ಜನಪ್ರಿಯ ಕರಿಜ್ಮಾಗೆ ಗುಡ್‌ಬೈ- ಹೀರೋ ಅದೃಷ್ಟ ಬದಲಿಸುತ್ತಾ ಎಕ್ಸ್‌ಟ್ರಿಮ್ 200ಎಸ್?
ಸ್ಪೋರ್ಟಿ ಲುಕ್ ಕರಿಜ್ಮಾ ಬೈಕ್‌ಗಳಿಗೆ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಈ ಹಿಂದೆ ಮಾರಾಟವನ್ನು ಬಂದ್ ಮಾಡಿದ್ದ ಹೀರೋ ಸಂಸ್ಥೆಯು ಗ್ರಾಹಕರ ಒತ್ತಾಯದ ಮೇರೆಗೆ 2018ರ ಮೇ ನಲ್ಲಿ ಹೊಸ ವಿನ್ಯಾಸ ಮತ್ತು ಗುಣಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಮರುಬಿಡುಗಡೆ ಮಾಡಿತ್ತು. ಈ ವೇಳೆ ಕರಿಜ್ಮಾ ಬೈಕ್ ಭಾರತದಲ್ಲಿ ಮತ್ತೊಮ್ಮೆ ಜನಪ್ರಿಯತೆ ಸಾಧಿಸಬಹುದು ಎಂದುಕೊಂಡಿದ್ದ ಹೀರೋ ಸಂಸ್ಥೆಗೆ ಇದೀಗ ಭಾರೀ ನಿರಾಶೆಯಾಗಿದೆ.

ಹೌದು, ಕರಿಜ್ಮಾ ಬೈಕ್ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಉನ್ನತಿಕರಿಸಿ ಬಿಡುಗಡೆ ಮಾಡುತ್ತಿದ್ದರೂ ಸಹ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಕಳೆದ ಐದಾರು ತಿಂಗಳಿನಿಂದ ಕರಿಜ್ಮಾ ಮಾರಾಟ ಸಂಪೂರ್ಣ ನೆಲಕಚ್ಚಿದೆ. ಮರುಬಿಡುಗಡೆಗೊಂಡ ನಂತರ 90ರಿಂದ 100 ಯೂನಿಟ್ ಮಾರಾಟವಾಗುತ್ತಿದ್ದ ಕರಿಜ್ಮಾ ಬೈಕ್‌ಗಳು ಕಳೆದ ತಿಂಗಳು ಏಪ್ರಿಲ್‌ನಲ್ಲಿ ಒಂದೇ ಒಂದು ಬೈಕ್ ಕೂಡಾ ಮಾರಾಟವಾಗಿಲ್ಲ.

ಈ ಹಿನ್ನೆಲೆ ಮಹತ್ವದ ನಿರ್ಧಾರಕ್ಕೆ ಬಂದಿರುವ ಹೀರೋ ಸಂಸ್ಥೆಯು ಕರಿಜ್ಮಾ ಮಾರಾಟವನ್ನು ಸ್ಥಗಿತಗೊಳಿಸಿ ಎಕ್ಸ್‌ಟ್ರಿಮ್ 200ಎಸ್ ಆವೃತ್ತಿಯ ಮೇಲೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದು, ಕರಿಜ್ಮಾ ಉತ್ಪಾದನೆಯನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

2003ರಲ್ಲಿ ಬಿಡುಗಡೆಯಾದ ನಂತರ ಹಲವಾರು ಬಾರಿ ಮರುವಿನ್ಯಾಸ ಕಂಡಿದ್ದ ಕರಿಜ್ಮಾ ಬೈಕ್, ಅತ್ಯುತ್ತಮ ಪರ್ಫಾಮೆನ್ಸ್ ಮೂಲಕ ಹುಡುಗರ ಪಾಲಿನ ಹಾಟ್ ಫೇವರಿಟ್ ಆಗಿ ಗಮನ ಸೆಳೆದಿದ್ದವು. ಆದ್ರೆ ಗ್ರಾಹಕರು ಅಭಿರುಚಿ ಬದಲಾದಂತೆ ಕರಿಜ್ಮಾ ಬೈಕ್ ವಿನ್ಯಾಸವು ಕಳೆದ ಕೆಲ ವರ್ಷಗಳಿಂದ ಭಾರೀ ಹಿನ್ನಡೆ ಅನುಭವಿಸಿತು.

ಹೀಗಿರುವಾಗ 2016ರಿಂದ 2018ರ ಅವಧಿಯಲ್ಲಿ ಕರಿಜ್ಮಾ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದ ಹೀರೋ ಸಂಸ್ಥೆಯು ಗ್ರಾಹಕರ ಒತ್ತಾಯದ ಮೇರೆಗೆ 2018ರ ಮೇ ಅವಧಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಕರಿಜ್ಮಾ ಬೈಕ್ ಅನ್ನು ಹೊಸ ವಿನ್ಯಾಸಗಳೊಂದಿಗೆ ಮರುಬಿಡುಗಡೆ ಮಾಡಿತ್ತು. ಆಗಲೂ ಕೂಡಾ ಮಾರಾಟದಲ್ಲಿ ಎರಡಂಕಿ ದಾಟಲು ಸಾಧ್ಯವಾಗದ ಕರಿಜ್ಮಾ ಬೈಕ್ ಕಳೆದ ಏಪ್ರಿಲ್ ತಿಂಗಳ ಮಾರಾಟದಲ್ಲಿ ಸಂಪೂರ್ಣವಾಗಿ ಸೊನ್ನೆಗೆ ಬಂದು ನಿಂತಿದೆ.

ಇದರಿಂದ ಈ ಬಾರಿ ಕರಿಜ್ಮಾ ಮಾರಾಟವನ್ನು ಮುಂದುವರಿಸದಿರಲು ನಿರ್ಧರಿಸಿರುವ ಹೀರೋ ಸಂಸ್ಥೆಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸ ಮತ್ತು ಅತ್ಯುತ್ತಮ ಪರ್ಫಾಮೆನ್ಸ್ ನೀಡಬಲ್ಲ ಎಕ್ಸ್‌ಟ್ರಿಮ್ 200ಎಸ್ ಮೇಲೆ ಗಮನಹರಿಸಿದ್ದು, ಕರಿಜ್ಮಾ ಬೈಕ್ ಮಾದರಿಗಿಂತಲೂ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿದ್ದರೂ ಗುಣಮಟ್ಟದ ಬಿಡಿಭಾಗಗಳು ಪರ್ಫಾಮೆನ್ಸ್‌ನಲ್ಲಿ ಎಕ್ಸ್‌ಟ್ರಿಮ್ 200ಎಸ್ ಗಮನಸೆಳೆಯುತ್ತಿದೆ.

ಎಕ್ಸ್‌ಟ್ರಿಮ್ 200ಎಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ 98,500 ಬೆಲೆ ಹೊಂದಿದ್ದು, ಎಕ್ಸ್‌ಟ್ರಿಮ್ 200ಆರ್ ಮಾದರಿಯಲ್ಲೇ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 199.6-ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಪ್ರೇರಣೆಯಿಂದ 18.1-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪೋರ್ಟಿ ವೈಶಿಷ್ಟ್ಯತೆಗಳಿಂದಾಗಿ ಕರಿಜ್ಮಾ ಬೈಕ್ ನೆನಪಿಸುವ ಹೊಸ ಎಕ್ಸ್‌ಟ್ರಿಮ್ 200ಎಸ್ ಮಾದರಿಯು ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಿಭಜಿತ ಆಸನ, ಸ್ಪೋರ್ಟಿ ಎಕ್ಸಾಸ್ಟ್ ಮತ್ತು ಬ್ಲೂಟೂಥ್ ಸಂಪರ್ಕದೊಂದಿಗೆ ಕಾಲ್ ನೋಟಿಫೀಕೆಶನ್, ಸರ್ವಿಸ್ ರಿಮೆಂಡರ್, ಟರ್ನ್ ಬೈ ಟರ್ನ್ ನೇವಿಗೇಷನ್ ಸೌಲಭ್ಯವನ್ನು ಪಡೆಯಬಹುದಾಗಿದೆ.
MOST READ: ಆಕ್ಟಿವಾ 5ಜಿ ಪ್ರಿಯರಿಗಾಗಿ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದೆ ಹೋಂಡಾ

ಹಾಗೆಯೇ ಹೊಸ ಬೈಕಿನಲ್ಲಿ 37-ಎಂಎಂ ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 7 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮೊನೊಶಾರ್ಕ್ ಸೌಲಭ್ಯವನ್ನು ಒದಗಿಸಲಾಗಿದ್ದು, 17-ಇಂಚಿನ ಅಲಾಯ್ ಚಕ್ರಗಳು, ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ.


Click it and Unblock the Notifications