ಬೇಡಿಕೆ ಆಧಾರದ ಮೇಲೆ ಇವಿ ಸ್ಕೂಟರ್ ಮಾರಾಟ ಜಾಲ ವಿಸ್ತರಿಸುತ್ತಿದೆ ಬಜಾಜ್ ಆಟೋ
ಬಜಾಜ್ ಆಟೋ ಕಂಪನಿಯು ಬೆಂಗಳೂರು ಮತ್ತು ಪುಣೆಯಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ನಂತರ ಇದೀಗ ವಿವಿಧ ಹೊಸ ನಗರಗಳಲ್ಲಿ ಮಾರಾಟ ವಿಸ್ತರಣೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಶೀಘ್ರದಲ್ಲೇ ಕಂಪನಿಯು ನಾಗಪುರ್‌ನಲ್ಲೂ ಹೊಸ ಸ್ಕೂಟರ್ ಆರಂಭಕ್ಕೆ ಸಿದ್ದವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿನ ಪೆಟ್ರೋಲ್ ಸ್ಕೂಟರ್ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಇವಿ ಸ್ಕೂಟರ್ ಮಾರಾಟವು ಶೇ. 1ಕ್ಕಿಂತಲೂ ಕಡಿಮೆ ಪ್ರಮಾಣದ ಬೇಡಿಕೆಯಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆಯಿಂದಾಗಿ ಇವಿ ವಾಹನ ಖರೀದಿದಾರರ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸದ್ಯ ಎಥರ್ ಎನರ್ಜಿ, ಟಿವಿಎಸ್ ಮೋಟಾರ್, ಬಜಾಜ್ ಆಟೋ, ಹೀರೋ ಎಲೆಕ್ಟ್ರಿಕ್ ಮತ್ತು ಒಕಿನಾವ ನಡುವೆ ಉತ್ತಮ ಪೈಪೋಟಿಯಿದ್ದು, ಚೇತಕ್ ಇವಿ ಮಾದರಿಯೊಂದಿಗೆ ಬಜಾಜ್ ಕಂಪನಿಯು ಇತ್ತೀಚೆಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಕಳೆದ ವರ್ಷ ಫೆಬ್ರವರಿಯಲ್ಲೇ ಬಿಡುಗಡೆಗೊಂಡಿದ್ದ ಬಜಾಜ್ ಚೇತಕ್ ಇವಿ ಸ್ಕೂಟರ್ ಮಾದರಿಯು ಕಳೆದ ವರ್ಷಕ್ಕಿಂತ ಈ ವರ್ಷದ ಆರಂಭದಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪೆಟ್ರೋಲ್ ಬೆಲೆ ಹೆಚ್ಚಳ ಪರಿಣಾಮ ಹೊಸ ಸ್ಕೂಟರ್ ಖರೀದಿದಾರರು ಇವಿ ಸ್ಕೂಟರ್ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.

ಚೇತಕ್ ಇವಿ ಹೊಸ ಸ್ಕೂಟರ್ ಬಿಡುಗಡೆಗೊಂಡಿದ್ದ ಆರಂಭದಲ್ಲಿ ಬೆಂಗಳೂರು ಮತ್ತು ಪುಣೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿತ್ತು. ಇತ್ತೀಚೆಗೆ ಚೆನ್ನೈ ಮತ್ತು ಹೈದ್ರಾಬಾದ್‌ನಲ್ಲೂ ಮಾರಾಟ ಆರಂಭಗೊಂಡಿದ್ದು, ಶೀಘ್ರದಲ್ಲೇ ನಾಗಪುರ್‌ದಲ್ಲೂ ಖರೀದಿಗೆ ಲಭ್ಯವಾಗಲಿದೆ.

ಹೊಸ ಚೇತಕ್ ಇವಿ ಮಾದರಿಯು ಅರ್ಬೈನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಶೋರೂಂ ಪ್ರಕಾರ ರೂ. 1.42 ಲಕ್ಷ ಮತ್ತು ಪ್ರೀಮಿಯಂ ವೆರಿಯೆಂಟ್‌ಗೆ ರೂ.1.44 ಲಕ್ಷ ಬೆಲೆ ಹೊಂದಿದ್ದು, ಕಳೆದ ವಾರವಷ್ಟೇ ಹೊಸ ಸ್ಕೂಟರ್ ಬೆಲೆ ಹೆಚ್ಚಳ ಮಾಡಿರುವುದು ಗ್ರಾಹಕರಿಗೆ ತುಸು ಹೊರೆಎನ್ನಿಸಲಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇಕೋ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ.

ಹೊಸ ಇವಿ ಸ್ಕೂಟರ್‌ನಲ್ಲಿ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದ್ದು, ಈ ಆ್ಯಪ್ ಮೂಲಕ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಫೀಚರ್ಸ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿರ್ವಸ್ ಅಸಿಸ್ಟ್ ಮೋಡ್‌ನೊಂದಿಗೆ ಮೊಬಿಲಿಟಿ ತಂತ್ರಜ್ಞಾನ ಹೊಂದಿದೆ.

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್ನಂತೆ ಕಂಡರೂ ಹಲವಾರು ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಹೊಸ ಸ್ಕೂಟರ್ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿಯು ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ.

ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ನೀಡಲಾಗಿದ್ದು, ಪ್ರತಿ 15 ಸಾವಿರ ಕಿ.ಮೀ ಗೆ ಒಂದು ಬಾರಿ ಸರ್ವೀಸ್ ಸೇರಿದಂತೆ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ.


Click it and Unblock the Notifications