2022ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಇವಿ ಸ್ಕೂಟರ್
ದೇಶಾದ್ಯಂತ ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಹೊಸ ಬದಲಾವಣೆ ಕಾರಣವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ವಿವಿಧ ಇವಿ ವಾಹನ ತಯಾರಕ ಕಂಪನಿಗಳು ಯಶಸ್ವಿಯಾಗುತ್ತಿವೆ.

ಎಲೆಕ್ಟ್ರಿಕ್ ವಾಹನಗಳಿಗೆ ತೀವ್ರ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶದ ಮುಂಚೂಣಿ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಹೀರೋ ಮೋಟೊಕಾರ್ಪ್ ಕೂಡಾ ಹೊಸ ಮಾದರಿಯ ಇವಿ ಸ್ಕೂಟರ್ ನಿರ್ಮಾಣ ಯೋಜನೆಗೆ ಚಾಲನೆ ನೀಡುತ್ತಿದೆ.

ಹೀರೋ ಮೋಟೊಕಾರ್ಪ್ ಅಂಗಸಂಸ್ಥೆಯಾದ ಹೀರೋ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ವಿವಿಧ ಇವಿ ಸ್ಕೂಟರ್ ನಿರ್ಮಾಣ ಮಾಡುತ್ತಿದ್ದರೂ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಮುಖ್ಯ ಬ್ರಾಂಡ್ ಅಡಿಯಲ್ಲಿ ಪ್ರತ್ಯೇಕವಾಗಿ ಇವಿ ವಾಹನಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುವ ಯೋಜನೆ ಹೊಂದಿದೆ.

ಹೊಸ ಯೋಜನೆಗಾಗಿ ಹೀರೋ ಮೋಟೊಕಾರ್ಪ್ ಕಂಪನಿಯು ತೈವಾನ್ ಮೂಲದ ಗೊಗೊರೊ ಕಂಪನಿಯ ಜೊತೆಗೆ ಹೊಸ ಒಪ್ಪಂದಕ್ಕೆ ಸಹಿಹಾಕಿದ್ದು, ಭಾರತದಲ್ಲಿ ಇವಿ ವಾಹನ ಮಾರಾಟದ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿದೆ.

ಭಾರತದಲ್ಲಿ ಹೀರೋ ಮೋಟೊಕಾರ್ಪ್ ಜೊತೆಗೂಡಿ ಇವಿ ವಾಹನಗಳೊಂದಿಗೆ ಕೊನೆಯ ಮೈಲಿಯ ವರೆಗೂ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸುವ ಗುರಿಯೊಂದಿಗೆ ಗೊಗೊರೊ ಕಂಪನಿಯು ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಹಲವಾರು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ.

ಸದ್ಯ ತೈವಾನ್‌ನಲ್ಲಿ ಇವಿ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಗೊಗೊರೊ ಕಂಪನಿಯು ಎಲೆಕ್ಟ್ರಿಕ್ ವಾಹನಕ್ಕಾಗಿ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು ಈಗಾಗಲೇ ಹೊಸ ಇವಿ ಸ್ಕೂಟರ್ ಪ್ರದರ್ಶಿಸುವ ಮೂಲಕ ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಖಚಿತಪಡಿಸಿದ್ದು, ಕಂಪನಿಯು ಶೀಘ್ರದಲ್ಲೇ ಹೊಸ ಸ್ಕೂಟರಿನ ಪ್ರಮುಖ ವಿವರಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ಹೀರೋ ಎಲೆಕ್ಟ್ರಿಕ್ ಹೊರತುಪಡಿಸಿ ಹೀರೋ ಮೋಟೊಕಾರ್ಪ್ ಕಂಪನಿಯು ಪ್ರತ್ಯೇಕವಾಗಿ ಇವಿ ವಾಹನ ಉದ್ಯಮ ಕೈಗೊಳ್ಳಲಿದ್ದು, ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಸ್ಕೂಟರ್ ಅನ್ನು 2022-23ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ವೇಳೆಗೆ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಬಿಡುಗಡೆಯಾಗಲಿರುವ ಹೀರೋ ಮತ್ತು ಗೊಗೊರೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಿವಾ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲೂ ಹೊಸ ವಾಹನ ಬಿಡುಗಡೆಗಾಗಿ ನೋಂದಣಿ ಕೂಡಾ ಮಾಡಲಾಗಿದೆ.

ಗೊಗೊರೊ ಕಂಪನಿಯು ಸದ್ಯ ತೈವಾನ್‌ನಲ್ಲಿ ವಿವಿಧ ಮಾದರಿಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಗೊಂದಿಗೆ ಸೌರವಿದ್ಯುತ್ ಮೂಲಕವೇ ಬ್ಯಾಟರಿ ಸ್ವಾಪಿಂಗ್ ಸೌಲಭ್ಯವನ್ನು ಜೋಡಣೆ ಮಾಡುವಲ್ಲಿ ಯಶಸ್ವಿ ಕಂಡುಕೊಂಡಿದ್ದು, ಹೀರೋ ಕಂಪನಿಯು ಕೂಡಾ ಇದೀಗ ಗೊಗೊರೊ ಜೊತೆಗೂಡಿ ಹೊಸ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಆಸಕ್ತಿ ಇದ್ದರೂ ಕೂಡಾ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಈ ಸಮಸ್ಯೆ ನಿವಾರಣೆಗಾಗಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜಿಂಗ್ ಒದಗಿಸಲು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ನಿರ್ಮಾಣ ಮಾಡುತ್ತಿವೆ.

ಬ್ಯಾಟರಿ ವಿನಿಯಮ ಕೇಂದ್ರಗಳು ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಬ್ಯಾಟರಿ ಸೌಲಭ್ಯಗಳನ್ನು ಒದಗಿಸಬಹುದಾಗಿದ್ದು, ಬ್ಯಾಟರಿ ರೇಂಜ್ ಆಧಾರದ ಮೇಲೆ ಇಂತಿಷ್ಟು ಪ್ರಮಾಣದ ದರ ಪಾವತಿಸಿಬೇಕಾಗುತ್ತದೆ.

ಬ್ಯಾಟರಿ ವಿನಿಮಯದ ವೇಳೆ ಗ್ರಾಹಕರು ತಮ್ಮ ಬಳಿಯಿರುವ ಚಾರ್ಜ್ ಮುಗಿದಿರುವ ಬ್ಯಾಟರಿಯನ್ನು ವಿನಿಮಯ ಕೇಂದ್ರಗಳಿಗೆ ಹಿಂದಿರುಗಿಸುವ ಮೂಲಕ ಚಾರ್ಜ್ ಮಾಡಲಾದ ಬ್ಯಾಟರಿ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದ್ದು, ಹೊಸ ಸೌಲಭ್ಯವು ಚಾರ್ಜಿಂಗ್ ಸಮಯವನ್ನು ಉಳಿಸುವ ಮೂಲಕ ಬ್ಯಾಟರಿ ಖಾಲಿಯಾದ ತಕ್ಷಣವೇ ಮತ್ತೊಂದು ಬ್ಯಾಟರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

ಸದ್ಯ ಬೆಂಗಳೂರು, ಮುಂಬೈ, ದೆಹಲಿ ಮತ್ತು ಅಹಮದಾಬಾದ್ ನಗರಗಳಲ್ಲಿನ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಸಹಭಾಗಿತ್ವ ಯೋಜನೆ ಅಡಿಯಲ್ಲಿ ಹೊಸ ಬ್ಯಾಟರಿ ವಿನಿಯಮ ಕೇಂದ್ರಗಳಿಗೆ ಚಾಲನೆ ನೀಡಲಾಗಿದ್ದು, ದೇಶದ ಅತಿದೊಡ್ಡ ಬೈಕ್ ತಯಾರಕ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಕೂಡಾ ಗೊಗೊರೊ ಜೊತೆಗಿನ ಸಹಭಾಗಿತ್ವ ಯೋಜನೆಯಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಮತ್ತು ಸ್ಥಿರ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸಿದ್ದವಾಗಿದೆ.


Click it and Unblock the Notifications