ಬ್ಯಾಟರಿ ಬದಲಿಸುವ ಆಯ್ಕೆಯೊಂದಿಗೆ 2 ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಪೋಯಿಸ್ ಕಂಪನಿ
ನಿಸಿಕಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಇವಿ ಸ್ಟಾರ್ಟ್‌ಅಪ್ ಬ್ರಾಂಡ್ ಆಗಿರುವ ಪೋಯಿಸ್, ಎನ್‌ಎಕ್ಸ್-120 ಹಾಗೂ ಪೊಯೀಸ್ ಗ್ರೇಸ್ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಇ-ಸ್ಕೂಟರ್‌ಗಳನ್ನು ಬೆಂಗಳೂರಿನಿಂದ ಬಿಡುಗಡೆ ಮಾಡಿರುವುದಾಗಿ ಕಂಪನಿ ತಿಳಿಸಿದೆ.

ನಿಸಿಕಿ ಟೆಕ್ನಾಲಜೀಸ್ ನೀಡಿರುವ ಮಾಹಿತಿಯ ಪ್ರಕಾರ, ಎನ್‌ಎಕ್ಸ್-120 ಸ್ಕೂಟರ್‌ನ ಎಕ್ಸ್ ಶೋರೂಂ ಬೆಲೆ 1,24,000 ರೂ. ಇದ್ದು, ಗ್ರೇಸ್‌ನ ಎಕ್ಸ್ ಶೋರೂಂ ಬೆಲೆ 1,04000 ಇದೆ. ಈ ಎರಡೂ ಸ್ಕೂಟರ್‌ಗಳು ನಿಕ್ಕಲ್,ಮ್ಯಾಂಗನೀಸ್ ಮತ್ತು ಕೋಬಾಲ್ಟ್ ಆಧಾರಿತ ಲಿಥಿಯಂ-ಐರನ್ ಬ್ಯಾಟರಿಗಳನ್ನು ಪಡೆದಿರುವುದರಿಂದ 110 ಕಿ.ಮೀ ನಿಂದ 140 ಕಿ.ಮೀ ವ್ಯಾಪ್ತಿಯನ್ನು ನೀಡಲಿದ್ದು, ಗರಿಷ್ಠ 55 ಕಿ.ಮೀ ವೇಗವನ್ನು ತಲುಪುತ್ತವೆ ಎಂದು ಕಂಪನಿ ತಿಳಿಸಿದೆ.

ಹೊಸ ಇ-ಸ್ಕೂಟರ್‌ಗಳು ಬ್ಲೂಟೂತ್ ಸಂಪರ್ಕ, ಯುಎಸ್‌ಬಿ ಚಾರ್ಜಿಂಗ್ ಕನೆಕ್ಷನ್, ಟ್ಯೂಬ್‌ಲೆಸ್ ಟೈರ್‌ಗಳು, ಫ್ರಂಟ್ & ಬ್ಯಾಕ್ ಕಾಂಪಿ-ಬ್ರೇಕ್ ಸಿಸ್ಟಂಗಳು ಸೇರಿದಂತೆ ತಾಂತ್ರಿಕ ಸೌಲಭ್ಯಗಳನ್ನು ಹೊಂದಿವೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಚಾಲಕನಿಗೆ ಕಾಲಿಡಲು ಬೇಕಾದ ಸಾಕಷ್ಟು ಸ್ಥಳಾವಕಾಶ ಮತ್ತು ಇಬ್ಬರು ಆರಾಮವಾಗಿ ಕೂರಲು ಆಸನ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಪೋಯಿಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒಟ್ಟು ಐದು ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಗೆ ತರಲಾಗಿದೆ. ಇದಲ್ಲದೆ, ನಿಸಿಕಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕೂಡ ಸುಯಿಂಗ್ ಎಂಬ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಇದು ಈಗ ಬಿಡುಗಡೆ ಮಾಡಲಾದ ಮಾದರಿಗಳಿಗಿಂತ ವೇಗವಾಗಿರುತ್ತದೆ ಎನ್ನಲಾಗಿದ್ದು, ಇದರ ಟಾಪ್-ಸ್ಪೀಡ್ 90 ಕೆಎಂಪಿ ಇರುವುದಾಗಿ ತಿಳಿದುಬಂದಿದೆ.

ಎನ್‌ಎಕ್ಸ್-120 ಮತ್ತು ಗ್ರೇಸ್ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆಯ ಬಗ್ಗೆ ಪ್ರತಿಕ್ರಿಯಿಸಿರುವ ನಿಸಿಕಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಠ್ಠಲ ಬೆಲಾಂದಾರ್, "ತಾಂತ್ರಿಕ ಪ್ರಗತಿ, ವೆಚ್ಚ, ಪ್ರವೇಶಾವಕಾಶ ಮತ್ತು ಸುಸ್ಥಿರತೆಯ ನಡುವೆ ಸಮತೋಲನವನ್ನು ಸಾಧಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನಾವು ಇವಿ ಕ್ರಾಂತಿಯ ದೊಡ್ಡ ಭಾಗವಾಗುತ್ತೇವೆ ಮತ್ತು ತಾಂತ್ರಿಕವಾಗಿ ಸುಧಾರಿತ ವೈಶಿಷ್ಟ್ಯಗಳು, ತಂತ್ರಗಾರಿಕೆಯ ಸರಳತೆ ಮತ್ತು ಕೈಗೆಟುಕುವ ವಾಹನ ಮಾಲೀಕತ್ವದ ಮೂಲಕ ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುತ್ತೇವೆ." ಬೆಂಗಳೂರು ಮೂಲದ ಇವಿ ಸ್ಟಾರ್ಟ್ ಅಪ್ ಮೊದಲ ವರ್ಷದಲ್ಲಿ ವರ್ಷಕ್ಕೆ 30,000 ವಾಹನಗಳ ಉತ್ಪಾದನೆಯ ಗುರಿ ಹೊಂದಿದೆ. ಮುಂದಿನ ವರ್ಷದಲ್ಲಿ ಇದನ್ನು 1 ಲಕ್ಷಕ್ಕೆ ಹೆಚ್ಚಿಸಬಹುದು.

ನಿಸುಕಿ ಟೆಕ್ನಾಲಜೀಸ್ ಬ್ಯಾಟರಿ-ಬದಲಿ ಕೇಂದ್ರಗಳು ಮತ್ತು ಪಿ2ಪಿ ಚಾರ್ಜಿಂಗ್ ಪಾಲುದಾರರೊಂದಿಗೆ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿದಾರರಿಗೆ ಶುಲ್ಕ ವಿಧಿಸಲು ಪಾಲುದಾರಿಕೆ ಹೊಂದಿದೆ. ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗ್ರಾಹಕರಿಂದಲೇ ಬದಲಿಸಬಹುದಾದ ಬ್ಯಾಟರಿಯನ್ನು ಹೊಂದಿದ್ದು, ದೇಶೀಯ 220 ವೋಲ್ಟ್ ವಿದ್ಯುತ್ ಮೂಲಕವೂ ಚಾರ್ಜ್ ಮಾಡಬಹುದು.

ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಪೋಯಿಸ್ ಉದ್ಯಮದ ಆರ್ಥಿಕತೆಗೆ ಉದಾಹರಣೆಯಾಗಲು ಕಂಪನಿ ಬಯಸುತ್ತದ ಎಂದು ಪೋಯಿಸ್ ಸ್ಕೂಟರ್ಸ್ ಬ್ರಾಂಡ್‌ನ ಪರಾಸ್ ಬೆಲಾಂಡರ್ ಪ್ರತಿಕ್ರಿಯಿಸಿದ್ದಾರೆ. ಲಿಥಿಯಂ-ಐರನ್ ಬ್ಯಾಟರಿಗಳು ಪೂರ್ಣ ಬಳಕೆಯಾಗಿ ಡೆಡ್ ವ್ಯವಸ್ಥೆ ತಲುಪಿದ ನಂತರವೇ ಮರುಬಳಕೆ ಮಾಡಲಾಗುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಬಹಳ ಸುಧಾರಿಸಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ನಿರೀಕ್ಷೆಗಿಂತ ವೇಗವಾಗಿ ಬೆಳೆದಿದೆ. ಈ ಕಾರಣದಿಂದಾಗಿ, ಪೋಯಿಸ್ ಸ್ಕೂಟರ್‌ಗಳಂತಹ ಅನೇಕ ಇವಿ ಸ್ಟಾರ್ಟ್‌ಅಪ್ ಬ್ರಾಂಡ್‌ಗಳು ಪ್ರತಿ ವರ್ಷ ವಿಶೇಷವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ತಯಾರಿಕೆಯಲ್ಲಿ ಕಣಕ್ಕೆ ಇಳಿಯುತ್ತಿವೆ. ಈ ನಿಟ್ಟಿನಲ್ಲಿ ಕೆಲವು ವರ್ಷಗಳ ಹಿಂದೆ ಇವಿ ಬ್ರಾಂಡ್ ಆಗಿ ಪಾದಾರ್ಪಣೆ ಮಾಡಿದ ಅಥರ್ ಎನರ್ಜಿ, ತನ್ನ 450ಎಕ್ಸ್ ದಕ್ಷ ಇ-ಸ್ಕೂಟರ್ ಉತ್ಪಾದನೆಯಲ್ಲಿ 25,000 ಮೈಲಿಗಲ್ಲನ್ನು ಯಶಸ್ವಿಯಾಗಿ ದಾಟಿದೆ.

ಇನ್ನು ಹೀರೋ ಮೋಟೊಕಾರ್ಪ್ ಕಂಪನಿ ಕೂಡ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ತನ್ನದೆ ಒಡೆತನದ ಹೀರೋ ಎಲೆಕ್ಟ್ರಿಕ್ ಕಂಪನಿಯ ಮೇಲೆ ಮಾತ್ರವಲ್ಲದೆ ಇತರೆ ಸ್ಟಾರ್ಟ್ಅಪ್ ಇವಿ ಕಂಪನಿಗಳಲ್ಲೂ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಹೀರೋ ಮೋಟೊಕಾರ್ಪ್ ಕಂಪನಿಯ ಬಂಡವಾಳದೊಂದಿಗೆ ಹಲವಾರು ಇವಿ ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳನ್ನು ಅಭಿವೃದ್ದಿಪಡಿಸುತ್ತಿವೆ.

ಎಥರ್ ಎನರ್ಜಿ ಕಂಪನಿಯ ಮೇಲೆ 2016ರಿಂದಲೇ ವಿವಿಧ ಹಂತದಲ್ಲಿ ಹೂಡಿಕೆ ಮಾಡುತ್ತಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಇದೀಗ ರೂ. 420 ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲಿಯೇ ಎಥರ್ ಕಂಪನಿಯು ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿರುವ ಓಲಾ ಎಲೆಕ್ಟ್ರಿಕ್ ನಿರ್ಮಾಣ ಎಸ್1 ಮತ್ತು ಎಸ್1 ಪ್ರೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಹೊಸ ಇವಿ ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.

ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇತ್ತೀಚೆಗೆ ಬಿಡುಗಡೆಯಾಗಿರುವ ಇವಿ ಸ್ಕೂಟರ್‌ಗಳಿಂತಲೂ ತುಸು ಕಡಿಮೆ ಮೈಲೇಜ್ ಹೊಂದಿದ್ದರೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಮತ್ತು ಎಲೆಕ್ಟ್ರಿಕ್ ಎಂಜಿನ್ ಕಾರ್ಯಕ್ಷಮತೆ, ತಾಂತ್ರಿಕ ಸೇವೆಗಳ ವಿಚಾರವಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವುದೇ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿರುವ 2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.


Click it and Unblock the Notifications








