ಡಕಾರ್ ರ‍್ಯಾಲಿ 2021: ವಿಶ್ವದ ಅಪಾಯಕಾರಿ ಮೋಟಾರ್‌ಸ್ಪೋರ್ಟ್ ಆರಂಭಕ್ಕೆ ಕ್ಷಣಗಣನೆ ಶುರು
2021ರ ಡಕಾರ್ ರ‍್ಯಾಲಿ ಮೋಟಾರ್‌ಸ್ಪೋರ್ಟ್ ಅನ್ನು ಇದೇ ತಿಂಗಳು 3ರಿಂದ 15ರ ತನಕ ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿದ್ದು, ವಿಶ್ವದ ಅತಿ ಅಪಾಯಕಾರಿ ಮೋಟಾರ್‌ಸ್ಪೋರ್ಟ್ ರ‍್ಯಾಲಿಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯ 43ನೇ ಆವೃತ್ತಿಯು ಕರೋನಾ ವೈರಸ್ ಮಧ್ಯದಲ್ಲೂ ಹಲವಾರು ಬದಲಾಣೆಗಳೊಂದಿಗೆ ಆಯೋಜಿಸಲಾಗಿದೆ.

ಕರೋನಾ ವೈರಸ್ ಪರಿಣಾಮ ವಿಶ್ವಾದ್ಯಂತ ಹಲವಾರು ಮೋಟಾರ್‌ಸ್ಪೋರ್ಟ್ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರೂ ಡಕಾರ್ ರ‍್ಯಾಲಿಯನ್ನು ಮಾತ್ರ ರದ್ದುಗೊಳಿಸದೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರತಿ ಹಂತದಲ್ಲೂ ಸ್ಪರ್ಧಿಗಳ ಆರೋಗ್ಯದ ಮೇಲೆ ನಿಗಾವಹಿಸಿರುವ ಆಯೋಜಕರು ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಕೈಗೊಂಡ ನಂತರವೇ ಸ್ಪರ್ಧಾಳುಗಳಿಗೆ ಅವಕಾಶ ನೀಡಲಾಗಿದೆ.

ಸ್ಪರ್ಧೆ ಆರಂಭಕ್ಕೂ ಮುನ್ನವೇ ಎರಡು ದಿನಗಳ ಕಾಲ ಸ್ಪರ್ಧಿಗಳ ಆರೋಗ್ಯದ ಮೇಲೆ ನಿಗಾವಹಿಸಿರುವ ಆಯೋಜಕರು ವಿವಿಧ ಹಂತದ ಟೆಸ್ಟಿಂಗ್ ನಂತರವೇ ಸ್ಪರ್ಧೆಗೆ ಅವಕಾಶ ನೀಡುತ್ತಿದ್ದು, ವಿಶ್ವದ ಪ್ರಮುಖ ರಾಷ್ಟ್ರಗಳಿಂದ ಸಾವಿರಾರು ಸ್ಪರ್ಧಿಗಳು ಈ ರ‍್ಯಾಲಿಯಲ್ಲಿ ಭಾಗಿಯಾಗುತ್ತಿದ್ದಾರೆ.

ಭಾರತದಿಂದಲೂ ಹೀರೋ ಮೋಟೋಸ್ಪೋರ್ಟ್ ತಂಡವು ಭಾಗಿಯಾಗುತ್ತಿದ್ದು, ಟಿವಿಎಸ್ ರೇಸಿಂಗ್ ತಂಡವು ಇದೇ ಮೊದಲ ಬಾರಿಗೆ ರ‍್ಯಾಲಿಯಿಂದ ಹಿಂದೆ ಸರಿದಿದೆ. ಕಳೆದ ಆರು ಆವೃತ್ತಿಗಳಲ್ಲಿ ಭಾಗಿಯಾಗಿದ್ದ ಟಿವಿಎಸ್ ರೇಸಿಂಗ್ ತಂಡವು ಈ ಬಾರಿ ತಮ್ಮ ತಂಡದ ಹಳೆಯ ಸ್ಪರ್ಧಿಗೆ ಪ್ರಾಯೋಜಕತ್ವ ಮಾತ್ರ ಘೋಷಣೆ ಮಾಡಿದೆ.

ಹೀರೋ ಮೋಟೋಸ್ಪೋರ್ಟ್ ತಂಡದಲ್ಲಿ ಕನ್ನಡಿಗ ಸಿ.ಎಸ್ ಸಂತೋಷ್ ಸೇರಿದಂತೆ ಸ್ಟೆಬಾಸ್ಟಿನ್ ಬ್ರುಲೆರ್, ಜೊಕ್ವಿಮ್ ರೋಡ್ರಿಗೊಸ್ ಒಳಗೊಂಡ ಮೂವರ ತಂಡವನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಕನ್ನಡಿಗ ಸಿ.ಎಸ್.ಸಂತೋಷ್ ಈಗಾಗಲೇ ಸತತ ನಾಲ್ಕು ವರ್ಷಗಳಿಂದ ಭಾಗಿಯಾಗುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಇನ್ನುಳಿದಂತೆ ಸ್ಟೆಬಾಸ್ಟಿನ್ ಬ್ರುಲೆರ್ ಈ ಹಿಂದೆ 2020ರ ಎಫ್ಎಂಐ ಕ್ರಾಸ್ ಕಂಟ್ರಿ ಬಾಜಾ ವರ್ಲ್ಡ್ ಕಪ್ ವಿಜೇತರಾಗಿದ್ದು, ಮತ್ತೊಬ್ಬ ರೈಡರ್ ಜೊಕ್ವಿಮ್ ರೋಡ್ರಿಗೊಸ್ ಈ ಹಿಂದೆ 2019ರ ಪಾನ್ ಆಫ್ರಿಕಾ ರ‍್ಯಾಲಿಯಲ್ಲಿ ವಿಜೇತರಾಗಿದ್ದರು.

ಹೀರೋ ಮೋಟೋಸ್ಪೋಟ್ ರ‍್ಯಾಲಿ ತಂಡವನ್ನು ವೂಲ್ಫ್ಂಗ್ ಫಿಷರ್ ಮುನ್ನಡೆಸಲಿದ್ದು, ಜನವರಿ 3ಕ್ಕೆ ರ‍್ಯಾಲಿಯ ಮೊದಲ ಹಂತದ ಸ್ಪರ್ಧೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ರ‍್ಯಾಲಿಯಲ್ಲಿ ಹೀರೋ ಮೋಟೊಸ್ಪೋರ್ಟ್ ತಂಡವು 450ಸಿಸಿ ಸಾಮರ್ಥ್ಯದ ಲೆವೆರಿ ರೇಸ್ ಎಡಿಷನ್ ಬೈಕ್ ಬಳಕೆ ಮಾಡಿದ್ದು, ಹೊಸ ಬೈಕ್ ಮಾದರಿಯು ಕಳೆದ ಆವೃತ್ತಿಯಲ್ಲಿನ ಬೈಕ್ ಮಾದರಿಗಿಂತಲೂ ಹೆಚ್ಚು ವೇಗ, ಕಾರ್ಯಕ್ಷಮತೆ ಮತ್ತು ದೀರ್ಘಕಾಲಿಕ ರೈಡಿಂಗ್‌ಗೆ ಪೂರಕವಾಗಿ ಅಭಿವೃದ್ದಿಗೊಳಿಸಲಾಗಿದೆ.

ಹಾಗೆಯೇ ಟಿವಿಎಸ್ ರೇಸಿಂಗ್ ಪಾಯೋಜಕತ್ವ ತಂಡದ ಹರಿತ್ ನೋವಾ ಅವರು ಟಿವಿಎಸ್ ಆರ್‌ಟಿಆರ್ 450 ರ‍್ಯಾಲಿ ಎಡಿಷನ್ ಬಳಕೆ ಮಾಡಲಿದ್ದು, ಮಾಲೆ ಮೋಟೊ ವಿಭಾಗದಲ್ಲಿ ಹಲವಾರು ಸ್ಪರ್ಧಿಗಳು ಭಾಗಿಯಾಗಲಿದ್ದಾರೆ.

ಸೌದಿ ಅರೇಬಿಯಾದ ಜಿದ್ದಾದಿಂದ ಆರಂಭಗೊಳ್ಳಲಿರುವ 2021ರ ಡಕಾರ್ ರ‍್ಯಾಲಿಯು ಒಟ್ಟು 7,646 ಕಿ.ಮೀ ಅಂತರವನ್ನು ಒಳಗೊಂಡಿದ್ದು, ಜಿದ್ದಾದಿಂದ ಆರಂಭವಾಗಿ ಕೊನೆಗೆ ಜಿದ್ದಾದದಲ್ಲೇ ಕೊನೆಗೊಳ್ಳಲಿದೆ.
MOST READ: 2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

2021ರ ಡಕಾರ್ ರ‍್ಯಾಲಿಯಲ್ಲಿ ರೇಸ್ ಎಡಿಷನ್‌ನಲ್ಲಿರುವ 108 ವಿವಿಧ ಮಾದರಿಯ ರೇಸ್ ಎಡಿಷನ್ ಬೈಕ್ ಮಾದರಿಗಳು, 21 ಕ್ವಾಡ್ರಿಸೈಕಲ್, 124 ರೇಸ್ ಕಾರುಗಳು ಮತ್ತು 42 ರೇಸ್ ಟ್ರಕ್‌ಗಳು ಭಾಗಿಯಾಗಲಿದ್ದು, ಒಟ್ಟು 7,646 ಕಿ.ಮೀ ಅಂತರದಲ್ಲಿ ಬರೋಬ್ಬರ 4,767 ಕಿ.ಮೀ ಪ್ರಯಾಣವು ವಿಶೇಷ ವಿಭಾಗವಾಗಿರುತ್ತದೆ.

ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯಲ್ಲಿ ವಿವಿಧ ಮೋಟಾರ್‌ಸ್ಪೋರ್ಟ್ ತಂಡಗಳಿಂದ ಸಾವಿರಾರು ಸ್ಪರ್ಧಿಗಳು ಭಾಗಿಯಾಗುತ್ತಿದ್ದು, ರ‍್ಯಾಲಿಯ ಶೇ.70 ರಷ್ಟು ಮಾರ್ಗವು ಮರಳುಗಾಡಿನಿಂದ ಕೂಡಿರಲಿದೆ.

ಕರೋನಾ ಹಿನ್ನಲೆ ಕೆಲವು ಮಾರ್ಗಗಳನ್ನು ತಪ್ಪಿಸುವ ಉದ್ದೇಶದಿಂದ 2020ರ ಡಕಾರ್ ರ‍್ಯಾಲಿ ಆವೃತ್ತಿಗಿಂತಲೂ 2021ರ ಡಕಾರ್ ರ‍್ಯಾಲಿ ಆವೃತ್ತಿಯು ಪ್ರಯಾಣದ ದೂರವನ್ನು 300ಕಿ.ಮೀ ಕಡಿತ ಮಾಡಲಾಗಿದ್ದು, ನಾಲ್ಕನೇ ಸುತ್ತಿನ ಪ್ರಯಾಣವು 2021ರ ಡಕಾರ್ ರ‍್ಯಾಲಿಯ ಅತಿ ಉದ್ದದ ಮಾರ್ಗವಾಗಿದೆ.

ನಾಲ್ಕನೇ ಸುತ್ತಿನಲ್ಲಿನ ಸ್ಪರ್ಧಿಗಳು ಬರೋಬ್ಬರಿ 813 ಕಿ.ಮೀ ಪ್ರಯಾಣ ಮಾಡಬೇಕಿದ್ದು, 2021ರ ಡಕಾರ್ ರ‍್ಯಾಲಿ ಆವೃತ್ತಿಯಲ್ಲಿ ಈ ಬಾರಿ 26 ರೇಸ್ ವಾಹನಗಳನ್ನು ಡಕಾರ್ ಕ್ಲಾಸಿಕ್ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೀಗಾಗಿ ವಿಶ್ವದ ಕಠಿಣ ಮೋಟಾರ್‌ಸ್ಪೋರ್ಟ್ ಸ್ಪರ್ಧೆ ಭಾಗಿಯಾಗಿರುವುದರಿಂದ ಹಲವಾರು ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿಯೊಂದು ಆಟೋ ಉತ್ಪಾದನಾ ಕಂಪನಿಗಳಿಗೂ ಇದು ತಮ್ಮ ರೇಸಿಂಗ್ ವಾಹನ ಮಾದರಿಗಳ ಬಲಾಬಲ ಪ್ರದರ್ಶನಕ್ಕೆ ಪ್ರಮುಖ ವೇದಿಕೆಯಾಗಿದೆ.


Click it and Unblock the Notifications








