ಬಿಎಸ್ 6 ಎಂಜಿನ್ ನಲ್ಲಿ ಬಿಡುಗಡೆಯಾಗಲಿದೆ ಬೆನೆಲ್ಲಿ ಇಂಪೀರಿಯಲ್ 400 ಬೈಕ್
ಬಿಎಸ್ 4 ಎಂಜಿನ್ ಹೊಂದಿರುವ ವಾಹನಗಳು ಹೆಚ್ಚಿನ ಪ್ರಮಾಣದ ವಾಯು ಮಾಲಿನ್ಯವನ್ನು ಉಂಟು ಮಾಡುತ್ತಿವೆ. ಈ ಕಾರಣಕ್ಕೆ ಬಿಎಸ್ 4 ಎಂಜಿನ್ ಹೊಂದಿರುವ ವಾಹನಗಳ ಮಾರಾಟವನ್ನು ಮಾರ್ಚ್ 31ರ ನಂತರ ಸ್ಥಗಿತಗೊಳಿಸಲಾಗುವುದು.

ಹೊಸ ಬಿಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಗೊಳಿಸಿ ಬಿಡುಗಡೆಗೊಳಿಸುತ್ತಿವೆ. ಬೆನೆಲ್ಲಿ ಕಂಪನಿಯು ಸಹ ತನ್ನ ಸರಣಿಯಲ್ಲಿರುವ ಬೈಕುಗಳನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಗೊಳಿಸುತ್ತಿದೆ.

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಅನ್ನು ಶೀಘ್ರದಲ್ಲೇ ಬಿಎಸ್ 6 ಎಂಜಿನ್‌ನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ವರದಿಗಳ ಪ್ರಕಾರ, ಇಂಪೀರಿಯಲ್ 400 ಬಿಎಸ್ 6 ಬೈಕ್ ಅನ್ನು ಏಪ್ರಿಲ್‌ನಲ್ಲಿ ಬಿಡುಗಡೆಗೊಳಿಸಲಾಗುವುದು. ಇದಾದ ನಂತರ ಭಾರತದಲ್ಲಿ ಮಾರಾಟ ಮಾಡುವ ಇತರ ಬೈಕ್ ಗಳನ್ನು ಸಹ ಬಿಎಸ್ 6 ಎಂಜಿನ್ ನಲ್ಲಿ ಬಿಡುಗಡೆಗೊಳಿಸಲಿದೆ.

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಅನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕಿನ ಬೆಲೆಯು ಎಕ್ಸ್ ಶೋ ರೂಂ ದರದಂತೆ ರೂ. 1.69 ಲಕ್ಷಗಳಾಗಿದೆ. ಬಿಎಸ್ 6 ಮಾದರಿಯ ಬೆಲೆ ಇನ್ನೂ ಸ್ವಲ್ಪ ಹೆಚ್ಚಾಗುವ ಸಾಧ್ಯತೆಗಳಿವೆ.

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಕ್ಲಾಸಿಕ್ ಲುಕ್ ಆನ್ನು ಹೊಂದಿದೆ. ಬೆನೆಲಿ ಇಂಪೀರಿಯಲ್ 400 ಬೈಕ್ ಮುಂಭಾಗದಿಂದ ಆಕರ್ಷಕವಾಗಿ ಕಾಣುತ್ತದೆ. ಕ್ಲಾಸಿಕ್ ಲುಕ್ ಗಾಗಿ ದುಂಡಾಗಿರುವ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಈ ಬೈಕ್‌ನಲ್ಲಿ ಟ್ವಿನ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

ಸಸ್ಪೆಂಷನ್ ಗಾಗಿ, ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸರ್ವರ್ ಅಳವಡಿಸಲಾಗಿದೆ. ಸುರಕ್ಷತೆಗಾಗಿ, ಈ ಬೈಕಿನಲ್ಲಿ ಎಬಿಎಸ್ ಹೊಂದಿರುವ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

ಬೆನೆಲ್ಲಿ ಇಂಪೀರಿಯಲ್ 400 ಬೈಕಿನಲ್ಲಿ 373 ಸಿಸಿಯ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 5500 ಆರ್‌ಪಿಎಂನಲ್ಲಿ 19 ಬಿಹೆಚ್‌ಪಿ ಪವರ್ ಹಾಗೂ 3500 ಆರ್‌ಪಿಎಂನಲ್ಲಿ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡಿನ ಗೇರ್ ಬಾಕ್ಸ್ ಹೊಂದಿದೆ.

ಇಂಪೀರಿಯಲ್ 400 ಬೈಕ್, ಮುಂಭಾಗದಲ್ಲಿ 19 ಇಂಚಿನ ಹಾಗೂ ಹಿಂಭಾಗದಲ್ಲಿ 18 ಇಂಚಿನ ಟಯರ್‌ಗಳನ್ನು ಹೊಂದಿದೆ. ಈ ಬೈಕ್ ಅನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹಾಗೂ ಜಾವಾ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








