ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಲಭ್ಯವಿರುವ ಶೋರೂಂ ಮಾಹಿತಿ ಬಹಿರಂಗ
ಬಜಾಜ್ ನಿರ್ಮಾಣದ ಬಹುನೀರಿಕ್ಷಿತ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಿದ್ದು, ಮೊದಲ ಹಂತವಾಗಿ ಪುಣೆ ಮತ್ತು ಬೆಂಗಳೂರಿನಲ್ಲಿ ಮಾತ್ರವೇ ಹೊಸ ಸ್ಕೂಟರ್ ಖರೀದಿಗೆ ಲಭ್ಯವಾಗಿದೆ.

ದೇಶಾದ್ಯಂತ ಎಲೆಕ್ಟ್ರಿಕ್ ವಾಹನ ಖರೀದಿಸಲು ಗ್ರಾಹಕರಿಗೆ ಆಸಕ್ತಿ ಇದ್ದರೂ ಸಹ ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆಯಿಂದಾಗಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಆಯ್ದ ನಗರಗಳಲ್ಲಿ ಮಾತ್ರವೇ ತಮ್ಮ ಎಲೆಕ್ಟ್ರಿಕ್ ವಾಹನಗಳ ಮಾರಾಟ ಮಾಡಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಚಾರ್ಜಿಂಗ್ ಸ್ಟೆಷನ್‌ಗಳು ಹೆಚ್ಚಿದಂತೆ ಇವಿ ಮಾರಾಟ ವಿಸ್ತರಣೆಗೆ ಯೋಜನೆ ರೂಪಿಸಿವೆ. ಇದೀಗ ಬಜಾಜ್ ಕೂಡಾ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಸಹ ಪುಣೆ ಮತ್ತು ಬೆಂಗಳೂರಿನಲ್ಲಿ ಮಾತ್ರವೇ ಮಾರಾಟ ಮಾಡಲಿದ್ದು, ಅಂಗಸಂಸ್ಥೆಯಾದ ಕೆಟಿಎಂ ಶೋರೂಂಗಳಲ್ಲಿ ಖರೀದಿಗೆ ವ್ಯವಸ್ಥೆ ಮಾಡಿದೆ.

ಭಾರತದಲ್ಲಿ ಕೆಟಿಎಂ ಬೈಕ್‌ಗಳ ಉತ್ಪಾದನೆ ಮತ್ತು ಮಾರುಕಟ್ಟೆ ವಿಭಾಗದ ಹೊಣೆಯನ್ನು ಹೊತ್ತುಕೊಂಡಿರುವ ಬಜಾಜ್ ಸಂಸ್ಥೆಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಆಯ್ದ ಶೋರೂಂಗಳಲ್ಲಿ ಮಾತ್ರವೇ ಮಾರಾಟ ಮಾಡಲಿದ್ದು, ಶೋರೂಂಗಳ ಮಾಹಿತಿಗಳನ್ನು ಹಂಚಿಕೊಂಡಿದೆ.

ಬೆಂಗಳೂರಿನ ಇಂದಿರಾನಗರ ಕೆಟಿಎಂ, ಹೆಚ್ಆರ್‌ಬಿಆರ್ ಲೇಔಟ್ ಕೆಟಿಎಂ, ಲಾಂಗ್‌ಪೋರ್ಡ್ ರೋಡ್ ಕೆಟಿಎಂ, ಮಾರತಹಳ್ಳಿ ಕೆಟಿಎಂ, ರಾಜಾಜಿನಗರ ಕೆಟಿಎಂ, ಯಲಹಂಕ ಕೆಟಿಎಂ, ಬನ್ನೇರುಘಟ್ಟ ರೋಡ್ ಕೆಟಿಎಂ, ವೈಟ್‌ಫೀಲ್ಡ್ ಕೆಟಿಎಂ, ಮೆಖ್ರಿ ಸರ್ಕಲ್ ಕೆಟಿಎಂ, ಎಲೆಕ್ಟ್ರಾನಿಕ್ ಸಿಟಿ ಕೆಟಿಎಂ, ಚಂದ್ರಾ ಲೇಔಟ್ ಕೆಟಿಎಂ, ಬಿಟಿಎಂ ಲೇಔಟ್ ಕೆಟಿಎಂ ಮತ್ತು ಬನಶಂಕರಿ ಕೆಟಿಎಂ ಶೋರೂಂಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಖರೀದಿಗೆ ಲಭ್ಯವಿದೆ.

ಹಾಗೆಯೇ ಪುಣೆ ನಗರದ ವಾಖಡೆವಾಡಿ ಕೆಟಿಎಂ, ಚಾಕನ್ ಕೆಟಿಎಂ, ಖರಾಡಿ ಕೆಟಿಎಂ, ಎಫ್‌ಸಿ ರೋಡ್ ಕೆಟಿಎಂ ಮತ್ತು ಬುದ್ಧ ಗಾರ್ಡನ್ ಕೆಟಿಎಂ ಶೋರೂಂನಲ್ಲಿ ಖರೀದಿಗೆ ಅವಕಾಶ ನೀಡಲಾಗಿದ್ದು, ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿ ಮಾಡಬಹುದಾಗಿದೆ. ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ವೆರಿಯೆಂಟ್ ಅರ್ಬೈನ್ ಮಾದರಿಯು ರೂ. 1 ಲಕ್ಷ ಬೆಲೆ ಹೊಂದಿದ್ದರೆ ಪ್ರೀಮಿಯಂ ವೆರಿಯೆಂಟ್ ಬೆಲೆಯನ್ನು ರೂ.1.15 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಚೇತಕ್ ಇವಿ ಎಂಟ್ರಿ ಲೆವೆಲ್ ಅರ್ಬೈನ್ ಸ್ಕೂಟರ್ ಸಿಟ್ರಶ್ ರಶ್ ಮತ್ತು ಸೈಬರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಪ್ರೀಮಿಯಂ ರೂಪಾಂತರವು ಹ್ಯಾಝಲ್ನಟ್, ಬ್ರೂಕ್ಲಿನ್ ಬ್ಲ್ಯಾಕ್, ಸಿಟ್ರಸ್ ರಶ್, ವೆಲುಟ್ಟೊ ರೊಸ್ಸೊ ಮತ್ತು ಇಂಡಿಗೊ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ.ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ.

ಇಕೋ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಕೂಡಾ ಹೊಂದಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍ನ ಬುಕ್ಕಿಂಗ್ ಜ.15ರಿಂದಲೇ ರೂ.2 ಸಾವಿರ ಮುಂಗಡದೊಂದಿಗೆ ಪ್ರಾರಂಭವಾಗಿದ್ದು, ಫೆಬ್ರುವರಿ ಕೊನೆಯಲ್ಲಿ ಹೊಸ ಸ್ಕೂಟರ್ ವಿತರಣೆಯು ಪ್ರಾರಂಭವಾಗಲಿದೆ.

ಹೊಸ ಸ್ಕೂಟರ್‌ನಲ್ಲಿರುವ ಫೀಚರ್ಸ್
ಚೇತಕ್ ಇವಿ ಸ್ಕೂಟರ್‌ನಲ್ಲಿ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದೆ. ಈ ಆ್ಯಪ್‍ನಲ್ಲಿ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಫೀಚರ್ಸ್‍ಗಳಿವೆ.

ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇದರೊಂದಿಗೆ ಮೊಬಿಲಿಟಿ ಸಾಫ್ಟ್ ವೇರ್ ಹೊಂದಿದೆ.

ಚೇತಕ್ ಇವಿ ಕಾರ್ಯಕ್ಷಮತೆ
ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍ನಂತೆ ಕಂಡರೂ ಹಲವಾರು ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲಿದ್ದು, ಹೊಸ ಸ್ಕೂಟರ್‍ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿಯು ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ. ಹೊಸ ಬ್ಯಾಟರಿ ಮೇಲೆ ಬಜಾಜ್ ಕಂಪನಿಯು 50 ಸಾವಿರ ಕಿ.ಮೀ ಅಥವಾ 3 ವರ್ಷಗಳ ವಾರಂಟಿ ನೀಡಲಿದೆ.

ಜೊತೆಗೆ ಪ್ರತಿ 15 ಸಾವಿರ ಕಿ.ಮೀ ಗೆ ಕಡ್ಡಾಯವಾಗಿ ಸರ್ವೀಸ್ ಒದಗಿಸಲಿದ್ದು, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಿದೆ. ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.


Click it and Unblock the Notifications