ಆಟೋ ಎಕ್ಸ್‌ಪೋ 2023ರಲ್ಲಿ ದೊಡ್ಡ ದಾಖಲೆ: ಇಲ್ಲಿದೆ ವಿವರ

ಬಹುನಿರೀಕ್ಷಿತ 2023ರ ಆಟೋ ಎಕ್ಸ್‌ಪೋಗೆ ಇತ್ತೀಚೆಗೆ ತೆರೆ ಬಿದ್ದಿದೆ. ಕೊರೋನಾ ಕಾರಣ, ಮೂರು ವರ್ಷಗಳ ನಂತರ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬರೋಬ್ಬರಿ 6.36 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಆ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಅದ್ದೂರಿಯಾಗಿ ನಡೆದ ಈ ಆಟೋ ಎಕ್ಸ್‌ಪೋದಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ಸೇರಿದಂತೆ ವಿವಿಧ ವಾಹನ ಮಾದರಿಗಳನ್ನು ಅನಾವರಣಗೊಳಿಸಿತು. ಜೊತೆಗೆ ನವೀನ ವೈಶಿಷ್ಟ್ಯ, ವಿನ್ಯಾಸ ಹಾಗೂ ಕೈಗೆಟುಕುವ ಬೆಲೆ ಹೊಂದಿರುವ ವಾಹನಗಳನ್ನು ಈ ಈವೆಂಟ್‌ನಲ್ಲಿ ಲಾಂಚ್ ಮಾಡಲಾಯಿತು. ಸುಮಾರು 15ಕ್ಕೂ ಹೆಚ್ಚು ಬೇರೆ - ಬೇರೆ ದೇಶಗಳ ವಿವಿಧ ವಾಹನ ತಯಾರಕ ಕಂಪನಿಗಳು ಭಾಗವಹಿಸುವ ಮೂಲಕ ಆಟೋ ಎಕ್ಸ್‌ಪೋವನ್ನು ಯಶಸ್ವಿಗೊಳಿಸಲು ಸಹಕರಿಸಿದವು ಎಂದು ಹೇಳಬಹುದು.

ಆಟೋ ಎಕ್ಸ್‌ಪೋ 2023ರಲ್ಲಿ ದೊಡ್ಡ ದಾಖಲೆ: ಇಲ್ಲಿದೆ ವಿವರ

ಈ ಆಟೋ ಎಕ್ಸ್‌ಪೋ ಜನವರಿ 11ರಿಂದ ದೆಹಲಿಯಲ್ಲಿ ಪ್ರಾರಂಭವಾಗಿತ್ತು. ಆದರೆ, ಮೊದಲ ಎರಡು ದಿನಗಳು ಅಂದರೆ ಜನವರಿ 11 ಮತ್ತು 12ರಂದು ಮಾಧ್ಯಮಗಳಿಗೆ ಮೀಸಲಿಡಲಾಗಿತ್ತು. ಆ ಬಳಿಕ, ಎಕ್ಸ್‌ಪೋವನ್ನು ವೀಕ್ಷಿಸಲು ಸಂದರ್ಶಕರಿಗೆ ಅವಕಾಶ ನೀಡಲಾಗಿತ್ತು. 2022ರಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಕೊರೋನಾ ವೈರಸ್‌ ಕಾರಣದಿಂದ 2023ಕ್ಕೆ ಮುಂದೂಡಲಾಗಿತ್ತು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ಬಾರಿಯ ಎಕ್ಸ್‌ಪೋದಲ್ಲಿ ಬಹುತೇಕ ದೇಶೀಯ ವಾಹನ ತಯಾರಕ ಕಂಪನಿಗಳು ಅಬ್ಬರಿಸಿದ್ದವು.

ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್‌ನಂತಹ ಪ್ರಮುಖ ದೇಶೀಯ ವಾಹನ ತಯಾರಕ ಕಂಪನಿಗಳಲ್ಲದೆ, ಇಂಡೋ - ಜಪಾನೀಸ್ ವಾಹನ ತಯಾರಕ ಮಾರುತಿ ಸುಜುಕಿ, ಕೊರಿಯಾ ಮೂಲದ ಹ್ಯುಂಡೈ, ಕಿಯಾ ಮೋಟಾರ್ಸ್, ಟೊಯೊಟಾ, ಬ್ರಿಟನ್ ದೇಶದ ಎಂಜಿ ಮೋಟಾರ್, ಪ್ರವೇಗ್, ಲೆಕ್ಸಸ್ ಮತ್ತು ಚೀನಾ ಮೂಲದ ಬಿವೈಡಿಯಂತಹ ಪ್ರಮುಖ ಕಂಪನಿಗಳು ಆಟೋ ಎಕ್ಸ್‌ಪೋದ ಭಾಗವಹಿಸಿದ್ದವು. ಇಷ್ಟೇ ಅಲ್ಲದೆ, ಕೆಲವು ಸಣ್ಣ ಕಂಪನಿಗಳು ತಮ್ಮ ವಾಹನಗಳನ್ನು ಪ್ರದರ್ಶಿಸಿ, ಬಿಡುಗಡೆ ಮಾಡಿದವು.

ಹಲವು ದಿನಗಳಿಂದ ಕಾರು ಪ್ರಿಯರು ಕಾತರದಿಂದ ಕಾಯುತ್ತಿದ್ದ ಹ್ಯುಂಡೈನ Ioniq 5 ಎಲೆಕ್ಟ್ರಿಕ್ ಕಾರನ್ನು ಬಾಲಿವುಡ್ ನಟ ಶಾರುಖ್ ಖಾನ್ ಸಮ್ಮುಖದಲ್ಲಿ ಲಾಂಚ್ ಮಾಡಲಾಯಿತು. ಅಲ್ಲದೆ, ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೆಸರು ಮಾಡಿರುವ ಮಾರುತಿ ಸುಜುಕಿ ತನ್ನ ಫ್ರಾಂಕ್ಸ್ ಎಸ್‌ಯುವಿ ಮತ್ತು ಬಹುನಿರೀಕ್ಷಿತ 5-ಡೋರ್ ಜಿಮ್ನಿ ಆಫ್-ರೋಡ್ ಎಸ್‌ಯುವಿಯನ್ನು ಆಟೋ ಎಕ್ಸ್‌ಪೋದಲ್ಲೇ ಬಿಡುಗಡೆ ಮಾಡಿತು. ಟಾಟಾ ಮೋಟಾರ್ಸ್ ತನ್ನ ಕಾರುಗಳನ್ನು ಮಾತ್ರವಲ್ಲದೆ, ಕಮರ್ಷಿಯಲ್ ವೆಹಿಕಲ್ ಗಳನ್ನು ಪ್ರದರ್ಶಿಸಿತು.

ಆಟೋ ಎಕ್ಸ್‌ಪೋದಲ್ಲಿ ಅತ್ಯಾಧುನಿಕ ಬೈಕ್‌ಗಳನ್ನು ಸಹ ಅನಾವರಣ ಮಾಡಲಾಯಿತು. ಇವುಗಳಲ್ಲಿ ಬಹುತೇಕ ಫ್ಲೆಕ್ಸ್-ಫ್ಯುಯೆಲ್ ಬೈಕ್‌ಗಳಾಗಿದ್ದು, ಸುಜುಕಿ ಜಿಕ್ಸರ್ 250, ಬಜಾಜ್ ಪಲ್ಸರ್ NS160, ಟಿವಿಎಸ್ ಅಪಾಚೆ RTR 160 4Vಗಳು ಸೇರಿವೆ. ಇಷ್ಟೇ ಅಲ್ಲದೆ, ಪ್ರಮುಖ ವಿದೇಶಿ ಬ್ರ್ಯಾಂಡ್‌ಗಳಾದ ಬೆನೆಲ್ಲಿ, ಕೀವೇ, ಮೋಟೋ ಮೊರಿನಿ, ಕ್ಯೂಜೆ ಮೋಟಾರ್ ಮತ್ತು ಜೊಂಟೆಸ್ ಸಹ ವಿವಿಧ ಮಾದರಿಗಳನ್ನು ಪ್ರದರ್ಶನ/ ಬಿಡುಗಡೆ ಮಾಡಿದವು. ಕೇವಲ ಬೈಕ್‌ಗಳು ಮಾತ್ರವಲ್ಲದೆ, ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೂಡ ಕಾಣಿಸಿಕೊಂಡವು. ಹಲವು ದ್ವಿಚಕ್ರ ವಾಹನಗಳು ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ.

ಆಟೋ ಎಕ್ಸ್‌ಪೋದಲ್ಲಿ ಕಾಣಿಸಿಕೊಂಡ ವಾಣಿಜ್ಯ ವಾಹನಗಳು:

ಆಟೋ ಎಕ್ಸ್‌ಪೋದಲ್ಲಿ ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಜೊತೆ ವಾಣಿಜ್ಯ ವಾಹನಗಳನ್ನು ಸಹ ಪ್ರದರ್ಶಿಸಲಾಯಿತು. ಅದರಲ್ಲಿ ಹೈಡ್ರೋಜನ್ ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವಾಹನಗಳು ಸೇರಿವೆ ಎಂದು ಹೇಳಬಹುದು. ಅಶೋಕ್ ಲೇಲ್ಯಾಂಡ್, ಟಾಟಾ ಮೋಟಾರ್ಸ್ ನಂತಹ ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಗಳು, ತಮ್ಮ ವಾಹನಗಳನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದವು. ಜೊತೆಗೆ ಸಿಎನ್‌ಜಿ ವಾಹನಗಳನ್ನು ಸಹ ಅನಾವರಣಗೊಳಿಸಲಾಯಿತು.

ಅಶೋಕ್ ಲೇಲ್ಯಾಂಡ್, ಸಿಎನ್‌ಜಿ ಮತ್ತು ಎಲ್‌ಎನ್‌ಜಿ ವಾಹನಗಳು ಹಾಗೂ ಇಂಟರ್‌ಸಿಟಿ ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರದರ್ಶನ ಮಾಡಿತು. ವಿಶೇಷವಾಗಿ, ಈ ಆಟೋ ಎಕ್ಸ್‌ಪೋದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ವಾಹನಗಳನ್ನು ಅನಾವರಣಗೊಳಿಸಲಾಯಿತು. ಇದನ್ನು ಗಮನಿಸಿದಾಗ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಜನಪ್ರಿಯತೆ ಕಡಿಮೆಯಾಗಲಿದೆ. ಈಗಾಗಲೇ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ವಾಹನಗಳಿಗೆ ಬೇಡಿಕೆ ಸಾಕಷ್ಟು ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಹಲವು ಕಂಪನಿಗಳು ಪೆಟ್ರೋಲ್ ವಾಹನಗಳ ತಯಾರಿಕೆಯಿಂದ ದೂರ ಸರಿಯುತ್ತಿವೆ.

Most Read Articles

Kannada
English summary
Auto expo 2023 breaks visitor record 6 36 lakh people details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X