ಕೇವಲ ಎರಡು ಗಂಟೆಗಳಲ್ಲಿ ರೂ.50 ಕೋಟಿ ಮೌಲ್ಯದ ಇವಿ ಬೈಕ್ ಮಾರಾಟ ಮಾಡಿದ ರಿವೋಲ್ಟ್
ರಿವೋಲ್ಟ್ ಕಂಪನಿಯು ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಹಲವು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, ಇತ್ತೀಚೆಗೆ ಕಂಪನಿಯು ತನ್ನ ಆರ್‌ವಿ400 ಬೈಕ್ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ಮೂಲಕ ಆಟೋ ಉದ್ಯಮದಲ್ಲಿ ಅಚ್ಚರಿ ಮೂಡಿಸಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಇತ್ತೀಚೆಗೆ ರಿವೋಲ್ಟ್ ಕಂಪನಿಯು ಬಿಡಿಭಾಗಗಳ ಪೂರೈಕೆಯಲ್ಲಿ ಅನಾನುಕೂಲತೆಯಿಂದಾಗಿ ಎಲೆಕ್ಟ್ರಿಕ್ ಬೈಕ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಿ ಇಂದು ಪುನಾರಂಭಗೊಳಿಸಿತ್ತು. ರಿವೋಲ್ಟ್ ಕಂಪನಿಯು ಬುಕ್ಕಿಂಗ್ ಆರಂಭಿಸಿದ ಕೇವಲ ಎರಡು ಗಂಟೆಗಳಲ್ಲಿ ಕಂಪನಿ ಉತ್ಪಾದನಾ ಸಾಮರ್ಥ್ಯ ಸಂಖ್ಯೆಯನ್ನು ಮೀರಿ ಬುಕ್ಕಿಂಗ್ ಹರಿದು ಬಂದಿದ್ದು, ಸುಮಾರು ರೂ.50 ಕೋಟಿ ಮೌಲ್ಯದಷ್ಟು ಇವಿ ಬೈಕ್‌ಗಳಿಗೆ ಬೇಡಿಕೆ ಸಲ್ಲಿಕೆಯಾಗಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೊಸ ವಾಹನ ಖರೀದಿದಾರರು ಇವಿ ವಾಹನಗಳತ್ತ ಆಕರ್ಷಿತರಾಗುತ್ತಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ರಿವೋಲ್ಟ್ ಇವಿ ಬೈಕ್‌ಗಳು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ರಿವೋಲ್ಟ್ ಕಂಪನಿಯು ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ಹೊಸದಾಗಿ ಐದೂವರೆ ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದು,ಹೊಸದಾಗಿ ಬುಕ್ಕಿಂಗ್ ಮಾಡಲಾದ ಗ್ರಾಹಕರಿಗೆ ಮುಂದಿನ ತಿಂಗಳು ಆರಂಭದಿಂದ ವಿತರಣೆ ಆರಂಭಿಸುವುದಾಗಿ ಹೇಳಿಕೊಂಡಿದೆ.

ಇನ್ನು ಕೇಂದ್ರ ಸರ್ಕಾರದ ಫೇಮ್ 2 ತಿದ್ದುಪಡಿಯ ಪರಿಣಾಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿಯಾಗಿ ಇದೀಗ ರೂ. 10 ಸಾವಿರದಿಂದ ರೂ.30 ಸಾವಿರ ತನಕ ಹೆಚ್ಚುವರಿ ಸಬ್ಸಡಿ ದೊರೆಯುತ್ತಿದ್ದು, ಹೊಸ ಸಬ್ಸಡಿ ತಿದ್ದುಪಡಿ ಘೋಷಣೆಯ ನಂತರ ರಿವೋಲ್ಟ್ ಬೈಕ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿರುವ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಕೇಂದ್ರ ಸರ್ಕಾರದ ಹೊಸ ಸಬ್ಸಡಿ ನಂತರ ರಿವೋಲ್ಟ್ ಕಂಪನಿಯು ತನ್ನ ಆರ್‌ವಿ400 ಬೆಲೆಯಲ್ಲಿ ಶೇ.20ರಷ್ಟು ಇಳಿಕೆ ಮಾಡಿದ್ದು, ರೂ. 1,18,999 ಬೆಲೆ ಹೊಂದಿದ್ದ ಬೈಕ್ ಇದೀಗ ಹೊಸ ಸಬ್ಸಡಿ ದರ ಸೇರಿದ ನಂತರ ಗ್ರಾಹಕರಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 90,799 ಕ್ಕೆ ಖರೀದಿಗೆ ಲಭ್ಯವಾಗಿದೆ.

ಪುಣೆ ಮೂಲದ ರಿವೋಲ್ಟ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಎರಡು ಆರ್‌ವಿ300 ಮತ್ತು ಆರ್‌ವಿ400 ಎನ್ನುವ ಎರಡು ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಹೊಸ ಸಬ್ಸಡಿ ಯೋಜನೆಯೆಂತೆ ಸದ್ಯಕ್ಕೆ ಆರ್‌ವಿ400 ಎಲೆಕ್ಟ್ರಿಕ್ ಬೈಕ್ ಬೆಲೆಯಲ್ಲಿ ರೂ. 28,200 ಇಳಿಕೆ ಮಾಡಿದೆ.

ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡುತ್ತದೆ.

ರಿವೋಲ್ಟ್ ಆರ್‌ವಿ300 ಬೈಕಿನಲ್ಲಿ 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.


Click it and Unblock the Notifications








