ವಿವಿಧ ಯೋಜನೆಗಳಿಗಾಗಿ ಬರೋಬ್ಬರಿ ರೂ.700 ಕೋಟಿ ಹೂಡಿಕೆ ಮಾಡಿದ ಆರ್‌ಇ..!
ದೇಶದ ಜನಪ್ರಿಯ ಬೈಕ್ ಸಂಸ್ಥೆಗಳಲ್ಲಿ ಒಂದಾಗಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಯೋಜನೆಗಳೊಂದಿಗೆ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದು, ಇದಕ್ಕಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೈಕ್ ಉತ್ಪಾದನೆಗಾಗಿ ಬರೋಬ್ಬರಿ ರೂ.700 ಕೋಟಿ ಹೂಡಿಕೆ ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ವಿವಿಧ ಮಾದರಿಯ ಹೊಸ ಬೈಕ್‌ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕರ ಸ್ನೇಹಿ ಉತ್ಪನ್ನಗಳನ್ನು ಹೊರತರುವ ಇರಾದೆಯಲ್ಲಿದೆ. ಇದಕ್ಕಾಗಿಯೇ ಚೆನ್ನೈ ಬಳಿಯ ವಲ್ಲಂ ವಡಗಾಲ್‌ನಲ್ಲಿರುವ ತನ್ನ ಬೈಕ್ ಉತ್ಪಾದನಾ ಘಟಕವನ್ನು ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಬೈಕ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಬೈಕ್ ಖರೀದಿಯ ಕಾಯುವಿಕೆಯ ಅವಧಿಯನ್ನು ತಗ್ಗಿಸಲು ಇದು ಮಹತ್ವದ ಯೋಜನೆಯಾಗಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಮಾತೃ ಸಂಸ್ಥೆಯಾಗಿರುವ ಐರಿಷ್ ಮೋಟಾರ್ ಲಿಮಿಟೆಡ್ ಸಂಸ್ಥೆಯ ಮಾರ್ಗದರ್ಶನದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದು, ಹೊಸ ಬೈಕ್‌ಗಳ ಅಭಿವೃದ್ಧಿ ಸುಧಾರಿತ ತಂತ್ರಜ್ಞಾನ ಬಳಕೆ ಮಾಡುವತ್ತ ಹೆಚ್ಚಿನ ಗಮನಹರಿಸುತ್ತಿದೆ.

ಹೀಗಾಗಿ ಮುಂಬರುವ ದಿನಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ತಂತ್ರಜ್ಞಾನ ಸೌಲಭ್ಯದಲ್ಲಿ ಸಾಕಷ್ಟು ಬದಲಾವಣೆಗೊಳ್ಳಲಿದ್ದು, ಇದಕ್ಕಾಗಿಯೇ ಐರಿಷ್ ಮೋಟಾರ್ ಸಂಸ್ಥೆಯು ರಾಯಲ್ ಎನ್‌ಫೀಲ್ಡ್ ಉಸ್ತುವಾರಿಗಾಗಿ ವಿನೋದ್ ಕೆ ದಾಸರಿ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಿದೆ.

ಮುಂಬರುವ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ನಿಯಮಾವಳಿಗಳಿಗೆ ಅನುಸಾರವಾಗಿ ಹೊಸ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುವುದು ಒಂದು ಸವಾಲಾಗಿದ್ದು, ಹೊಸ ಬಂಡವಾಳ ಹೂಡಿಕೆಯು ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಯೋಜನೆಗೆ ಸಾಕಷ್ಟು ಸಹಕಾರಿಯಾಗಿಯಾಗಿದೆ ಎನ್ನಬಹುದು.
MOST READ: ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಇನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವಾರು ಹೊಸ ಬೈಕ್‌ಗಳನ್ನು ಪರಿಚಯಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ರೆಟ್ರೋ ಲುಕ್ ಮೋಟಾರ್‌ಸೈಕಲ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕ್ಲಾಸಿಕ್ 350 ಸಿಗ್ನಲ್ಸ್ , ಟ್ರಯಲ್ಸ್ 350, ಟ್ರಯಲ್ಸ್ 500, ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650, ಥಂಡರ್‌ಬರ್ಡ್ 350ಎಕ್ಸ್ ಮತ್ತು ಥಂಡರ್‌ಬರ್ಡ್ 500ಎಕ್ಸ್ ಎನ್ನುವ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಮಾಡಿದೆ.

ಈ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದ ಅವಧಿಯಲ್ಲಿ 9.5 ಲಕ್ಷ ಬೈಕ್‌ಗಳನ್ನು ಉತ್ಪಾದನೆ ಮಾಡುವ ಗುರಿಹೊಂದಲಾಗಿದ್ದು, 2018-19 ರ ಅವಧಿಯಲ್ಲಿ ಒಟ್ಟು 8,26,098 ಬೈಕ್‌ಗಳನ್ನು ಮಾರಾಟ ಮಾಡಿತ್ತು.
MOST READ: ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಇದರೊಂದಿಗೆ ವಿದೇಶಿ ಮಾರುಕಟ್ಟೆಗಳಿಗೂ ಭಾರತದಿಂದಲೇ ಶೇ.8ರಷ್ಟು ಹೊಸ ಬೈಕ್‌ಗಳನ್ನು ರಫ್ತು ಮಾಡಲಾಗುತ್ತಿದ್ದು, ವಿದೇಶಿ ಮಾರುಕಟ್ಟೆಗಳ ಬೇಡಿಕೆ ಪೂರೈಕೆಗಾಗಿ ಥೈಲ್ಯಾಂಡ್‌ನಲ್ಲೂ ಮತ್ತೊಂದು ಹೊಸ ಬೈಕ್ ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಈಗಾಗಲೇ ಚಾಲನೆ ನೀಡಿದೆ.

ಈ ಮೂಲಕ ದೇಶಿಯ ಮಾರುಕಟ್ಟೆಯ ಬೇಡಿಕೆಯ ಮೇಲೆ ಹೆಚ್ಚಿನ ಗಮನಹರಿಸಲು ಉದ್ದೇಶಿಸಿರುವ ಆರ್‌ಇ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕರ ಬೇಡಿಕೆ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದೆ.


Click it and Unblock the Notifications