ಬೆಂಗಳೂರು ಸೇರಿ ಪ್ರಮುಖ 70 ನಗರಗಳಲ್ಲಿ Revolt RV400 ಇವಿ ಬೈಕ್ ಬುಕ್ಕಿಂಗ್ ಆರಂಭ
ರಿವೋಲ್ಟ್ ಮೋಟಾರ್ಸ್(Revolt Motors) ಕಂಪನಿಯು ಎಲೆಕ್ಟ್ರಿಕ್ ಬೈಕ್ ಮಾರಾಟ ಯೋಜನೆಯನ್ನು ದೇಶಾದ್ಯಂತ ಪ್ರಮುಖ 70 ನಗರಗಳಿಗೆ ವಿಸ್ತರಿಸುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಬೈಕ್ ಖರೀದಿಗೆ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ನೇರವಾಗಿ ಬುಕ್ಕಿಂಗ್ ಸಲ್ಲಿಕೆ ಮಾಡಬಹುದಾಗಿದೆ.

ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಮೋಟಾರ್ಸ್ ಕಂಪನಿಯು ದಕ್ಷಿಣ ಭಾರತದಲ್ಲಿ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲೂ ತನ್ನ ಮೊದಲ ಇವಿ ಬೈಕ್ ಮಾರಾಟ ಮಳಿಗೆಗೆ ಅಧಿಕೃತವಾಗಿ ಚಾಲನೆ ನೀಡುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ರಿವೋಲ್ಟ್ ಕಂಪನಿಯು ಹೊಸ ಬೈಕ್ ಖರೀದಿಗಾಗಿ ರೂ. 19,999 ಮುಂಗಡ ಹಣ ನಿಗದಿಪಡಿಸಿದ್ದು, ಹೊಸ ಇವಿ ಬೈಕ್ ಮಾದರಿಗಾಗಿ ಬುಕ್ಕಿಂಗ್ ಮಾಡಿದ ನಂತರ ಮುಂದಿನ ಕೆಲವೇ ತಿಂಗಳಿನಲ್ಲಿ ವಿತರಣೆ ಮಾಡುವ ಭರವಸೆ ನೀಡಿದೆ.

ಈ ಮೊದಲ ದೆಹೆಲಿ, ಪುಣೆ ಮತ್ತು ಚೆನ್ನೈ ನಗರಗಳಲ್ಲಿ ಮಾತ್ರ ಬೈಕ್ ಮಾರಾಟ ಆರಂಭಿಸಿದ್ದ ಕಂಪನಿಯು ಇದೀಗ ಹೊಸದಾಗಿ ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ 70 ನಗರಗಳಲ್ಲಿ ಹೊಸಗಾಗಿ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿದ್ದು, ಆರ್‌ವಿ400 ಇವಿ ಬೈಕ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ಆರಂಭದಲ್ಲಿ ಆರ್‌ವಿ300 ಮತ್ತು ಆರ್‌ವಿ400 ಮಾದರಿಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ ಆರ್‌ವಿ300 ಮಾದರಿಯನ್ನು ಸ್ಥಗಿತಗೊಳಿಸಿ ಆರ್‌ವಿ400 ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಹೊಸ ಬೈಕ್ ಮಾದರಿಯು ಫೇಮ್ 2 ಯೋಜನೆಯಡಿ ಗರಿಷ್ಠ ಸಬ್ಸಡಿಯೊಂದಿಗೆ ಮಾರಾಟಗೊಳ್ಳುತ್ತಿದೆ.

ಹೊಸ ಆರ್‌ವಿ400 ಮಾದರಿಯು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಒಳಗೊಂಡಂತೆ ಎಕ್ಸ್‌ಶೋರೂಂ ಪ್ರಕಾರ ರೂ. 1.25 ಲಕ್ಷ ಬೆಲೆ ಹೊಂದಿದ್ದು, ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಮಾತ್ರವಲ್ಲದೆ ವಿವಿಧ ರಾಜ್ಯ ಸರ್ಕಾರಗಳ ಇವಿ ನೀತಿ ಅಡಿಯಲ್ಲಿ ಹೊಸ ಬೈಕ್ ಮಾದರಿಯ ಮೇಲೆ ಹೆಚ್ಚುವರಿ ಸಬ್ಸಡಿ ದೊರೆಯಲಿದೆ.

ಉದಾಹರಣೆಗೆ ದೆಹಲಿ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ ಸರ್ಕಾರಗಳು ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ತಮ್ಮ ರಾಜ್ಯಗಳಲ್ಲಿನ ಇವಿ ವಾಹನ ಮಾರಾಟ ಮೇಲೆ ಹೆಚ್ಚುವರಿ ಸಬ್ಸಡಿ ನೀಡುತ್ತಿದ್ದು, ಹೆಚ್ಚುವರಿ ಸಬ್ಸಡಿ ಹೊಂದಿರದ ರಾಜ್ಯಗಳಲ್ಲಿ ಮಾತ್ರ ಕಂಪನಿಯು ನಿರ್ಧರಿಸಿರುವ ರೂ. 1.25 ಲಕ್ಷ ಅನ್ವಯಿಸಲಿದೆ.

ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳು ಕೇಂದ್ರದ ಫೇಮ್ 2 ಸಬ್ಸಡಿ ಮಾತ್ರ ಹೊಂದಿದ್ದು, ಇವಿ ನೀತಿ ಅಡಿ ಹೆಚ್ಚುವರಿಯಾಗಿ ಯಾವುದೇ ಸಬ್ಸಡಿ ಹೊಂದಿಲ್ಲ. ಹೀಗಾಗಿ ಸಬ್ಸಡಿ ಹೊಂದಿರದ ರಾಜ್ಯಗಳಲ್ಲಿ ಆರ್‌ವಿ400 ಮಾದರಿಯು ರೂ. 1.25 ಲಕ್ಷ ಹೊಂದಿದ್ದು, ಪ್ರಮುಖ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಹೊಸ ಆರ್‌ವಿ400 ಮಾದರಿಯು ರೆಬಲ್ ರೆಡ್, ಮಿಸ್ಟ್ ಗ್ರೆ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ.

ಆರ್‌ವಿ400 ಮಾದರಿಯು ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡಲಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಈ ಬೈಕಿನಲ್ಲಿವೆ.

ಹೊಸ ಬೈಕ್‌ಗಳಲ್ಲಿ ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ಪ್ರಮುಖವಾಗಿವೆ.

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಇದಲ್ಲದೆ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಅಳವಡಿಸಿದ್ದು, ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ.

ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್ ಮೂಲಕ 'ಸ್ವೈಪ್ ಟು ಸ್ಮಾರ್ಟ್' ಮಾತ್ರವಲ್ಲದೇ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








