ಹೊಸ ಬೈಕುಗಳಲ್ಲಿ ಇಸಿಯು ಅಭಿವೃದ್ದಿಪಡಿಸಲಿದೆ ಯಮಹಾ
ವರದಿಗಳ ಪ್ರಕಾರ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಎಂಟಿ25 ಬೈಕಿನಲ್ಲಿ, ಆರ್3 ಬೈಕಿನಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಸುಧಾರಿತ ಇಸಿಯುಗಳನ್ನು ಅಳವಡಿಸಲಾಗುವುದು. ಇಸಿಯುವಿನ (ಎಂಜಿನ್ ಕಂಟ್ರೋಲ್ ಯೂನಿಟ್) ಕಾರ್ಯವು ಬೈಕಿನಲ್ಲಿರುವ ಎಲೆಕ್ಟ್ರಾನಿಕ್ ಕಾರ್ಯಗಳನ್ನು ನಿಭಾಯಿಸುವುದಾಗಿದೆ. ಥ್ರೊಟಲ್ ಅನ್ನು ಹೇಗೆ ತೆರೆಯಲಾಗುವುದು ಎಂಬುದರ ಆಧಾರದ ಮೇಲೆ ಬೆಸ್ಟ್ ಫ್ಯೂಯಲ್ ಹಾಗೂ ಏರ್ ಮಿಕ್ಸರ್‍ಗಳನ್ನು ನಿರ್ಧರಿಸಲು ಇಸಿಯು ಸಹಾಯ ಮಾಡುತ್ತದೆ.

ಅಪ್‍ಗ್ರೇಡೆಡ್ ಇಸಿಯು ಬೈಕಿನ ಪರ್ಫಾಮೆನ್ಸ್ ಮೌಲ್ಯಗಳನ್ನು ಸುಧಾರಿಸಲು ಹೇಗೆ ಸಹಾಯ ಮಾಡಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲವಾದರೂ, ಅಸ್ತಿತ್ವದಲ್ಲಿರುವ 250 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್‌ನಿಂದ ಹೆಚ್ಚಿನ ಪ್ರಮಾಣದ ಪವರ್ ಉತ್ಪಾದಿಸಲು ಇದು ಖಂಡಿತವಾಗಿಯೂ ನೆರವಾಗಲಿದೆ. ಹೊಸ ಇಸಿಯು ಉತ್ತಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಯಮಹಾ ವೇರಿಯಬಲ್ ವಾಲ್ವ್ ಆಕ್ಟಿವೇಷನ್ (ವಿವಿಎ) ತಂತ್ರಜ್ಞಾನವನ್ನು ಪರಿಚಯಿಸಬಹುದೆಂಬ ವದಂತಿಗಳಿವೆ.

ವಿವಿಎ ತಂತ್ರಜ್ಞಾನವನ್ನು ಪ್ರಸ್ತುತ ಆರ್15 ಬೈಕಿನಲ್ಲಿ ಅಳವಡಿಸಲಾಗಿದ್ದು, ಇದು ರೆವ್ ರೇಂಜ್‍ನಲ್ಲಿ ಸಮತೋಲಿತ ಶಕ್ತಿಯನ್ನು ಒದಗಿಸಲು ಸಹಾಯ ಮಾಡುವುದಾಗಿ ಯಮಹಾ ಕಂಪನಿ ತಿಳಿಸಿದೆ. ಯಮಹಾ ಎಂಟಿ25 ಬೈಕ್ 250 ಸಿಸಿ, ಟ್ವಿನ್ ಸಿಲಿಂಡರ್, ಡಿಒಹೆಚ್‌ಸಿ, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 35.5 ಬಿಹೆಚ್‌ಪಿ ಹಾಗೂ 22.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡ್‍ನ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಈಗಿರುವ ಯಮಹಾ ಎಂಟಿ25 ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್ ಕಾರ್ಯಕ್ಕಾಗಿ ಎರಡೂ ತುದಿಗಳಲ್ಲಿ ಒಂದೇ ರೀತಿಯ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಬೈಕ್‍ನೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಹೊಸ ತಲೆಮಾರಿನ ಎಂಟಿ25 ಬೈಕಿನ ಮುಂಭಾಗದಲ್ಲಿ ತಲೆಕೆಳಗಾಗಿರುವ ಸಸ್ಪೆಂಷನ್ ಸೆಟಪ್ ಅನ್ನು ಅಳವಡಿಸಲಾಗಿದೆ ಎಂಬ ಊಹಾಪೋಹಗಳಿದ್ದರೂ, ಯಮಹಾ ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.

ಹೊಸ ಎಂಟಿ25 ಬೈಕಿನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾದ ಎಂಟಿ15 ಬೈಕಿನಿಂದ ಪಡೆಯಲಾಗಿರುವ ಪೂರ್ಣ ಪ್ರಮಾಣದ ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್‍ಗಳನ್ನು ನಿರೀಕ್ಷಿಸಲಾಗಿದೆ. ಯಮಹಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಎಂಟಿ 25 ಬೈಕ್ ಅನ್ನು ಯಾವಾಗ ಬಿಡುಗಡೆಗೊಳಿಸಲಿದೆ ಎಂಬುದನ್ನು ಖಚಿತಪಡಿಸಿಲ್ಲ. ಆದರೆ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಬೈಕ್ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ.

ಯಮಹಾ ಕಂಪನಿಯು ಕೆಲವು ದಿನಗಳ ಹಿಂದೆ, ಪ್ರಯಾಣಿಕ ಬೈಕುಗಳ ಸೆಗ್‍ಮೆಂಟಿನಿಂದ ಹೊರಬಂದು, ದೇಶಿಯ ಮಾರುಕಟ್ಟೆಯಲ್ಲಿ ಪರ್ಫಾಮೆನ್ಸ್ ಬೈಕುಗಳನ್ನು ಬಿಡುಗಡೆಗೊಳಿಸುವತ್ತ ಗಮನಹರಿಸುವುದಾಗಿ ತಿಳಿಸಿತ್ತು. ಅಪ್‍ಗ್ರೇಡ್ ಆಗಿರುವ ಇಸಿಯು ಕಂಪನಿಯು ಆ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆಯಾಗಿದೆ. ಅಪ್‍ಗ್ರೇಡ್ ಆದ ಇಸಿಯು ಹೊಸ ಬಿಎಸ್6 ನಿಯಮಗಳಿಗೆ ತಕ್ಕಂತಹ ಎಂಜಿನ್ ಹೊಂದಿರಲಿದೆ. ಯಮಹಾ ಕಂಪನಿಯು ಭವಿಷ್ಯದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿರುವ ಬೈಕುಗಳತ್ತ ಎಲ್ಲರ ಗಮನವಿದೆ.


Click it and Unblock the Notifications