ನಿಗದಿಯಾಯ್ತು ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ದಿನಾಂಕ
ಟಿವಿಎಸ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಲವು ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಇದಾದ ನಂತರ ಈ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಟಿವಿಎಸ್ ಕಂಪನಿಯು ಈ ಸ್ಕೂಟರಿನ ಬಿಡುಗಡೆಯನ್ನು ಟೀಸರ್ ಬಿಡುಗಡೆಗೊಳಿಸುವುದರ ಮೂಲಕ ಖಚಿತಪಡಿಸಿದೆ.

ಈ ಎಲೆಕ್ಟ್ರಿಕ್ ಸ್ಕೂಟರಿನ ಬಿಡುಗಡೆಯ ಬಗ್ಗೆ ತಿಳಿಯುವ ಮುನ್ನ ಈ ಸ್ಕೂಟರಿನ ಬಗ್ಗೆ ತಿಳಿಯೋಣ. ಕ್ರೆಯೊನ್ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಕಂಪನಿಯು ಬಿಡುಗಡೆಗೊಳಿಸಲಿರುವ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರಿಂದ ಈ ಸ್ಕೂಟರಿನ ಬಗ್ಗೆ ಹೆಚ್ಚು ನಿರೀಕ್ಷೆಗಳಿವೆ.

ಕ್ರೆಯೊನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಮಿಳುನಾಡಿನ ವಿವಿಧೆಡೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಸ್ಪಾಟ್ ಟೆಸ್ಟ್ ಮಾಡುವಾಗ ಈ ಸ್ಕೂಟರಿನ ಚಿತ್ರಗಳನ್ನು ತೆಗೆಯಲಾಗಿತ್ತು. ಈ ಚಿತ್ರಗಳು ಆಟೋಮೊಬೈಲ್ ಪ್ರಿಯರ ಗಮನವನ್ನು ಸೆಳೆದಿವೆ.

ಟಿವಿಎಸ್ ಕಂಪನಿಯ ವಾಹನಗಳ ಮೇಲಿರುವ ನಂಬಿಕೆಯಿಂದ ಜನರು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎದುರು ನೋಡುತ್ತಿದ್ದಾರೆ. ಕ್ರೆಯೊನ್ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿರುವ ಫೀಚರ್‍ಗಳ ಬಗ್ಗೆ ಟಿವಿಎಸ್ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಟಿವಿಎಸ್ ಕಂಪನಿಯು ಈ ಮೊದಲು ಕ್ರೆಯೊನ್ ಸ್ಕೂಟರಿನ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿತ್ತು. ಇದರ ಆಧಾರದ ಮೇಲೆ ಹೇಳುವುದಾದರೆ ಈ ಸ್ಕೂಟರ್ ಹೆಚ್ಚು ದೂರ ಚಲಿಸುವುದರ ಜೊತೆಗೆ ಆಧುನಿಕ ಟೆಕ್ನಾಲಜಿಯನ್ನು ಹೊಂದಿರುವ ಸಾಧ್ಯತೆಗಳಿವೆ.

ಕ್ರೆಯೊನ್ ಎಲೆಕ್ಟ್ರಿಕ್ ಸ್ಕೂಟರ್ ಜನಪ್ರಿಯ ಸ್ಕೂಟರ್‍ಗಳಿಗೆ ಪೈಪೋಟಿ ನೀಡಬೇಕಿರುವ ಕಾರಣಕ್ಕೆ ಪ್ರೀಮಿಯಂ ಫೀಚರ್‍ಗಳನ್ನು ನೀಡಲಿದೆ. ಕ್ರೆಯೊನ್ ಎಲೆಕ್ಟ್ರಿಕ್ ಸ್ಕೂಟರ್‍ಗಳ ಸೆಗ್‍ಮೆಂಟಿನಲ್ಲಿ ಅಥೆರ್ ಹಾಗೂ ಬಜಾಜ್ ಚೇತಕ್ ಸ್ಕೂಟರ್‍ಗಳಿಗೆ ಪೈಪೋಟಿ ನೀಡಲಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿ 4 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಿ ಫಾಸ್ಟ್ ಚಾರ್ಜರ್‍ಗಳನ್ನು ನೀಡಲಾಗುವುದು. ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ 80ರಿಂದ 100 ಕಿ.ಮೀವರೆಗೂ ಚಲಿಸುತ್ತದೆ.

ಇದರ ಜೊತೆಗೆ ಈ ಸ್ಕೂಟರಿನಲ್ಲಿ ಜಿಪಿಎಸ್ ಲೈವ್ ಟ್ರಾಕಿಂಗ್, ಸೆಲ್‍ಫೋನ್ ಚಾರ್ಜಿಂಗ್ ಪೋರ್ಟ್, ಬ್ಲೂಟೂತ್ ಕನೆಕ್ಟಿವಿಟಿ, ಪಾರ್ಕ್ ಅಸಿಸ್ಟ್, ಆ್ಯಂಟಿ ಥೆಫ್ಟ್ ಟೆಕ್ನಾಲಜಿ, ರೈಡಿಂಗ್ ಮೋಡ್‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ.

ಟಿವಿಎಸ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿತ್ತು. ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡುವಾಗ ಕಾಣಿಸಿಕೊಂಡಿದೆ.

ಟಿವಿಎಸ್ ಕಂಪನಿಯು ನಿನ್ನೆ ಕ್ರೆಯೊನ್ ಸ್ಕೂಟರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಟೀಸರ್‍ನಲ್ಲಿ ಗೋಡೆಗೆ ಅಳವಡಿಸಿರುವ ಚಾರ್ಜಿಂಗ್ ಪಾಯಿಂಟ್‍ಗಳನ್ನು ಹಾಗೂ ಮರೆಮಾಡಲಾಗಿರುವ ಕ್ರೆಯೊನ್ ಸ್ಕೂಟರ್ ಅನ್ನು ಕಾಣಬಹುದು. ಈ ಸ್ಕೂಟರ್ ಅನ್ನು ಇದೇ ತಿಂಗಳ 25ನೇ ತಾರೀಕಿನಂದು ಬಿಡುಗಡೆಗೊಳಿಸುವುದಾಗಿ ಹೇಳಲಾಗುತ್ತಿದೆ.

ಈ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸ್ಕೂಟರಿನ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಟೀಸರ್ ಅನ್ನು ಹಲವಾರು ಜನರು ವೀಕ್ಷಿಸಿದ್ದಾರೆ. ಟೀಸರ್ ಮಾಡುವ ಮೊದಲು ಈ ಸ್ಕೂಟರ್ ಸ್ಪಾಟ್ ಟೆಸ್ಟ್ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿತ್ತು.
ಸ್ಕೂಟರಿನ ಬಾಡಿಯನ್ನು ಸ್ಟಿಕ್ಕರ್‍ಗಳಿಂದ ಮುಚ್ಚಲಾಗಿದ್ದರೂ ಇದರಲ್ಲಿದ್ದ ಕೆಲವು ಡಿವೈಸ್‍ಗಳನ್ನು ಗಮನಿಸಬಹುದಿತ್ತು. ಈ ಸ್ಕೂಟರಿನಲ್ಲಿರುವ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬ್ಯಾಟರಿಯ ಚಾರ್ಜ್, ಸ್ಪೀಡೊಮೀಟರ್ ಹಾಗೂ ಒಡೋಮೀಟರ್‍ಗಳ ಮಾಹಿತಿಯನ್ನು ತೋರಿಸುತ್ತದೆ.

ಇದರ ಜೊತೆಗೆ ಈ ಸ್ಕೂಟರಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ವ್ಹೀಲ್, ಟೆಲಿಸ್ಕೋಪಿಕ್ ಸಸ್ಪೆಂಷನ್, ಹೆಚ್ಚು ಪ್ರೀಮಿಯಂ ಅಂಶಗಳಿಲ್ಲದ ಆದರೆ ಆರಾಮದಾಯಕವಾದ ಫುಟ್‍ಬೋರ್ಡ್‍ಗಳನ್ನು ನೀಡಲಾಗಿದೆ. ಇದು ಸಾಮಾನ್ಯ ಸ್ಕೂಟರ್‍ನಂತೆ ಕಾಣುತ್ತದೆ. ಈ ಸ್ಕೂಟರಿನ ಬೆಲೆ ಮತ್ತಿತರ ವಿವರಗಳು ಜನವರಿ 25ರಂದು ಸ್ಕೂಟರ್ ಬಿಡುಗಡೆಯಾದ ನಂತರ ತಿಳಿಯಲಿದೆ.


Click it and Unblock the Notifications








