ತಲೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು. ಕೆಲವರು ಅಂದಚಂದ ಅಂದುಕೊಂಡು ಹಾಫ್ ಫೇಸ್ ಹೆಲ್ಮೆಟ್, ಓಪನ್ ಫೇಸ್ ಹೆಲ್ಮೆಟ್ ಖರೀದಿಸಲು ಪ್ರಯತ್ನಿಸುತ್ತಾರೆ. ಆದರೆ ಅಪಘಾತ ವೇಳೆಯಲ್ಲಿ ಇದು ನಿಮ್ಮ ನೆರವಿಗೆಬರಲಾರದು ಎಂಬುದನ್ನು ಗಮನಿಸಲು ಮರೆಯದಿರಿ.

ಐಎಸ್‌ಐ ಮುದ್ರೆ
ನೀವು ಕೊಂಡುಕೊಳ್ಳುತ್ತಿರುವ ಹೆಲ್ಮೆಟ್ ಇಂಡಿಯನ್ ಸ್ಟಾಂಡರ್ಡ್ ಇಸ್ಸ್ಟಿಟ್ಯೂಟ್‌ನಿಂದ (ಐಎಸ್‌ಐ) ಧೃಢೀಕರಣ ಪಡೆದುಕೊಂಡಿದ್ದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಹಾಗೆಯೇ ಗ್ಯಾರಂಟಿ ಇತ್ಯಾದಿ ವಿಚಾರಗಳ ಬಗ್ಗೆ ಆರಂಭದಲ್ಲೇ ಮಾಹಿತಿ ಪಡೆದುಕೊಳ್ಳಿರಿ.

ರಸ್ತೆ ಬೀದಿಗಳಲ್ಲಿನ ಹೆಲ್ಮೆಟ್
ಕೆಲವರು ಅಗ್ಗದ ದರಕ್ಕೆ ಮನಸೋತು ರಸ್ತೆ ಬೀದಿಗಳಲ್ಲಿರುವ ಲಭಿಸುವ ಸಾಮಾನ್ಯ ಹೆಲ್ಮೆಟ್‌ಗೆ ಮೊರೆ ಹೋಗುತ್ತೇವೆ. ಗುಣಮಟ್ಟ ರಹಿತವಾದ ಹೆಲ್ಮೆಟ್‌ಗಳ ಖರೀದಿಯಿಂದಾಗಿ ನಮಗೆ ನಾವೇ ಅಪಾಯವನ್ನು ಆಹ್ವಾನಿಸಿದಂತೆ.

ಸ್ಟೈಲಿಷ್ ಹೆಲ್ಮೆಟ್
ಕೆಲವೊಂದು ಬಾರಿ ಶೈಲಿ ಹಾಗೂ ವಿನ್ಯಾಸಕ್ಕೆ ಮಾರು ಹೋಗಿ ಅಸುರಕ್ಷಿತ ಹೆಲ್ಮೆಟ್‌ಗಳನ್ನು ನಮ್ಮ ಯುವ ಸಮೂಹ ಖರೀದಿಸುವ ಹಲವಾರು ಪ್ರಸಂಗಗಳನ್ನು ಗಮನಿಸಿರುತ್ತೇವೆ. ಆದರೆ ಇವು ನೋಡಲು ಅಂದವಾಗಿರುತ್ತವೆ ಹೊರತು ನಿಮ್ಮ ಜೀವ ರಕ್ಷಣೆಗೆ ಬರಲಾರವು.

ಹೆಲ್ಮೆಟ್ ಒಳಮೈ
ಹೆಲ್ಮೆಟ್ ಆಂತರಿಕ ಭಾಗಗಳ ವಿನ್ಯಾಸ ಹೇಗೆ ಗರಿಷ್ಠ ಮಟ್ಟದಲ್ಲಿರುತ್ತದೆಯೋ ಹಾಗೆಯೇ ಇದರಲ್ಲಿ ಆಳವಡಿಸಲಾಗಿರುವ ಪರಿಕರಗಳ ಬಗ್ಗೆಯೂ ತಿಳಿದುಕೊಳ್ಳಿರಿ. ಯಾಕೆಂದರೆ ಕಳಪೆ ಗುಣಮಟ್ಟದ ಸಾಧನಗಳನ್ನು ಬಳಸಿದರೆ ಅದು ನಿಮ್ಮ ಕೂದಲುದುರುವಿಕೆಗೂ ಕಾರಣವಾಗಬಹುದು ಎಂಬುದರ ಬಗ್ಗೆ ಹುಷಾರಾಗಿರಿ.
MOST READ: ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಹೆಲ್ಮೆಟ್ ಗಾತ್ರ
ಇನ್ನು ನಿಮಗೆ ಆರಾಮದಾಯಕವಾಗುವ ರೀತಿಯಲ್ಲಿ ಹೆಲ್ಮೆಟ್ ಗಾತ್ರ ಹೊಂದಿರಬೇಕು. ಯಾವತ್ತೂ ತುಂಬಾನೇ ಬಿಗಿಯಾದ ಅಥವಾ ಸಡಿಲವಾದ ಶಿರಸ್ತ್ರಾಣ ಬಳಸದಿರಿ. ಯಾಕೆಂದ್ರೆ ಕೆಲವು ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದ್ದರೂ ಸಹ ಅಪಘಾತದಲ್ಲಿ ಪ್ರಾಣಕಳೆದುಕೊಂಡ ಉದಾಹರಣೆಗಳಿವೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಬಹುತೇಕ ಬೈಕ್ ಸವಾರರು ಸರಿಯಾದ ಗಾತ್ರ ಹೆಲ್ಮೆಟ್ ಆಯ್ಕೆ ಮಾಡದೆ ಯಾವುದೋ ಒಂದು ಹೆಲ್ಮೆಟ್ ಹಾಕಿದರೆ ಆಯಿತು ಎಂಬ ಮನಸ್ಥಿತಿ ಹೊಂದಿರುತ್ತಾರೆ. ಇದರಿಂದ ಸುರಕ್ಷತೆಗಿಂತ ಅಪಾಯವೇ ಹೆಚ್ಚು.

ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಗುಣಮಟ್ಟದ ಹೆಲ್ಮೆಟ್ ನಿರ್ಮಾಣ ಮಾಡುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಸ್ಟೀಲ್ ಬರ್ಡ್, ವೆಗಾ, ಎಲ್ಎಸ್2, ಹೆಚ್‌ಜೆಸಿ, ಎಸ್ಎಂಕೆ, ಬೆಲ್, ಶೊಯೈ ಮತ್ತುಎವಿಜಿ ಸಂಸ್ಥೆಗಳು ಬೈಕ್ ಸವಾರ ಬೇಡಿಕೆಯೆಂತೆ ವಿವಿಧ ಮಾದರಿಯ ಗುಣಮಟ್ಟದ ಹೆಲ್ಮೆಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದು, ರೂ. 1 ಸಾವಿರದಿಂದ ರೂ.50 ಸಾವಿರ ಮುಖಬೆಲೆಯ ವಿವಿಧ ಮಾದರಿಯ ಬೈಕ್ ಸವಾರರಿಗಾಗಿ ಗುಣಮಟ್ಟದ ಹೆಲ್ಮೆಟ್‌ಗಳನ್ನು ಮಾರಾಟಮಾಡುತ್ತಿವೆ.
MOST READ: ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..!

ಹೀಗಾಗಿ ನೀವು ಕೂಡಾ ಯಾವುದೇ ಕಾರಣಕ್ಕೂ ಅಗ್ಗದ ಬೆಲೆಯ ಹೆಲ್ಮೆಟ್‌ಗಳನ್ನು ಬಳಕೆ ಮಾಡದೇ ಒಂದು ಉತ್ತಮ ಗುಣಮಟ್ಟದ ಹೆಲ್ಮೆಟ್ ಬಳಕೆ ಮಾಡಿ. ಯಾಕೆಂದ್ರೆ ಒಂದು ಕೆಜಿ ತರಕಾರಿ ಖರೀದಿಸುವಾಗಿನ ಜಾಣ್ಮೆಯನ್ನು ಒಂದು ಹೆಲ್ಮೆಟ್ ಖರೀದಿಸುವಾಗಲೂ ಬಳಕೆ ಮಾಡದ್ದಿಲ್ಲಿ ಮುಂದೆ ಆಗಬಹುದಾದ ದುರಂತಗಳನ್ನು ಈಗಲೇ ತಡೆಯಬಹುದು ಅಲ್ಲವೇ?


Click it and Unblock the Notifications








