ನಮ್ಮ ಬೆಂಗಳೂರಿನಲ್ಲಿ ಬಜಾಜ್ ಚೇತಕ್ ಇವಿ ಖರೀದಿಗೆ ಅತಿ ಹೆಚ್ಚು ಬೇಡಿಕೆ
ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಬಜಾಜ್ ನಿರ್ಮಾಣದ ಚೇತಕ್ ಇವಿ ಮಾದರಿಯು ಮುಂಚೂಣಿ ಸಾಧಿಸುತ್ತಿದ್ದು, ಹೊಸ ಸ್ಕೂಟರ್ ದುಬಾರಿ ಬೆಲೆ ನಡುವೆಯೂ ಪ್ರತಿ ಸ್ಪರ್ಧಿ ಸ್ಕೂಟರ್‌ಗಳಿಗೆ ಪೈಪೋಟಿ ನೀಡುವ ಮೂಲಕ ನಮ್ಮ ಬೆಂಗಳೂರು ಮತ್ತು ಪುಣೆಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಬಜಾಜ್ ಆಟೋ ಕಂಪನಿಯು ಚೇತಕ್ ಇವಿಯನ್ನು ಮೊದಲ ಬಾರಿಗೆ ಬೆಂಗಳೂರು ಮತ್ತು ಪುಣೆಯಲ್ಲಿ ಮಾರಾಟ ಆರಂಭಿಸುವ ಮೂಲಕ ಇದೀಗ ವಿವಿಧ ನಗರಗಳಿಗೂ ಮಾರಾಟ ವಿಸ್ತರಣೆ ಮಾಡುತ್ತಿದ್ದು, ಕಳೆದ ವರ್ಷದ ಆರಂಭದಲ್ಲಿ ಬೆರಳಣಿಕೆಯಷ್ಟು ಮಾರಾಟ ಹೊಂದಿದ್ದ ಹೊಸ ಚೇತಕ್ ಇವಿ ಸ್ಕೂಟರ್‌ಗೆ ಇದೀಗ ಸಾವಿರಾರು ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದಾರೆ.

ಪೆಟ್ರೋಲ್ ದರ ಹೆಚ್ಚುತ್ತಿರುವ ಪರಿಣಾಮ ಹೊಸ ಸ್ಕೂಟರ್ ಖರೀದಿದಾರರು ಇವಿ ವಾಹನಗಳಿಗೆ ಆದ್ಯತೆ ನೀಡುತ್ತಿದ್ದು, ಕಳೆದ ಐದಾರು ತಿಂಗಳಿನಿಂದ ಚೇತಕ್ ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆ ಜೋರಾಗಿದೆ.

ಚೇತಕ್ ಇವಿ ಮಾದರಿಯು ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ದುಬಾರಿ ಬೆಲೆ ಹೊಂದಿದ್ದರೂ ಕೂಡಾ ವಿನೂತನ ಡಿಸೈನ್, ಅತ್ಯುತ್ತಮವಾದ ಬ್ಯಾಟರಿ ಪ್ಯಾಕ್ ಪರಿಣಾಮ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಬೇಡಿಕೆ ಆಧಾರದ ಮೇಲೆ ಬುಕ್ಕಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಕಂಪನಿಯು ಇದೀಗ ಬುಕ್ಕಿಂಗ್ ಪ್ರಕ್ರಿಯೆಯನ್ನು ಪುನಾರಂಭಿಸಿದೆ.

ಬೆಂಗಳೂರು ಮತ್ತು ಪುಣೆಯಲ್ಲಿ ಚೇತಕ್ ಇವಿ ಮಾರಾಟ ಆರಂಭಿಸಿದ ನಂತರ ಚೆನ್ನೈ ಮತ್ತು ಹೈದ್ರಾಬಾದ್‌ನಲ್ಲೂ ಇವಿ ಸ್ಕೂಟರ್ ಮಾರಾಟ ಆರಂಭಿಸಿದ್ದ ಬಜಾಜ್ ಕಂಪನಿಯು ಮೊನ್ನೆಯಷ್ಟೇ ನಾಗಪುರ್‌ದಲ್ಲೂ ಮಾರಾಟ ಆರಂಭಿಸಿತ್ತು.

ಎರಡನೇ ಹಂತದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಮತ್ತಷ್ಟು ನಗರಗಳಲ್ಲಿ ಹೊಸ ಸ್ಕೂಟರ್ ಮಾರಾಟ ವಿಸ್ತರಿಸಲು ಸಜ್ಜಾಗಿರುವ ಬಜಾಜ್ ಕಂಪನಿಯು ಮೈಸೂರು, ಮಂಗಳೂರು ಮತ್ತು ಔರಾಂಗಾಬಾದ್ ನಗರಗಳಲ್ಲೂ ಹೊಸ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದೆ.

ಹೊಸ ಚೇತಕ್ ಇವಿ ಮಾದರಿಯು ಅರ್ಬೈನ್ ಮತ್ತು ಪ್ರೀಮಿಯಂ ಎನ್ನುವ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಅರ್ಬೈನ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.42 ಲಕ್ಷ ಮತ್ತು ಪ್ರೀಮಿಯಂ ವೆರಿಯೆಂಟ್‌ಗೆ ರೂ.1.44 ಲಕ್ಷ ಬೆಲೆ ಹೊಂದಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 3kWh ಲೀಥಿಯಂ ಅಯಾನ್ ಬ್ಯಾಟರಿ ಮತ್ತು 4.08kW ಎಲೆಕ್ಟ್ರಿಕ್ ಮೋಟಾರ್ ಮೂಲಕ ಇಕೋ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ.

ಹೊಸ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿರ್ವಸ್ ಅಸಿಸ್ಟ್ ಮೋಡ್‌ನೊಂದಿಗೆ ಮೊಬಿಲಿಟಿ ತಂತ್ರಜ್ಞಾನ ಹೊಂದಿದೆ.

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್ನಂತೆ ಕಂಡರೂ ಹಲವಾರು ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಹೊಸ ಸ್ಕೂಟರ್ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿಯು ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ.

ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ನೀಡಲಾಗಿದ್ದು, ಪ್ರತಿ 15 ಸಾವಿರ ಕಿ.ಮೀ ಗೆ ಒಂದು ಬಾರಿ ಸರ್ವೀಸ್ ಸೇರಿದಂತೆ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ.


Click it and Unblock the Notifications