ವೈರಸ್ ಭೀತಿ: ಆನ್‌ಲೈನ್ ಮಾರಾಟ ಮಳಿಗೆ ಆರಂಭಿಸಿದ ಹೀರೋ ಮೋಟೊಕಾರ್ಪ್
ಲಾಕ್‌ಡೌನ್ ವಿನಾಯ್ತಿ ನಂತರ ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ದಿನದಿಂದ ಏರಿಕೆಯಾಗುತ್ತಲೇ ಇದ್ದು, ಆತಂಕದಲ್ಲಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ ವಹಿವಾಟು ನಡೆಸಲು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನತ್ತ ಹೆಚ್ಚು ಗಮನಹರಿಸಿವೆ.

ದೇಶದ ಅತಿದೊಡ್ಡ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಬೈಕ್ ಕೂಡಾ ಈಗಾಗಲೇ ಬೈಕ್ ಉತ್ಪಾದನೆ ಮತ್ತು ಮಾರಾಟಕ್ಕೆ ಮರುಚಾಲನೆ ನೀಡಿದ್ದು, ಸಂಕಷ್ಟದ ಸಮಯದಲ್ಲೂ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ. ಆದರೆ ಕರೋನಾ ವೈರಸ್ ಹೆಚ್ಚಳದಿಂದಾಗಿ ಆತಂಕದಲ್ಲಿರುವ ಹೀರೋ ಕಂಪನಿಯು ಸುರಕ್ಷಿತ ವ್ಯಾಪಾರ ವಹಿವಾಟಿಗಾಗಿ ಹೊಸದಾಗಿ ಇ-ಶಾಪ್ ಜಾಲತಾಣಣವನ್ನು ಪರಿಚಯಿಸಿದೆ.

ಇ-ಶಾಪ್ ಮೂಲಕ ನಿಮಗೆ ಇಷ್ಟವಾದ ಬೈಕ್ ಮಾದರಿಗಳನ್ನು ಮನೆಯಲ್ಲೇ ಕುಳಿತು ಅತಿ ಸುಲಭವಾಗಿ ಹೊಸ ವಾಹನವನ್ನು ಖರೀದಿ ಮಾಡಬಹುದಾಗಿದ್ದು, ವಾಹನ ಖರೀದಿಗೆ ಮುನ್ನ ಟೆಸ್ಟ್ ರೈಡ್ ವಾಹನ ಕೂಡಾ ನಿಮ್ಮ ಮನೆ ಬಾಗಿಲಿಗೆ ಬರಲಿದೆ.

ಕರೋನಾ ವೈರಸ್ ಹೆಚ್ಚುತ್ತಿರುವುದರಿಂದ ಗ್ರಾಹಕರನ್ನು ಅಧಿಕೃತ ಮಾರಾಟ ಮಳಿಗೆಗಳಿಗೆ ಆಗಮಿಸುವುದನ್ನು ತಪ್ಪಿಸಲು ಇ-ಶಾಪ್ ಆರಂಭಿಸಿರುವ ಹೀರೋ ಕಂಪನಿಯು ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷೆಯ ದೃಷ್ಠಿಯಿಂದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗೆ ಹೆಚ್ಚು ಆದ್ಯತೆ ನೀಡುತ್ತಿದೆ.

ಇನ್ನು ಲಾಕ್‌ಡೌನ್‌ಗೂ ಮೊದಲು ಸುಮಾರು 2 ಲಕ್ಷಕ್ಕೂ ಅಧಿಕ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದ್ದ ಹೀರೋ ಕಂಪನಿಯು ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನು ಹೆಚ್ಚಿಸಿದ್ದು, ವೈರಸ್ ಹರಡದಂತೆ ಪ್ರತಿ ಹಂತದಲ್ಲೂ ಗರಿಷ್ಠ ಮುನ್ನಚ್ಚೆರಿಕೆ ಕ್ರಮಗಳನ್ನು ಜಾರಿಗೆ ತಂದಿದೆ.

ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ವಾಣಿಜ್ಯ ವ್ಯಾಪಾರಗಳು ನೆಲಕಚ್ಚಿವೆ. ಭಾರತದಲ್ಲೂ ಲಾಕ್‌ಡೌನ್ ವಿಧಿಸಿದ ದಿನದಿಂದಲೂ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದ್ದರಿಂದ ಆಟೋ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬಿಕ್ಕಟ್ಟು ಶುರುವಾಗಿದೆ.

ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಈಗಲೂ ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿದ್ದು, ದ್ವಿಚಕ್ರ ವಾಹನಗಳಿಂತಲೂ ಕಾರುಗಳ ಮಾರಾಟವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.


Click it and Unblock the Notifications