ಡಕಾರ್ ರ‍್ಯಾಲಿ 2021: ಮೂರನೇ ಹಂತದ ರ‍್ಯಾಲಿಯಲ್ಲೂ ಮುಂದುವರಿದ ಹೋಂಡಾ, ಕೆಟಿಎಂ ತಂಡಗಳ ಪ್ರಾಬಲ್ಯ
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 2021ರ ಡಕಾರ್ ರ‍್ಯಾಲಿಯು ಮೂರನೇ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರತಿ ಹಂತವು ಕೂಡಾ ಭಾರೀ ಪೈಪೋಟಿಯೊಂದಿಗೆ ಮುಂದುವರಿಯುತ್ತಿದೆ. ಕಳೆದ ವರ್ಷದ ವಿಜೇತ ತಂಡ ಮಾನ್ಸ್ಟರ್ ಎನರ್ಜಿ ಹೋಂಡಾ ಕಂಪನಿಯು ಪ್ರಸಕ್ತ ವರ್ಷದ ಮೂರು ಹಂತದ ರ‍್ಯಾಲಿಯಲ್ಲೂ ಮುಂಚೂಣಿಯಲ್ಲಿದೆ.

ಪ್ರಸಕ್ತ ವರ್ಷದ 43ನೇ ಆವೃತ್ತಿಯ ಡಕಾರ್ ರ‍್ಯಾಲಿಯು ಈ ತಿಂಗಳ 15ರ ತನಕ ನಡೆಯಲಿದ್ದು, ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯಲ್ಲಿ ಇದೀಗ ಮೂರು ಹಂತಗಳು ಪೂರ್ಣಗೊಂಡಿವೆ. ಇಂದು ವಾಡಿ ಅಡ್-ದವಾಸಿರ್ ನಗರದಿಂದ ಆರಂಭವಾಗಿದ್ದ ಮೂರನೇ ಹಂತದ ರ‍್ಯಾಲಿಯು ಕೊನೆಗೆ ವಾಡಿ ಅಡ್-ದವಾಸಿರ್ ನಗರಕ್ಕೆ ಬಂದು ತಲುಪಬೇಕಿತ್ತು. ಒಟ್ಟು 629 ಕಿ.ಮೀ ಒಳಗೊಂಡಿದ್ದ ಮೂರನೇ ಹಂತದಲ್ಲಿ 403ಕಿ.ಮೀ ವಿಶೇಷ ಮಾರ್ಗವೆಂದು ಘೋಷಣೆ ಮಾಡಲಾಗಿತ್ತು.

ವಾಡಿ ಅಡ್-ದವಾಸಿರ್‌ನಿಂದ ಆರಂಭವಾದ ಮೂರನೇ ಹಂತದ ರ‍್ಯಾಲಿಯಲ್ಲಿ ಶೇ.78ರಷ್ಟು ಮಾರ್ಗವು ಮರಳುಗಾಡಿನಿಂದ ಕೂಡಿದ್ದರೆ ಇನ್ನುಳಿದ ಶೇ. 22ರಷ್ಟು ರೈಡಿಂಗ್ ಮಾರ್ಗವು ಮಣ್ಣುಮಿಶ್ರಿತ ರಸ್ತೆ ಮತ್ತು ಮಣ್ಣು ದಿಣ್ಣೆಗಳನ್ನು ಒಳಗೊಂಡಿತ್ತು.

ಒಂದನೇ ಮತ್ತು ಎರಡನೇ ಹಂತದ ರ‍್ಯಾಲಿಯಲ್ಲಿ ವಿಪರೀತ ಧೂಳಿನ ಸಮಯಸ್ಯೆಯನ್ನು ಎದುರಿಸಿದ್ದ ಬೈಕ್ ರೈಡರ್‌ಗಳಿಗೆ ಮೂರನೇ ಹಂತದಲ್ಲಿ ಪ್ರತಿಕೂಲಕರ ವಾತಾವರಣವಿದ್ದರೂ ವಿಶೇಷ ಮಾರ್ಗದಲ್ಲಿನ ಹಲವು ಕಡೆಗಳಲ್ಲಿ ಕಠಿಣ ಸವಾರಿಯನ್ನು ಎದುರಿಸಬೇಕಾಯಿತು.

43ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿನ ಪ್ರತಿ ಹಂತದಲ್ಲೂ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಮಾನ್ಸ್ಟರ್ ಎನರ್ಜಿ ಹೋಂಡಾ ಮತ್ತು ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಮೂರನೇ ಹಂತದ ರ‍್ಯಾಲಿಯಲ್ಲಿ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ ಟೋಬಿ ಪ್ರೈಸ್ ಬೋರ್ಟ್ ಮೊದಲ ಸ್ಥಾನವನ್ನು, ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಕೆವಿನ್ ಬೆನವಿಡ್ಸ್ ಎರಡನೇ ಸ್ಥಾನವನ್ನು ಮತ್ತು ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ ಮಥಿಯಾಸ್ ವಾಕ್ನರ್ ಮೂರನೇ ಸ್ಥಾನವನ್ನು ಪಡೆದುಕೊಂಡರು.

ಕೆಟಿಎಂ ಫ್ಯಾಕ್ಟರಿ ತಂಡದ ಟೋಬಿ ಪ್ರೈಸ್ ಬೋರ್ಟ್ 43ನೇ ಆವೃತ್ತಿಯ ಡಕಾರ್ ರ‍್ಯಾಲಿಯ ಮೊದಲ ಎರಡು ಹಂತದಲ್ಲೂ ಉತ್ತಮ ಸ್ಥಾನ ಕಾಯ್ದುಕೊಂಡಿದ್ದು, ತದನಂತರದಲ್ಲಿ ಮಾನ್ಸ್ಟರ್ ಎನರ್ಜಿ ಹೋಂಡಾ ರೈಡರ್‌ಗಳು ಭಾರೀ ಪೈಪೋಟಿ ನಡೆಸುತ್ತಿದ್ದಾರೆ.

ಮುನ್ನಡೆ ಕಾಯ್ದುಕೊಂಡ ಭಾರತೀಯ ರೈಡರ್‌ಗಳು
2021ರ ಡಕಾರ್ ರ‍್ಯಾಲಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಹೀರೋ ಮೋಟೋಸ್ಪೋರ್ಟ್, ಶೆರ್ಕೊ ಪ್ಯಾಕ್ಟರಿ ಮತ್ತು ಟಿವಿಎಸ್ ರೇಸಿಂಗ್ ತಂಡದಿಂದ ಪ್ರಾಯೋಜಕತ್ವ ಪಡೆದಿರುವ ರೈಡರ್‌ಗಳು ಮೂರನೇ ಹಂತದ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಹೀರೋ ಮೋಟೋಸ್ಪೋರ್ಟ್ ಪ್ರತಿನಿಧಿಸುತ್ತಿರುವ ಕನ್ನಡಿಗ ಸಿಎಸ್ ಸಂತೋಷ್ 36ನೇ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಮೂವರು ರೈಡರ್‌ಗಳನ್ನು ಒಳಗೊಂಡಿರುವ ಹೀರೋ ಮೋಟೋಸ್ಪೋರ್ಟ್ ತಂಡದಲ್ಲಿ ಸಿಎಸ್ ಸಂತೋಷ್ ನಂತರ ಜೊಕ್ವಿಮ್ ರೋಡ್ರಿಗೊಸ್ ಇಂದಿನ ರ‍್ಯಾಲಿಯಲ್ಲಿ 20ನೇ ಸ್ಥಾನಕ್ಕೆ ಮತ್ತು ಸ್ಟೆಬಾಸ್ಟಿನ್ ಬ್ರುಲೆರ್ 21ನೇ ಸ್ಥಾನವನ್ನು ಪಡೆದುಕೊಂಡರು.

ಶೆರ್ಕೊ ಫಾಕ್ಟರಿ ತಂಡವನ್ನು ಪ್ರತಿನಿಧಿಸುತ್ತಿರುವ ರುಯಿ ಗೊನ್ಕಾಲ್ವ್ಸ್ 9ನೇ ಸ್ಥಾನ ಪಡೆದುಕೊಂಡಿದರೆ ಇನ್ನಿಬ್ಬರು ರೈಡರ್‌ಗಳಾದ ಲೊರೆಂಜೊ ಸ್ಯಾಂಟೊಲಿನೊ 13ನೇ ಸ್ಥಾನಕ್ಕೆ ಮತ್ತು ಹರಿತ್ ನೋವಾ 27ನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಇನ್ನುಳಿದಂತೆ ಡಕಾರ್ ರ‍್ಯಾಲಿಯಲ್ಲಿ ಭಾಗಿಯಾಗಿರುವ ಕ್ವಾರ್ಡ್ರಿಸೈಕಲ್ ವಿಭಾಗದಲ್ಲಿ ಡ್ರ್ಯಾಗನ್ ರ‍್ಯಾಲಿ ತಂಡದ ನಿಕೋಲಸ್ ಕ್ಯಾವಿಗ್ಲಿಯಾಸ್ಸೊ, ಕಾರು ವಿಭಾಗದಲ್ಲಿ ಟೊಯೊಟಾ ಗ್ಯಾಜೊ ರೇಸಿಂಗ್ ವಿಭಾಗದ ನಾಸರ್ ಅಲ್-ಅಟಿಯಾ ಮತ್ತು ಮ್ಯಾಥ್ಯೂ ಬೌಮೆಲ್, ಹಗುರ ವಾಹನ ವಿಭಾಗದಲ್ಲಿ ಸೌತ್ ರೇಸಿಂಗ್ ತಂಡದ ಫ್ರಾನ್ಸಿಸ್ಕೊ ಲೋಪೆಜ್ ಕಾಂಟಾರ್ಡೊ ಮತ್ತು ಜುವಾನ್ ಪ್ಯಾಬ್ಲೊ ಲಾಟ್ರಾಚ್ ವಿನಾಗ್ರೆ ಮತ್ತು ಟ್ರಕ್ ವಿಭಾಗದಲ್ಲಿ ಮಜ್-ಸ್ಪೋರ್ಟಾಟೊ ತಂಡದ ಸಿಯರ್ ವಿಜೊವಿಚ್, ಪಾವೆಲ್ ಹರನಿನ್ ಮತ್ತು ಆಂಟನ್ ಜಪರೋಷ್ಚಂಕಾ ಮುನ್ನಡೆ ಕಾಯ್ದುಕೊಂಡಿದ್ದಾರೆ.


Click it and Unblock the Notifications








