ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೀರೋ ಎಲೆಕ್ಟ್ರಿಕ್ ಹೊಸ ದಾಖಲೆ
ದುಬಾರಿ ಇಂಧನ ಪರಿಣಾಮ ವಿವಿಧ ಎಲೆಕ್ಟ್ರಿಕ್ ವಾಹನ ಕಂಪನಿಗಳು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕೂಡಾ ಕಳೆದ ಕೆಲ ತಿಂಗಳಿನಿಂದ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಪರಿಣಾಮ ಇವಿ ವಾಹನಗಳ ಬಳಕೆಯು ದ್ವಿಗುಣಗೊಂಡಿದ್ದು, ಹೊಸ ಎಲೆಕ್ಟ್ರಿಕ್ ವಾಹನ ಮಾದರಿಗಳ ವಿಚಾರಣೆಯೂ ಕೂಡಾ ಹೆಚ್ಚಿದೆ. ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವ ಇವಿ ವಾಹನಗಳ ಖರೀದಿಗೆ ಆಸಕ್ತಿ ತೋರುತ್ತಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ಇವಿ ಸ್ಕೂಟರ್ ಮಾರಾಟ ಹೊಂದಿರುವ ಹೀರೋ ಎಲೆಕ್ಟ್ರಿಕ್ ಕೂಡಾ ಭರ್ಜರಿ ಬೇಡಿಕೆ ಪಡೆದುಕೊಂಡಿದೆ.

2021ರಲ್ಲಿನ ಇವಿ ಸ್ಕೂಟರ್ ಮಾರಾಟ ವರದಿ ಪ್ರಕಟಿಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಒಟ್ಟು 50 ಸಾವಿರ ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿತರಣೆ ಮಾಡಿರುವುದಾಗಿ ಘೋಷಣೆ ಮಾಡಿದ್ದು, ಇದು ಈ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿನ ಇವಿ ವಾಹನ ಮಾರಾಟಕ್ಕೆ ಸಮವಾಗಿದೆ.

ಈ ವರ್ಷದ ಜನವರಿಯಿಂದ ಅಕ್ಟೋಬರ್ ಕೊನೆಯ ತನಕ ಹೀರೋ ಎಲೆಕ್ಟ್ರಿಕ್ ಕಂಪನಿಯು ಒಟ್ಟು 50,331 ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು, ಶೀಘ್ರದಲ್ಲೇ ಬುಕ್ಕಿಂಗ್ ಸಲ್ಲಿಕೆಯಾಗಿರುವ 16 ಸಾವಿರ ಯುನಿಟ್‌ಗಳನ್ನು ವಿತರಣೆ ಮಾಡಲು ಸಜ್ಜಾಗಿದೆ.

ಹೀಗಾಗಿ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಇವಿ ವಾಹನಗಳ ಮಾರಾಟವನ್ನು ಮಳಿಗೆಗಳನ್ನು ದೇಶಾದ್ಯಂತ ವಿಸ್ತರಿಸುತ್ತಿದ್ದು, ಈಗಾಗಲೇ ಮಾರಾಟ ಮಳಿಗೆಗಳನ್ನು ಹೊಂದಿರುವ ನಗರಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಯೋಜಿಸಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ನಗರಗಳಲ್ಲಿ ಹಲವು ಹೊಸ ಮಾರಾಟ ಮಳಿಗೆಗಳನ್ನು ತೆರೆದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಪ್ರತಿವರ್ಷ 2.5 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಸದ್ಯ ದೇಶಾದ್ಯಂತ 500 ನಗರಗಳಲ್ಲಿ 700ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಅಗತ್ಯತೆಯ ಆಧಾರದ ಮೇಲೆ ಕಳೆದ ವರ್ಷ ಸುಮಾರು 1,500 ಹೊಸ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಸಿದ್ದವಾಗಿದೆ.

2022 ಆರ್ಥಿಕ ವರ್ಷದ ಕೊನೆಯಲ್ಲಿ ದೇಶಾದ್ಯಂತ ಒಟ್ಟು ಒಂದು ಸಾವಿರ ಟಚ್ ಪಾಯಿಂಟ್(ಮಾರಾಟ ಮಳಿಗೆಗಳನ್ನು) ಹೊಂದುವ ಗುರಿಹೊಂದಿದ್ದು, ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆಯ ಆಧಾರದ ಮೇಲೆ ಹೊಸ ಟಚ್ ಪಾಯಿಂಟ್ ತೆರೆಯಲಾಗುತ್ತಿದೆ.

ಅಂದಾಜಿನ ಪ್ರಕಾರ, ಮುಂದಿನ ಹಣಕಾಸು ವರ್ಷದಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಇವಿ ಸ್ಕೂಟರ್ ಮಾರಾಟವು ಶೇಕಡಾ 20ರಿಂದ ಶೇ.30 ರಷ್ಟು ಹೆಚ್ಚಳವಾಗುವ ನೀರಿಕ್ಷೆಗಳಿದ್ದು, 12 ವರ್ಷಗಳ ಇವಿ ವಾಹನ ಮಾರಾಟದಲ್ಲಿ ಮೊದಲ ಬಾರಿಗೆ ಇವಿ ವಾಹನ ಮಾರಾಟವು ದ್ವಿಗುಣಗೊಳ್ಳುತ್ತಿದೆ.

ಇವಿ ಸ್ಕೂಟರ್ ಉತ್ಪಾದನೆಯಲ್ಲಿ ಸುಮಾರು 12 ವರ್ಷಗಳನ್ನು ಪೂರೈಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಇದುವರೆಗೆ 3 ಲಕ್ಷ ಯುನಿಟ್ ಮಾರಾಟ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಇವಿ ಉತ್ಪನ್ನಗಳಲ್ಲಿ ಹಲವಾರು ಬದಲಾವಣೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ ಮಾಡಿದ್ದು, ಹೊಸ ಮಾದರಿಯು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್‌ನೊಂದಿಗೆ ಅತ್ಯುತ್ತಮ ಮೈಲೇಜ್ ರೇಂಜ್ ಪಡೆದುಕೊಳ್ಳಲು ಸಹಕಾರಿಯಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳಿಗೆ ಪೈಪೋಟಿಯಾಗಿ ಸಿಟಿ ಸೆಗ್ಮೆಂಟ್ ಅಭಿವೃದ್ದಿಪಡಿಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕಂಫರ್ಟ್ ಸ್ಪೀಡ್, ಎಕ್ಸೆಂಡ್ ರೇಂಜ್ ಮಾದರಿಗಳೊಂದಿಗೆ ಇದೀಗ ಸಿಟಿ ಸ್ಪೀಡ್ ಮಾದರಿಗಳನ್ನು ಅಭಿವೃದ್ದಿಗೊಳಿಸಿದೆ.

ಇನ್ನು ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ವಿವಿಧ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಸಬ್ಸಡಿ ಜೊತೆಗೆ ರಾಜ್ಯ ಮಟ್ಟದಲ್ಲೂ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ವಿವಿಧ ರಾಜ್ಯಗಳಲ್ಲಿ ಇವಿ ವಾಹನಗಳ ನೋಂದಣಿ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿದೆ.


Click it and Unblock the Notifications








