2022ರಲ್ಲಿ ಒಟ್ಟು 59 ನಗರಗಳಿಗೆ ಮಾರಾಟ ಸೌಲಭ್ಯವನ್ನು ವಿಸ್ತರಿಸಲಿದೆ ರಿವೋಲ್ಟ್ ಮೋಟಾರ್ಸ್
ರಿವೋಲ್ಟ್ ಮೋಟಾರ್ಸ್(Revolt Motors) ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಹೊಸ ಇವಿ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ಕೋಲ್ಕತ್ತಾದಲ್ಲಿ ತನ್ನ ಹೊಸ ಮಾರಾಟ ಮಳಿಗೆಗೆ ಚಾಲನೆ ನೀಡಿತು.

ಹೊಸ ಯೋಜನೆಯ ಭಾಗವಾಗಿ ರಿವೋಲ್ಟ್ ಮೋಟಾರ್ಸ್ ಕಂಪನಿಯು ಇವಿ ಬೈಕ್ ಶೋರೂಂಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲೂ ಹೊಸ ಶೋರೂಂ ಆರಂಭಿಸಿತ್ತು. ಇದೀಗ ಕಂಪನಿಯು ದೇಶದ ಪ್ರಮುಖ ಮೆಟ್ರೊ ನಗರಗಳಲ್ಲಿ ಇವಿ ಬೈಕ್ ಮಾರಾಟ ಸೌಲಭ್ಯವನ್ನು ತೆರೆಯುತ್ತಿದ್ದು, ಕಂಪನಿಯು 2022ರ ಕೊನೆಯಲ್ಲಿ ಒಟ್ಟು 59 ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿ ರಿವೋಲ್ಟ್ ಕಂಪನಿಯು ಆರ್‌ವಿ400 ಇವಿ ಬೈಕ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಹೊಸ ಮಾರಾಟ ಮಳಿಗೆಗಳೊಂದಿಗೆ ಕಂಪನಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ರಿವೋಲ್ಟ್ ಇವಿ ಬೈಕ್ ಮಾದರಿಯು ಫೇಮ್ 2 ಯೋಜನೆಯಡಿ ಗರಿಷ್ಠ ಸಬ್ಸಡಿಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಆರಂಭದಲ್ಲಿ ಆರ್‌ವಿ300 ಮತ್ತು ಆರ್‌ವಿ400 ಮಾದರಿಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ ಆರ್‌ವಿ300 ಮಾದರಿಯನ್ನು ಸ್ಥಗಿತಗೊಳಿಸಿ ಆರ್‌ವಿ400 ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ಹೊಸ ಬೈಕ್ ಮಾದರಿಯು ಕೇಂದ್ರ ಸರ್ಕಾರ ಫೇಮ್ 2 ಸಬ್ಸಡಿ ಒಳಗೊಂಡು ರೂ. 1.25 ಲಕ್ಷ ಬೆಲೆ ಹೊಂದಿದ್ದು, ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ಕೆಲವು ರಾಜ್ಯಗಳು ತಮ್ಮ ರಾಜ್ಯದ ವಾಹನ ಖರೀದಿದಾರರಿಗಾಗಿ ಹೆಚ್ಚಿನ ಮಟ್ಟದ ಸಬ್ಸಡಿ ಒದಗಿಸುತ್ತವೆ.

ಹೊಸ ಆರ್‌ವಿ400 ಮಾದರಿಯು ರೆಬಲ್ ರೆಡ್, ಮಿಸ್ಟ್ ಗ್ರೆ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ.

ಆರ್‌ವಿ400 ಮಾದರಿಯು ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡಲಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಈ ಬೈಕಿನಲ್ಲಿವೆ.

ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಹೊಸ ಇವಿ ಬೈಕ್‌ನಲ್ಲಿ ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ಪ್ರಮುಖವಾಗಿವೆ.

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಇದಲ್ಲದೆ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಅಳವಡಿಸಿದ್ದು, ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ.

ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್ ಮೂಲಕ 'ಸ್ವೈಪ್ ಟು ಸ್ಮಾರ್ಟ್' ಮಾತ್ರವಲ್ಲದೇ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆ ಸಲ್ಲಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಇವಿ ವಾಹನಗಳ ಖರೀದಿ ಮೇಲೆ ಈ ಹಿಂದೆ ನೀಡಲಾಗುತ್ತಿದ್ದ ಕೆಲವು ಆಫರ್‌ಗಳು ಇದೀಗ ನಿಧಾನವಾಗಿ ಕಡಿತಗೊಳಿಸಲಾಗುತ್ತಿದ್ದು, ರಿವೋಲ್ಟ್ ಕಂಪನಿಯು ಸಹ ಆರಂಭದಲ್ಲಿ ನೀಡಲಾಗಿದ್ದ ಕೆಲವು ಆಫರ್‌ಗಳನ್ನು ಕಡಿತಗೊಳಿಸಿ ಬೆಲೆ ಹೆಚ್ಚಳ ನಿರ್ಧಾರ ಕೈಗೊಂಡಿದೆ.

ಜೊತೆಗೆ ಕಂಪನಿಯು ಹೊಸ ಬೈಕಿನ ಬ್ಯಾಟರಿ ಮೇಲೆ ನೀಡಲಾಗುತ್ತಿದ್ದ 8 ವರ್ಷ ಅಥವಾ 1.50 ಲಕ್ಷ ಕಿ.ಮೀ ಮೇಲೆ ವಾರಂಟಿ ಅವಧಿಯನ್ನು ಇದೀಗ 6 ವರ್ಷ ಅಥವಾ 1 ಲಕ್ಷ ಕಿ.ಮೀ ಗೆ ವಾರಂಟಿ ಅವಧಿ ಇಳಿಕೆ ಮಾಡಿದ್ದು, ಬೇಡಿಕೆ ಹೆಚ್ಚಿದ್ದಂತೆ ಕೆಲವು ವಿನಾಯ್ತಿಗಳನ್ನು ಹಿಂಪಡೆದಿದೆ.


Click it and Unblock the Notifications








