ಶೀಘ್ರದಲ್ಲಿಯೇ ದೇಶಾದ್ಯಂತ 75 ನಗರಗಳಲ್ಲಿ ಚೇತಕ್ ಇವಿ ಮಾರಾಟ ವಿಸ್ತರಿಸಲಿದೆ ಬಜಾಜ್ ಆಟೋ
ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಇವಿ ಸ್ಕೂಟರ್ ಮಾದರಿಯಾದ ಚೇತಕ್ ಇವಿ ಸ್ಕೂಟರ್ ಮಾದರಿಯ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಶೀಘ್ರದಲ್ಲೇ ದೇಶಾದ್ಯಂತ ಪ್ರಮುಖ 75 ನಗರಗಳಲ್ಲಿ ಮಾರಾಟ ಪ್ರಾರಂಭಿಸುವ ಸಿದ್ದತೆಯಲ್ಲಿದೆ.

ಚೇತಕ್ ಇವಿ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕಂಪನಿಯು ಹೊಸ ನಗರಗಳಿಗೆ ವೇಗವಾಗಿ ವಿಸ್ತರಿಸಲು ಯೋಜಿಸಿದ್ದು, ಹೊಸ ಸ್ಕೂಟರ್ ಬಿಡುಗಡೆ ಆರಂಭದಲ್ಲಿ ಕಂಪನಿಯು ಬೆಂಗಳೂರು ಮತ್ತು ಪುಣೆಯಲ್ಲಿ ಚೇತಕ್ ಬುಕ್ಕಿಂಗ್ ಅನ್ನು ಪ್ರಾರಂಭಿಸಿತ್ತು. ತದನಂತರ ಚೇತಕ್ ಇವಿ ಮಾರಾಟವನ್ನು ಪ್ರಮುಖ ನಗರಗಳಿಗೆ ವಿಸ್ತರಿಸಿದ್ದು, 2022-23ರ ಹಣಕಾಸು ವರ್ಷದ ಅಂತ್ಯಕ್ಕೆ ಕಂಪನಿಯು 75 ಪ್ರಮುಖ ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದುವ ಭರವಸೆ ನೀಡಿದೆ.

ಬಜಾಜ್ ಕಂಪನಿಯು ಸದ್ಯ ದೇಶದ ಪ್ರಮುಖ 20 ನಗರಗಳಲ್ಲಿ ಚೇತಕ್ ಇವಿ ಮಾರಾಟ ಹೊಂದಿದ್ದು, ಹೊಸ ಉತ್ಪಾದನಾ ಘಟಕ ಆರಂಭದೊಂದಿಗೆ ಕಂಪನಿಯು ಮಾರಾಟ ಸೌಲಭ್ಯವನ್ನು ವಿಸ್ತರಿಸಲು ಯೋಜನೆ ರೂಪಿಸಿದೆ.

ಮಾರಾಟ ವಿಸ್ತರಣೆ ಜೊತೆಗೆ ಕಂಪನಿಯು ಮತ್ತಷ್ಟು ಹೊಸ ಇವಿ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಯೋಜನೆಗಳಿಗೆ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮಾರ್ಥ್ಯ ಹೆಚ್ಚಿಸಲು ಪ್ರತ್ಯೇಕ ಉತ್ಪಾದನಾ ಘಟಕವನ್ನು ಸಹ ಆರಂಭಿಸಿದೆ.

ಪುಣೆ ಹೊರವಲಯದಲ್ಲಿರುವ ಅಕುರ್ಡಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಇವಿ ಸ್ಕೂಟರ್ ಉತ್ಪಾದನಾ ಘಟಕ ಮತ್ತು ಸಂಶೋಧನಾ ವಿಭಾಗವನ್ನು ತೆರೆದಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಅಧಿಕೃತವಾಗಿ ಉತ್ಪಾದನಾ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಇವಿ ವಾಹನ ಉತ್ಪಾದನೆಗಾಗಿಯೇ ಕಂಪನಿಯು ಚೇತಕ್ ಟೆಕ್ನಾಲಜಿ ಲಿಮಿಟೆಡ್ ಹೆಸರಿನಲ್ಲಿ ಹೊಸ ಉದ್ಯಮ ಕಾರ್ಯಾಚರಣೆ ಆರಂಭಿಸಿದ್ದು, ಕಂಪನಿಯ ನಿರ್ಮಾತೃ ದಿವಂಗತ ರಾಹುಲ್ ಬಜಾಜ್ ಅವರ 84ನೇ ಜನ್ಮ ವಾರ್ಷಿಕೋತ್ಸವ ದಿನದಂದೆ ಹೊಸ ಘಟಕದಲ್ಲಿನ ಉತ್ಪಾದನಾ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿತು.

ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿರುವ ಎಲೆಕ್ಟ್ರಿಕ್ ವಾಹನ ವಿಭಾಗದ ಮೇಲೆ ಕೇಂದ್ರೀಕರಿಸಲು ಕಂಪನಿಯು ಹೊಸ ಉತ್ಪಾದನಾ ಘಟಕವನ್ನು ಬಳಸಿಕೊಳ್ಳಲಿದ್ದು, ಹೊಸ ಉತ್ಪಾದನಾ ಘಟಕದ ಮೂಲಕ ವಾರ್ಷಿಕವಾಗಿ 5 ಲಕ್ಷ ಯುನಿಟ್ ದ್ವಿಚಕ್ರ ಉತ್ಪಾದಿಸಬಹುದಾಗಿ ಕಂಪನಿಯು ಹೇಳಿಕೊಂಡಿದೆ.

ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಪ್ರತಿ ತಿಂಗಳು ಗರಿಷ್ಠ 5 ಸಾವಿರ ಯುನಿಟ್ ಉತ್ಪಾದನೆ ಮಾಡಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಉತ್ಪಾದನಾ ಪ್ರಯಾಣವನ್ನು ಹೆಚ್ಚಿಸಲಿದೆ.

ಬಜಾಜ್ ಕಂಪನಿಯು ಹೊಸ ಉದ್ಯಮ ಮೇಲೆ ಹೆಚ್ಚಿನ ನೀರಿಕ್ಷೆಯೊಂದಿಗೆ ಆರಂಭಿಕವಾಗಿ ರೂ. 700 ಕೋಟಿ ಹೂಡಿಕೆ ಮಾಡಿದ್ದು, ಸದ್ಯ ಚೇತಕ್ ಇವಿ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿರುವ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಮಾದರಿಗಳನ್ನು ರಸ್ತೆಗಿಳಿಸಲಿದೆ.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಕಂಪನಿಯು ಸಹಭಾಗಿತ್ವದ ಕಂಪನಿಗಳಾದ ಕೆಟಿಎಂ ಮತ್ತು ಹಸ್ಕವರ್ನಾ ಬ್ರಾಂಡ್ ಅಡಿಯಲ್ಲೂ ಪ್ರಮುಖ ಇವಿ ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಇವಿ ಮಾದರಿಗಳನ್ನು ಬಿಡುಗಡೆ ಮಾಡಲಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಬಜಾಜ್ ಕಂಪನಿಯು ಇವಿ ಉದ್ಯಮದಲ್ಲಿ ಎಥರ್, ಓಲಾ ಮತ್ತು ಟಿವಿಎಸ್‌ನಂತಹ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಮಾದರಿಗಳು ಉತ್ತಮ ಬೇಡಿಕೆ ಪಡೆದುಕೊಳ್ಳಲಿವೆ.

ಸದ್ಯ ಪ್ರೀಮಿಯಂ ಇವಿ ಸ್ಕೂಟರ್ ಮಾರಾಟದಲ್ಲಿ ಸಾಧರಣ ಬೇಡಿಕೆ ಹೊಂದಿರುವ ಹೊಸ ಚೇತಕ್ ಇವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಅರ್ಬೈನ್ ಮಾದರಿಯು ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ರೂ. 1.54 ಲಕ್ಷ ಮತ್ತು ಪ್ರೀಮಿಯಂ ವೆರಿಯೆಂಟ್‌ಗೆ ರೂ. 1.59 ಲಕ್ಷ ಬೆಲೆ ಹೊಂದಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇಕೋ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಹೊಸ ಇವಿ ಸ್ಕೂಟರ್‌ನಲ್ಲಿ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದ್ದು, ಈ ಆ್ಯಪ್ ಮೂಲಕ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಫೀಚರ್ಸ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿರ್ವಸ್ ಅಸಿಸ್ಟ್ ಮೋಡ್‌ನೊಂದಿಗೆ ಮೊಬಿಲಿಟಿ ತಂತ್ರಜ್ಞಾನ ಹೊಂದಿದೆ.

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್ನಂತೆ ಕಂಡರೂ ಹಲವಾರು ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಹೊಸ ಸ್ಕೂಟರ್ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿಯು ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ.


Click it and Unblock the Notifications








