ನವೀಕೃತ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಗೆ ಬಿಡುಗಡೆಯಾದ ಹೊಸ ಹೀರೋ ಎಕ್ಸ್‌ಟ್ರೀಮ್ 160R
ಹೀರೋ ಮೋಟೋಕಾರ್ಪ್ ಕಂಪನಿಯು ತನ್ನ ಪ್ರವೇಶ ಮಟ್ಟದ ಸ್ಪೋರ್ಟಿ ಬೈಕ್ ಆದ ಎಕ್ಸ್‌ಟ್ರೀಮ್ 160R ನ ನವೀಕರಿಸಿದ 2022 ಮಾದರಿಯನ್ನು ಬಿಡುಗಡೆ ಮಾಡಿದೆ. ಈ ಬೈಕ್‌ನಲ್ಲಿನ ಇತ್ತೀಚಿನ ಆಕರ್ಷಣೀಯ ಮಾರ್ಪಾಡೆಂದರೆ ಅದರ ಡಿಜಿಟಲ್ ಕ್ಲಸ್ಟರ್‌ನಲ್ಲಿ ಹೊಸ ಗೇರ್-ಪೊಸಿಷನ್ ಇಂಡಿಕೇಟರ್ ಪಡೆದುಕೊಂಡಿದೆ.

ಇನ್ನುಳಿದಂತೆ ಹೀರೋ ಮೋಟೋಕಾರ್ಪ್ ಎಕ್ಸ್‌ಟ್ರೀಮ್ 160R ನಲ್ಲಿ ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿ ಸಣ್ಣ ಮಾರ್ಪಾಡುಗಳನ್ನು ಮಾಡಿದೆ. ಈ ಮೋಟಾರ್‌ಸೈಕಲ್ ಸ್ಯಾಡಲ್‌ಗಾಗಿ ಪರಿಷ್ಕೃತ ವಿನ್ಯಾಸವನ್ನು ಮತ್ತು ಹೆಚ್ಚಿನ ಅನುಕೂಲಕ್ಕಾಗಿ ಹೊಸ ಗ್ರಾಬ್‌ರೈಲ್ ಅನ್ನು ಸಹ ನೀಡಲಾಗಿದೆ. ಉಳಿದಂತೆ ಇನ್ನೆಲ್ಲವನ್ನು ಹಾಗೇ ಉಳಿಸಲಾಗಿದೆ.

2022 Xtreme 160R ಸಿಂಗಲ್-ಪಾಡ್ ಹೆಡ್‌ಲೈಟ್, ಮಸ್ಕುಲರ್ ವಿನ್ಯಾಸ, ಸೈಡ್-ಸ್ಲಂಗ್ ಎಕ್ಸಾಸ್ಟ್ ಮತ್ತು ಅಲಾಯ್ ವೀಲ್‌ಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಹಾಗೇ ಮುಂದುವರಿಸಿದೆ. ಹೀರೋ ಮೋಟೋಕಾರ್ಪ್ 2022 Xtreme 160R ಮೋಟಾರ್‌ಸೈಕಲ್ ಅನ್ನು ಸಿಂಗಲ್ ಡಿಸ್ಕ್, ಡ್ಯುಯಲ್ ಡಿಸ್ಕ್ ಮತ್ತು ಸ್ಟೆಲ್ತ್ ಎಡಿಷನ್ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟಕ್ಕೆ ಲಭ್ಯವಾಗಿಸಿದೆ.

ಎಲ್ಲಾ ರೂಪಾಂತರಗಳು ಒಂದೇ ವಿನ್ಯಾಸ, ಯಾಂತ್ರಿಕ ವಿಶೇಷಣಗಳು ಮತ್ತು ಒಂದೇ ಹಾರ್ಡ್‌ವೇರ್‌ನಲ್ಲಿ ಲಭ್ಯವಾಗಲಿವೆ. ಹಾಗಾಗಿ ಶ್ರೇಣಿಯು 163cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಒಳಗೊಂಡಿವೆ. ಇದು 8,500rpm ನಲ್ಲಿ 15bhp ಮತ್ತು 6,500rpm ನಲ್ಲಿ 14Nm ಪೀಕ್ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಸಿಂಗಲ್ ಡಿಸ್ಕ್ ಆವೃತ್ತಿಯು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸೆಟಪ್ ಅನ್ನು ಒಳಗೊಂಡರೆ, ಡ್ಯುಯಲ್ ಡಿಸ್ಕ್ ಮತ್ತು ಸ್ಟೆಲ್ತ್ ಆವೃತ್ತಿಗಳಿಗೆ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಉಳಿದಂತೆ ಸಿಂಗಲ್-ಚಾನೆಲ್ ABS ಅನ್ನು ಒಳಗೊಂಡಿದೆ. ಸಸ್ಪೆನ್ಷನ್ ಕಾರ್ಯಗಳನ್ನು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಪ್ರೀ ಲೋಡ್-ಹೊಂದಾಣಿಕೆಯೊಂದಿಗೆ ಹಿಂಭಾಗದ ಮೊನೊ-ಶಾಕ್ ಮೂಲಕ ನಿರ್ವಹಿಸಲಾಗುತ್ತದೆ.

ಎಕ್ಸ್‌ಟ್ರೀಮ್ 160R ಸಿಂಗಲ್ ಡಿಸ್ಕ್: ರೂ 1,17,148 (ಎಕ್ಸ್ ಶೋರೂಂ, ದೆಹಲಿ)
ಎಕ್ಸ್‌ಟ್ರೀಮ್ 160ಆರ್ ಡ್ಯುಯಲ್ ಡಿಸ್ಕ್: ರೂ. 1,20,498 (ಎಕ್ಸ್ ಶೋರೂಂ, ದೆಹಲಿ)
ಎಕ್ಸ್‌ಟ್ರೀಮ್ 160ಆರ್ ಸ್ಟೆಲ್ತ್: ರೂ. 1,22,338 (ಎಕ್ಸ್ ಶೋರೂಂ, ದೆಹಲಿ)

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ಟ್ಯಾಂಡರ್ಡ್ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಕೇವಲ 7 ಸೆಕೆಂಡುಗಳಲ್ಲಿ 0 ದಿಂದ 60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಹೀರೋ ಹೇಳಿಕೊಂಡಿದೆ. ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕಿನ ಬೇಸ್ ಸ್ಪೆಕ್ ಮಾದರಿಯು 138.5 ಕೆಜಿ ತೂಕವನ್ನು ಹೊಂದಿದೆ.

ಸ್ಪೋರ್ಟ್ಸ್ ಕಮ್ಯೂಟರ್ ವಿಭಾಗದಲ್ಲಿ ಇದು ಅತ್ಯಂತ ಹಗುರವಾದ ಬೈಕ್ ಎಂಬುದೂ ಗಮನಾರ್ಹ. Xtreme ನ ಆರಂಭಿಕ ಆವೃತ್ತಿಯು 138.5 ಕೆಜಿ ತೂಗುತ್ತದೆ ಎಂದು Hero MotoCorp ಹೇಳಿಕೊಂಡಿದೆ. Xtreme 160R ನೇರವಾಗಿ ಬಜಾಜ್ ಪಲ್ಸರ್ N160 ಮತ್ತು TVS ಅಪಾಚೆ RTR 160 4V ಜೊತೆಗೆ ಭಾರತೀಯ ಮಾರುಕಟ್ಟೆಯ ಈ ವಿಭಾಗದಲ್ಲಿ ಸ್ಪರ್ಧಿಸುತ್ತದೆ.

ಕಳೆದ ವರ್ಷ ಜನವರಿಯಲ್ಲಿ ಪರಿಚಯಿಸಲಾದ ಎಕ್ಸ್‌ಟ್ರೀಮ್ 160ಆರ್ 100 ಮಿಲಿಯನ್ ಸೀಮಿತ ಆವೃತ್ತಿಯ ರೂಪಾಂತರವನ್ನು ಕಂಪನಿಯು ಈಗ ಸ್ಥಗಿತಗೊಳಿಸಿದೆ. 10 ಕೋಟಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಹೀರೋ ಮೈಲಿಗಲ್ಲನ್ನು ಸ್ಮರಿಸಲು, ಕಂಪನಿಯು 100 ಮಿಲಿಯನ್ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

ಹೀರೋ ಮೋಟೊಕಾರ್ಪ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಟ್ರಿಮ್ 160ಆರ್, ಎಕ್ಸ್‌ಪಲ್ಸ್ 200, ಎಕ್ಸ್‌ಟ್ರಿಮ್ 200ಎಸ್, ಎಕ್ಸ್‌ಪಲ್ಸ್ 200ಟಿ, ಪ್ಯಾಶನ್ ಪ್ರೋ, ಸ್ಲೈಂಡರ್ ಐ ಸ್ಮಾರ್ಟ್, ಗ್ಲ್ಯಾಮರ್, ಸ್ಲೈಂಡರ್ ಪ್ಲಸ್, ಹೆಚ್‍ಎಫ್ ಡಿಲಕ್ಸ್, ಸೂಪರ್ ಸ್ಲೈಂಡರ್, ಡೆಸ್ಟಿನಿ 125, ಮ್ಯಾಸ್ಟ್ರೊ ಎಡ್ಜ್ 125, ಮ್ಯಾಸ್ಟ್ರೊ ಎಡ್ಜ್ 110, ಪ್ರೆಷರ್ ಪ್ಲಸ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಹೀರೋ ಎಕ್ಸ್‌ಟ್ರಿಮ್ 160ಆರ್ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರಿಂದ ಹೀರೋ ಕಂಪನಿಯು ಎಕ್ಸ್‌ಟ್ರಿಮ್ 160ಆರ್ ಸ್ಟೆಲ್ತ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಈ ಹೊಸ ಮಾದರಿಯು ನೆರವಾಗುತ್ತದೆ.


Click it and Unblock the Notifications