ಜುಲೈ 15ರಿಂದ ಪುನಾರಂಭಗೊಳ್ಳಲಿದೆ ರಿವೋಲ್ಟ್ ಇವಿ ಬೈಕ್ ಬುಕ್ಕಿಂಗ್
ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ರಿವೋಲ್ಟ್ ಮೋಟಾರ್‌ಸೈಕಲ್ ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಇವಿ ಬೈಕ್‌ಗಳ ಬುಕ್ಕಿಂಗ್ ಪ್ರಕ್ರಿಯೆ ಪುನಾರಂಭಿಸಲಾಗುತ್ತಿದ್ದು, ಎಲೆಕ್ಟ್ರಿಕ್ ಬೈಕ್ ಬುಕ್ಕಿಂಗ್ ಪ್ರಕ್ರಿಯೆ ಈ ತಿಂಗಳು 15ರಿಂದ ಪುನಾರಂಭಗೊಳ್ಳಲಿದೆ.

ಉತ್ಪಾದನಾ ಪ್ರಮಾಣವನ್ನು ಆಧರಿಸಿ ಸದ್ಯ ಬುಕ್ಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ರಿವೋಲ್ಟ್ ಕಂಪನಿಯು ಉತ್ಪಾದನಾ ಪ್ರಮಾಣ ಹೆಚ್ಚಳದೊಂದಿಗೆ ಇದೀಗ ಮತ್ತೆ ಬುಕ್ಕಿಂಗ್ ಪ್ರಕ್ರಿಯೆಗೆ ಮರುಚಾಲನೆ ನೀಡುತ್ತಿದ್ದು, ಕಳೆದ ಬಾರಿ ದಾಖಲಾದ ಬುಕ್ಕಿಂಗ್ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬುಕ್ಕಿಂಗ್ ದಾಖಲಾಗುವ ಸಾಧ್ಯತೆಗಳಿವೆ.

ಜೂನ್ ಮಧ್ಯಂತರದಲ್ಲಿ ಬುಕ್ಕಿಂಗ್ ಆರಂಭಿಸಿದ್ದ ರಿವೋಲ್ಟ್ ಕಂಪನಿಯು ಬುಕ್ಕಿಂಗ್ ಆರಂಭಿಸಿದ ಕೇವಲ 3 ಗಂಟೆಗಳ ಅವಧಿಯಲ್ಲಿ ನಿಗದಿತ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡಿತ್ತು. ಸುಮಾರು ರೂ.50 ಕೋಟಿ ಮೌಲ್ಯದಷ್ಟು ಹೊಸ ವಾಹನಗಳಿಗೆ ಬುಕ್ಕಿಂಗ್ ಪಡೆದಿರುವುದಾಗಿ ಹೇಳಿಕೊಂಡಿದ್ದ ಕಂಪನಿಯು ಇದೀಗ ಮತ್ತೆ ಬುಕ್ಕಿಂಗ್ ಆರಂಭಿಸುತ್ತಿದೆ.

ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಹೊಸ ವಾಹನ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ಆಸಕ್ತಿ ತೋರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಮೇಲೆ ವಿಶೇಷ ಆಸಕ್ತಿಯೊಂದಿಗೆ ವಿವಿಧ ಮಾದರಿಯ ಇವಿ ವಾಹನಗಳನ್ನು ಪರಿಚಯಿಸುತ್ತಿವೆ.

ಇನ್ನು ಕೇಂದ್ರ ಸರ್ಕಾರದ ಫೇಮ್ 2 ತಿದ್ದುಪಡಿಯ ಪರಿಣಾಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿಯಾಗಿ ಇದೀಗ ರೂ. 10 ಸಾವಿರದಿಂದ ರೂ.30 ಸಾವಿರ ತನಕ ಹೆಚ್ಚುವರಿ ಸಬ್ಸಡಿ ದೊರೆಯುತ್ತಿದ್ದು, ಹೊಸ ಸಬ್ಸಡಿ ತಿದ್ದುಪಡಿ ಘೋಷಣೆಯ ನಂತರ ರಿವೋಲ್ಟ್ ಬೈಕ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿರುವ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಕೇಂದ್ರ ಸರ್ಕಾರದ ಹೊಸ ಸಬ್ಸಡಿ ನಂತರ ರಿವೋಲ್ಟ್ ಕಂಪನಿಯು ತನ್ನ ಆರ್‌ವಿ400 ಬೆಲೆಯಲ್ಲಿ ಶೇ.20ರಷ್ಟು ಇಳಿಕೆ ಮಾಡಿದ್ದು, ರೂ. 1,18,999 ಬೆಲೆ ಹೊಂದಿದ್ದ ಬೈಕ್ ಇದೀಗ ಹೊಸ ಸಬ್ಸಡಿ ದರ ಸೇರಿದ ನಂತರ ಗ್ರಾಹಕರಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 90,799 ಕ್ಕೆ ಖರೀದಿಗೆ ಲಭ್ಯವಾಗಿದೆ.

ಪುಣೆ ಮೂಲದ ರಿವೋಲ್ಟ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಎರಡು ಆರ್‌ವಿ300 ಮತ್ತು ಆರ್‌ವಿ400 ಎನ್ನುವ ಎರಡು ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಹೊಸ ಸಬ್ಸಡಿ ಯೋಜನೆಯೆಂತೆ ಸದ್ಯಕ್ಕೆ ಆರ್‌ವಿ400 ಎಲೆಕ್ಟ್ರಿಕ್ ಬೈಕ್ ಬೆಲೆಯಲ್ಲಿ ರೂ. 28,200 ಇಳಿಕೆ ಮಾಡಿದೆ.

ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡುತ್ತದೆ.

ರಿವೋಲ್ಟ್ ಆರ್‌ವಿ300 ಬೈಕಿನಲ್ಲಿ 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.


Click it and Unblock the Notifications








