ದೊಡ್ಡ ನಿರಾಸೆ: ಆಟೋ ಎಕ್ಸ್‌ಪೋ 2023ರಲ್ಲಿ 6 ಪ್ರಮುಖ ದ್ವಿಚಕ್ರ ವಾಹನ ಬ್ರಾಂಡ್‌ಗಳು ಇರುವುದಿಲ್ಲ!
ಆಟೋ ಎಕ್ಸ್‌ಪೋ 2023 ಬಗ್ಗೆ ಎಲ್ಲೆಡೆ ನಿರೀಕ್ಷೆಗಳು ಹೆಚ್ಚಿವೆ. ಭಾರತದಲ್ಲಿ ತಮ್ಮ ಬೈಕ್ ಹಾಗೂ ಕಾರುಗಳನ್ನು ಅನಾವರಣಗೊಳಿಸಲು ವಾಹನ ತಯಾರಿಕ ಕಂಪನಿಗಳು ಕಾಯುತ್ತಿದ್ದಾರೆ. ಅದೇರೀತಿ ಯಾವ ರೀತಿಯ ವಾಹನಗಳು ಬರಲಿವೆ ಎಂದು ಆಟೋಮೊಬೈಲ್ ಪ್ರಿಯರು ಎದುರು ನೋಡುತ್ತಿದ್ದಾರೆ. ಅಂತಹವರಿಗೆ ಇದು ಬೇಸರದ ವಿಚಾರವೇ ಎಂದು ಹೇಳಬಹುದು.
ಕೋವಿಡ್ ಬಳಿಕ, ಒಂದು ವರ್ಷ ತಡವಾಗಿ 2023ರ ಆಟೋ ಎಕ್ಸ್‌ಪೋ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆಯಲ್ಲಿದ್ದು, ಭರದಿಂದ ಸಿದ್ದತೆಗಳು ನಡೆಯುತ್ತಿವೆ. ವಾಸ್ತವವಾಗಿ, ಪ್ರಯಾಣಿಕ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಹಲವಾರು ಪ್ರಮುಖ ತಯಾರಕರು ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ, ಕೆಲವು ಪ್ರಮುಖ ತಯಾರಕರು ಇದರಿಂದ ದೂರ ಉಳಿಯಲು ತೀರ್ಮಾನ ಮಾಡಿದ್ದಾರೆ ಎಂದು ಸದ್ಯ ವರದಿಯಾಗಿದೆ. ಈ ಬಾರಿ ಎಕ್ಸ್‌ಪೋದಿಂದ ಹೊರಬಂದ 6 ಪ್ರಮುಖ ದ್ವಿಚಕ್ರ ವಾಹನ ಬ್ರಾಂಡ್‌ಗಳು ಇಲ್ಲಿವೆ.

ಹೀರೋ ಮೋಟೋಕಾರ್ಪ್:
ದೇಶದ ಪ್ರಮುಖ ವಾಹನ ತಯಾರಿಕ ಕಂಪನಿಯಾರುವ ಹೀರೋ ಮೋಟೋಕಾರ್ಪ್, ಬಹುನಿರೀಕ್ಷಿತ ಆಟೋ ಎಕ್ಸ್‌ಪೋ 2023ರಲ್ಲಿ ಭಾಗವಹಿಸದಿರಲು ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ. ಹೀರೋ ಮೋಟೋಕಾರ್ಪ್ ದೇಶೀಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ವಾಹನಗಳಾದ ಹೀರೋ ಸ್ಪ್ಲೆಂಡರ್ + ಮೋಟಾರ್‌ಸೈಕಲ್ ಮತ್ತು ಡೆಸ್ಟಿನಿ 125 ಎಕ್ಸ್‌ಟಿಇಸಿ ಸ್ಕೂಟರ್‌ಗಳನ್ನು ಮಾರಾಟ ಮಾಡಲು ಹೆಸರುವಾಸಿಯಾಗಿದೆ. ಈ ಬ್ರಾಂಡ್ ವಾಹನಗಳನ್ನು ಬಹುತೇಕ ಗ್ರಾಹಕರು ಲೈಕ್ ಮಾಡುತ್ತಾರೆ ಎಂದು ಹೇಳಬಹುದು.
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ):
ಹೋಂಡಾ ಮತ್ತೊಂದು ಪ್ರಮುಖ ದ್ವಿಚಕ್ರ ವಾಹನ ತಯಾರಕರಾಗಿದ್ದು, ಈ ಬಾರಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಆಟೋಎಕ್ಸ್‌ಪೋದಲ್ಲಿ ಭಾಗವಹಿಸುವುದರಿಂದ ಹೊರಗುಳಿದಿದೆ ಎಂದು ಸದ್ಯ ವರದಿಯಾಗಿದೆ. ಪ್ರಸ್ತುತ ಆಕ್ಟಿವಾ ಸ್ಕೂಟರ್ ಮತ್ತು ಶೈನ್ ಕಮ್ಯೂಟರ್ ಮೋಟಾರ್‌ಸೈಕಲ್‌ನಂತಹ ಹೆಚ್ಚು ಯಶಸ್ವಿ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿ ಮಾರಾಟ ಮಾಡುತ್ತಿದ್ದು, ತನ್ನದೇ ಆದ ಖರೀದಿದಾರರನ್ನು ಹೊಂದಿದೆ ಎಂದು ಹೇಳಬಹುದು.
ಟಿವಿಎಸ್ ಹಾಗೂ ಬಜಾಜ್ ಆಟೋ
ಟಿವಿಎಸ್ ಆಟೋ ಎಕ್ಸ್‌ಪೋದ ಭಾಗವಾಗದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಕಂಪನಿಯು ಜನಪ್ರಿಯ ದ್ವಿಚಕ್ರ ವಾಹನ ಮಾದರಿಗಳಾದ ಅಪಾಚೆ RTR ಮತ್ತು RR 310 ಮೋಟಾರ್‌ಸೈಕಲ್‌ಗಳು ಮತ್ತು ಜುಪಿಟರ್ 125 ಸ್ಕೂಟರ್‌ಗಳನ್ನು ಮಾರಾಟ ಮಾಡಲು ಹೆಸರುವಾಸಿಯಾಗಿದೆ. ಇನ್ನು, ಬಜಾಜ್ ಆಟೋ ಇತ್ತೀಚೆಗೆ ಹಲವಾರು ಹೊಸ ಮೋಟಾರ್‌ಸೈಕಲ್‌ಗಳಾದ CT 110X, ಪಲ್ಸರ್ P150, N160 ಮತ್ತು ಹೊಸ ಪಲ್ಸರ್ 250 ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಆದಾಗ್ಯೂ, ತಯಾರಕರು ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ.
ರಾಯಲ್ ಎನ್‌ಫೀಲ್ಡ್:
ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಕಂಪನಿ ರಾಯಲ್ ಎನ್‌ಫೀಲ್ಡ್ ತಯಾರಿಸುವ ಬೈಕ್ ಯುವಕರ ಹಾಟ್ ಫೆವರೇಟ್ ಆಗಿವೆ. ರಾಯಲ್ ಎನ್‌ಫೀಲ್ಡ್ ಬ್ರಾಂಡ್ ಮಾರುಕಟ್ಟೆಯಲ್ಲಿ 2022ರಲ್ಲಿ ಹಂಟರ್ 350, ಸ್ಕ್ರಾಮ್ 411 ಹಾಗೂ ಸೂಪರ್ ಮೀಟಿಯರ್ 650 ಸೇರಿದಂತೆ ಅತ್ಯಾಕರ್ಷಕ ದ್ವಿಚಕ್ರ ವಾಹನಗಳನ್ನು ಲಾಂಚ್ ಮಾಡಿತ್ತು. ಜೊತೆಗೆ ಮತ್ತಷ್ಟು ಹೊಸ ಬೈಕ್ ತಯಾರಿಸಲು ಮುಂದಾಗಿದೆ. ಆದರೆ, ಸದ್ಯದ ವರದಿ ಪ್ರಕಾರ, ರಾಯಲ್ ಎನ್‌ಫೀಲ್ಡ್ ಈ ಬಾರಿ ನಡೆಯಲಿರುವ ಆಟೋ ಎಕ್ಸೋದಲ್ಲಿಹೊರಗುಳಿಯಲಿದೆ ಎಂದು ಹೇಳಲಾಗಿದೆ.
ಹಾರ್ಲೆ-ಡೇವಿಡ್‌ಸನ್:
ಆಟೋ ಎಕ್ಸ್‌ಪೋದಲ್ಲಿ ಒಂದು ಮ್ಯಾಜಿಕ್ ಎಂದರೆ ಹಾರ್ಲೆ-ಡೇವಿಡ್‌ಸನ್ ಬೈಕುಗಳು. ಗ್ರಾಹಕರು, ದುಬಾರಿ ಮತ್ತು ಅತ್ಯಾಕರ್ಷಕವಾಗಿರುವ ಹಾರ್ಲೆ-ಡೇವಿಡ್‌ಸನ್ ಬೈಕುಗಳನ್ನು ಇಷ್ಟಪಡುತ್ತಾರೆ. ಆದಾಗ್ಯೂ, ಈ ವರ್ಷದ ಆಟೋ ಎಕ್ಸ್‌ಪೋದಲ್ಲಿ ತನ್ನ ಯಾವುದೇ ಬೈಕ್‌ಗಳನ್ನು ಪ್ರದರ್ಶಿಸುತ್ತಿಲ್ಲ ಎಂದು ವರದಿಯಾಗಿದೆ. ಇದರಿಂದ ಹೊಸದಾಗಿ ಬಿಡುಗಡೆಯಾದ ಹಾರ್ಲೆ-ಡೇವಿಡ್‌ಸನ್ ಸ್ಪೋರ್ಟ್‌ಸ್ಟರ್ ಎಸ್ ಮತ್ತು ಪ್ಯಾನ್-ಅಮೆರಿಕ 1250 ಎಡಿವಿ ಮೇಲೆ ಕಣ್ಣುಗಳನ್ನು ಇಡಲು ಆಶಿಸುವ ಬೈಕ್ ಪ್ರಿಯರು ತುಂಬಾ ನಿರಾಶೆ ಅನುಭವಿಸಬೇಕಿದೆ ಎಂದು ಹೇಳಿದರೆ ತಪ್ಪಾಗಲಾರದು.
ತಮ್ಮದೇ ಆದ ಕೆಲವೊದು ಕಾರಣಕ್ಕೆ ಈ ಬಾರಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋಗೆ ಭಾಗವಹಿಸಲು ವಾಹನ ತಯಾರಿಕ ಕಂಪನಿಗಳು ಮನಸ್ಸು ಮಾಡಿಲ್ಲ ಎಂದು ವರದಿಯಾಗಿದೆ. ಅಕ್ಟೋಬರ್ 2022ರಿಂದ ಮಾಧ್ಯಮಗಳ ವರದಿಯ ಪ್ರಕಾರ, ಸಂಘಟಕರಾದ SIAM ಮತ್ತು CII ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುವಂತೆ ಹಲವಾರು ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ, ನಂತರ ಯಾವುದೇ ಸಕಾರಾತ್ಮಕ ಬೆಳವಣಿಗೆ ಈವರೆಗೆ ವರದಿಯಾಗಿಲ್ಲ. ಮುಂಬರುವ ದಿನಗಳಲ್ಲಿ ಸಕಾರತ್ಮಕ ಪ್ರತಿಕ್ರಿಯೆ ಬರುತ್ತದೆಯೇ ಎಂಬುದನ್ನು ಕಾದು ನೀಡಬೇಕಾಗಿದೆ.


Click it and Unblock the Notifications








