ಹೊಸ ತಂತ್ರಜ್ಞಾನ ಪ್ರೇರಿತ ಎಸ್1 ಇವಿ ಸ್ಕೂಟರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ತಂತ್ರಜ್ಞಾನ ಪ್ರೇರಿತ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 99,999 ಬೆಲೆ ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಆಗಸ್ಟ್ 15ರಂದೇ ಎಸ್1 ಮತ್ತು ಎಸ್1 ಪ್ರೊ ಇವಿ ಸ್ಕೂಟರ್‌ಗಳನ್ನು ಅನಾವರಣಗೊಳಿಸುವ ಮೂಲಕ ಹೊಸ ಇವಿ ಸ್ಕೂಟರ್ ಮಾರಾಟ ಆರಂಭಿಸಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಕಾರಣಾಂತರಗಳಿಂದ ಎಸ್1 ಪ್ರೊ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಆದರೆ ಎಸ್1 ಮಾದರಿಯಲ್ಲಿ ಕಂಪನಿಯು ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಇದೀಗ ಮತ್ತೆ ಮರುಬಿಡುಗಡೆ ಮಾಡಿದೆ.

ಹೊಸ ಎಸ್1 ಮಾದರಿಯು ಎಸ್1 ಪ್ರೊ ಮಾದರಿಯನ್ನೇ ಆಧರಿಸಿ ನಿರ್ಮಾಣವಾಗಿದ್ದು, ಫೀಚರ್ಸ್‌ಗಳಲ್ಲಿ ತುಸು ಭಿನ್ನತೆ ಹೊಂದಿರುವ ಎಸ್1 ಇವಿ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 99,999 ಬೆಲೆ ಹೊಂದಿದೆ.

ಎಸ್1 ಇವಿ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಸಬ್ಸಡಿ ಆಧರಿಸಿ ತುಸು ಹೆಚ್ಚಳವಾಗಲಿದ್ದು, ಹೊಸ ಇವಿ ಸ್ಕೂಟರ್ ಖರೀದಿಗಾಗಿ ಕಂಪನಿಯು ರೂ. 499 ಮುಂಗಡ ಹಣದೊಂದಿಗೆ ಬುಕಿಂಗ್ ಪ್ರಾರಂಭಿಸಿದೆ. ಓಲಾ ಎಲೆಕ್ಟ್ರಿಕ್‌ನ ಅಧಿಕೃತ ವೆಬ್‌ಸೈಟ್ (https://book.olaelectric.com/) ಮೂಲಕ ಸ್ಕೂಟರ್ ಅನ್ನು ಬುಕ್ ಮಾಡಬಹುದಾಗಿದ್ದು, ಸೆಪ್ಟೆಂಬರ್ 2 ರಿಂದ ಸ್ಕೂಟರ್ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ.

ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆ ವೇಳೆ ಬಾಕಿ ಮೊತ್ತ ಪಾವತಿಸುವ ಗ್ರಾಹಕರಿಗೆ ಸೆಪ್ಟೆಂಬರ್ 7ರ ಒಳಗಾಗಿ ಹೋಂ ಡೆಲಿವರಿ ಆರಂಭವಾಗಲಿದ್ದು, ಕಂಪನಿಯು ತಿಂಗಳಿಗೆ ಕೇವಲ ರೂ. 2,999 ಗಳಗೆ ಲಭ್ಯವಿರುವ ಇಎಂಐನೊಂದಿಗೆ ಸಾಲ-ಸೌಲಭ್ಯಗಳನ್ನು ಒದಗಿಸುತ್ತಿದೆ.

ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರು ಪೂರ್ಣ ಮೊತ್ತದೊಂದಿಗೆ ಇಲ್ಲವೆ ಓಲಾ ಕಂಪನಿಯೊಂದಿನ ಪಾಲುದಾರಿಕೆ ಬ್ಯಾಂಕ್‌ಗಳಿಂದಲೂ ಸುಲಭ ಹಣಕಾಸು ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇವೆರಡ ಜೊತೆಗೆ ಕಂಪನಿಯು ತನ್ನದೇ ಆದ ಓಲಾ ಫೈನಾನ್ಸ್ ಮೂಲಕ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.

ಇನ್ನು ಹೊಸ ಎಸ್1 ಮಾದರಿಯು ಕಳೆದ ವರ್ಷ ಅನಾವರಣಗೊಳಿಸಿದ ಸಂದರ್ಭದಲ್ಲಿನ ಮಾದರಿಗಿಂತಲೂ ಇದೀಗ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ವಿನ್ಯಾಸದ ವಿಷಯದಲ್ಲಿ ಮಾತ್ರ ಎಸ್1 ಪ್ರೊ ಮಾದರಿಯನ್ನೇ ಹೋಲುತ್ತದೆ.

ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 3KWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಮೂಲಕ ARAI ಪ್ರಮಾಣೀಕೃತ 131 ಕಿಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಇಕೋ ಮೋಡ್‌ನಲ್ಲಿ ಗರಿಷ್ಠ 128 ಕಿಮೀ, 101 ಕಿ.ಮೀ ನಾರ್ಮಲ್ ಮೋಡ್‌ನಲ್ಲಿ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಕನಿಷ್ಠ 90 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಓಲಾ ಪ್ರಕಾರ, ಎಸ್1 ಮಾದರಿಯ ಗರಿಷ್ಠ ವೇಗವು 95 ಕಿ.ಮೀ ಆಗಿದ್ದು, ಈ ಕಾರಣದಿಂದಾಗಿ ಈ ಸ್ಕೂಟರ್ ಅನ್ನು ಹೆದ್ದಾರಿಗಳಲ್ಲಿಯೂ ಸುಲಭವಾಗಿ ಓಡಿಸಬಹುದಾಗಿದೆ. ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ರೆಡ್, ಜೆಟ್ ಬ್ಲಾಕ್, ಬ್ರೊಸಲಿನ್ ವೈಟ್, ನಿಯೋ ಮಿಂಟ್, ಲಿಕ್ವಿಡ್ ಸಿಲ್ವರ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಹೊಸ ಸಾಫ್ಟ್‌ವೇರ್‌ಗೆ ಬೆಂಬಲಿಸುವ ಎಸ್1
ಹೌದು, ಓಲಾ ಕಂಪನಿಯು ಹೇಳಿಕೊಂಡಿರುವಂತೆ ಹೊಸ ಎಸ್1 ಮಾದರಿಯು ಕಂಪನಿಯು ಇತ್ತೀಚಿಗೆ ಪರಿಚಯಿಸಿರುವ ಹೊಸ ಆಪರೇಟಿಂಗ್ ಸಿಸ್ಟಮ್ (MoveOS 3) ಅನ್ನು ಬೆಂಬಲಿಸಲಿದ್ದು, ಈ ಅಪ್‌ಡೇಟ್‌ನಲ್ಲಿ ಗ್ರಾಹಕರಿಂದ ಬಂದ ಪ್ರತಿಕ್ರಿಯೆಯನ್ನು ಆಧರಿಸಿ, ಆಪರೇಟಿಂಗ್ ಸಿಸ್ಟಮ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಹೊಸ ಆಪರೇಟಿಂಗ್ ಸಿಸ್ಟಮ್ ಮೂಲಕ ಎಸ್1 ಮಾದರಿಯಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಬಳಕೆದಾರ ಸ್ನೇಹಿ ವೈಶಿಷ್ಟ್ಯತೆಗಳಾದ ಮ್ಯೂಸಿಕ್, ನ್ಯಾವಿಗೇಷನ್, ಓಲಾ ಆ್ಯಪ್, ರಿವರ್ಸ್ ಮೋಡ್ ಸೌಲಭ್ಯಗಳಿವೆ.

ಇನ್ನು ಕಂಪನಿಯು ವಿದ್ಯುತ್ ವಾಹನಗಳಿಗಾಗಿ ದೇಶದ ಅತಿದೊಡ್ಡ ಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದ್ದು, ಓಲಾ ಬ್ಯಾಟರಿ ಇನೋವೆಷನ್ ಸೆಂಟರ್ ಮೂಲಕ ಲೀಥಿಯಂ-ಐಯಾನ್ ಬ್ಯಾಟರಿ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿಸುವ ನೀರಿಕ್ಷೆ ಹೊಂದಿದೆ.


Click it and Unblock the Notifications








