ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ಸೌಲಭ್ಯಕ್ಕಾಗಿ ಲಾಗ್9 ಜೊತೆ ಕೈಜೋಡಿಸಿದ ಹೀರೋ ಎಲೆಕ್ಟ್ರಿಕ್
ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸುವತ್ತ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಹೀರೋ ಎಲೆಕ್ಟ್ರಿಕ್ ಕಂಪನಿಯು ಸಹ ದ್ವಿಚಕ್ರ ವಾಹನಗಳಿಗಾಗಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಯೋಜನೆಗೆ ಚಾಲನೆ ನೀಡಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಇವಿ ವಾಹನಗಳಿಗೆ ಪೂರಕವಾಗಿ ವಿವಿಧ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಇವಿ ವಾಹನಗಳ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಪ್ರಕ್ರಿಯೆಯನ್ನು ಹೆಚ್ಚಿಸಿದ್ದು, ಚಾರ್ಜಿಂಗ್ ಕೇಂದ್ರಗಳ ಹೆಚ್ಚಳಕ್ಕೆ ಪ್ರಮುಖ ಕಂಪನಿಗಳು ವಿಶೇಷ ಆಸಕ್ತಿ ವಹಿಸಿವೆ. ಅದರಲ್ಲೂ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯಕ್ಕಾಗಿ ವಿವಿಧ ಕಂಪನಿಗಳು ಹೆಚ್ಚಿನ ಮಟ್ಟದ ಹೂಡಿಕೆ ಮಾಡುತ್ತಿದ್ದು, ಹೀರೋ ಎಲೆಕ್ಟ್ರಿಕ್ ಕಂಪನಿಯು ನಮ್ಮ ಬೆಂಗಳೂರಿನ ಲಾಗ್9 ಕಂಪನಿ ಜೊತೆಗೂಡಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲು ಮುಂದಾಗಿದೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹೆಚ್ಚುತ್ತಿರುವ ಹೊರತಾಗಿಯೂ ಚಾರ್ಜಿಂಗ್ ಸೌಲಭ್ಯಗಳ ಕೊರತೆಯು ಹೆಚ್ಚಿನ ಮಟ್ಟದ ಬೆಳವಣಿಗೆ ಸಾಧಿಸಲು ಹಿನ್ನಡೆ ಉಂಟುಮಾಡುತ್ತಿದ್ದು, ಲಭ್ಯವಿರುವ ಚಾರ್ಜಿಂಗ್ ನಿಲ್ದಾಣಗಳಲ್ಲಿ ಕನಿಷ್ಠ 3 ಗಂಟೆಗಳಿಂದ 5 ಗಂಟೆಗಳ ಚಾರ್ಜ್ ಮಾಡಬೇಕಾಗುತ್ತದೆ.

ಇದೇ ಕಾರಣಕ್ಕೆ ಸಾಕಷ್ಟು ಗ್ರಾಹಕರು ಇವಿ ವಾಹನ ಖರೀದಿ ಆಸಕ್ತಿ ಹೊಂದಿದ್ದರೂ ಕೂಡಾ ಅನಿವಾರ್ಯವಾಗಿ ಸಾಂಪ್ರದಾಯಿಕ ವಾಹನಳತ್ತ ಮುಖಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಒದಗಿಸುವ ಸೌಲಭ್ಯವನ್ನು ತೆರೆಯಲು ಮುಂದಾಗಿದೆ.

ನಮ್ಮ ಬೆಂಗಳೂರಿನ ಸ್ಟಾರ್ಟ್‌ಅಪ್ ಕಂಪನಿಯಾಗಿರುವ ಲಾಗ್9 ಜೊತೆಗೂಡಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕೇವಲ 15 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಮಾಡಬಹುದಾದ ಬ್ಯಾಟರಿ ಪ್ಯಾಕ್ ಬಳಕೆಗೆ ಒಪ್ಪಿಗೆ ಸೂಚಿಸಿದೆ.

ಲಾಗ್9 ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಮಾಡಬಲ್ಲ ಬ್ಯಾಟರಿ ಪ್ಯಾಕ್ ಸಿದ್ದಪಡಿಸಿದ್ದು, ಲಾಗ್9 ಬ್ಯಾಟರಿ ಪ್ಯಾಕ್ ಅನ್ನು ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಮುಂಬರುವ ಹೊಸ ಸ್ಕೂಟರ್ ಮಾದರಿಗಳಲ್ಲಿ ಜೋಡಣೆ ಮಾಡಲಿದೆ.

ಜೊತೆಗೆ ಲಾಗ್9 ಕಂಪನಿಯೇ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದ್ದು, ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿರುವ ಎಲ್ಲಾ ಮಾದರಿಯ ಇವಿ ವಾಹನಗಳಿಗೂ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಿದೆ.

ಇದರ ಜೊತೆಗೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಬೆಂಗಳೂರು ಮೂಲದ ಮತ್ತೊಂದು ಕಂಪನಿ ಚಾರ್ಜರ್(Charzer) ಜೊತೆಗೂಡಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸಲು ಬೃಹತ್ ಯೋಜನೆಯೊಂದನ್ನು ರೂಪಿಸಿದ್ದು, ಹೊಸ ಯೋಜನೆಯಡಿ ಚಾರ್ಜರ್ ಮತ್ತು ಹೀರೋ ಎಲೆಕ್ಟ್ರಿಕ್ ಕಂಪನಿಗಳು ಬರೋಬ್ಬರಿ 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿವೆ.

ಹೀರೋ ಎಲೆಕ್ಟ್ರಿಕ್ ಮತ್ತು ಚಾರ್ಜರ್ ಕಂಪನಿಗಳು ಮುಂದಿನ ಮೂರು ವರ್ಷದಲ್ಲಿ ಒಟ್ಟು 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದ್ದು, ಮೊದಲ ವರ್ಷದಲ್ಲಿ ದೇಶದ ಪ್ರಮುಖ 30 ನಗರಗಳಲ್ಲಿ 10 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಯೋಜನೆಯಲ್ಲಿದೆ.

ಚಾರ್ಜರ್ ಕಂಪನಿಯು ಈಗಾಗಲೇ ದೇಶಾದ್ಯಂತ 20 ಪ್ರಮುಖ ನಗರಗಳಲ್ಲಿ ಆರಂಭಿಕ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದು, ಇವಿ ವಾಹನ ಮಾಲೀಕರಿಗೆ ಚಾರ್ಜಿಂಗ್ ನಿಲ್ದಾಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ನೆರವಾಗುವಂತೆ ಪ್ರತ್ಯೇಕ ಆ್ಯಪ್ ಕೂಡಾ ಅಭಿವೃದ್ದಿಪಡಿಸಿದೆ.

ಆ್ಯಪ್ ಮೂಲಕ ಹತ್ತಿರದಲ್ಲಿರುವ ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಮತ್ತು ಚಾರ್ಜಿಂಗ್ ನಿಲ್ದಾಣದಲ್ಲಿ ಚಾರ್ಜಿಂಗ್‌ಗಾಗಿ ಸರತಿ ಸಾಲಿನಲ್ಲಿರುವ ವಾಹನಗಳ ಸಂಖ್ಯೆ ಮತ್ತು ಯಾವ ನಿಲ್ದಾಣದಲ್ಲಿ ಕಡಿಮೆ ವಾಹನಗಳಿವೆ ಎನ್ನುವುದರ ಜೊತೆ ಚಾರ್ಜಿಂಗ್‌ಗಾಗಿ ತೆಗೆದುಕೊಳ್ಳುವ ನಿಖರವಾದ ಸಮಯದ ಮಾಹಿತಿಯನ್ನು ಬಳಕೆದಾರರಿಗೆ ನೀಡಲಿದೆ.

ಹೀರೋ ಎಲೆಕ್ಟ್ರಿಕ್ ಮತ್ತು ಚಾರ್ಜರ್ ಕಂಪನಿಗಳು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಶಾಂಪಿಂಗ್ ಕಾಂಪ್ಲೆಕ್ಸ್, ಅಂಪಾರ್ಟ್‌ಮೆಂಟ್‌ಗಳು ಮತ್ತು ಮಾಲ್‌ಗಳಲ್ಲೂ ನಿರ್ದಿಷ್ಟ ವಾಹನ ಮಾಲೀಕರಿಗಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

ಚಾರ್ಜರ್ ಕಂಪನಿಯು ಗ್ರಾಹಕರ ಬೇಡಿಕೆ ಆಧಾರದ ಮೇಲೆ 3.3kW ಸಾಮರ್ಥ್ಯದ ಚಾರ್ಜರ್ ಲೈಟ್ ಮತ್ತು 22kW ಸಾಮರ್ಥ್ಯದ ಚಾರ್ಜರ್ ಟೆರಾ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದು, ಇದರಲ್ಲಿ ಚಾರ್ಜರ್ ಲೈಟ್ ಚಾರ್ಜಿಂಗ್ ಸೌಲಭ್ಯವನ್ನು ಇವಿ ವಾಹನ ಮಾಲೀಕರು ವ್ಯಯಕ್ತಿಕ ಬಳಕೆಗಾಗಿ ಅಳವಡಿಸಿಕೊಳ್ಳಬಹುದಾಗಿದೆ.

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.


Click it and Unblock the Notifications








