ಏಪ್ರಿಲ್ 25ರಿಂದ ಪುನಾರಂಭಗೊಳ್ಳಲಿದೆ ರಿವೋಲ್ಟ್ ಇವಿ ಬೈಕ್ ಬುಕಿಂಗ್
ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಮೋಟಾರ್‌ಸೈಕಲ್ ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಇವಿ ಬೈಕ್‌ಗಳ ಬುಕಿಂಗ್ ಪ್ರಕ್ರಿಯೆಯನ್ನು ಪುನಾರಂಭಿಸಲಾಗುತ್ತಿದ್ದು, ಎಲೆಕ್ಟ್ರಿಕ್ ಬೈಕ್ ಬುಕಿಂಗ್ ಪ್ರಕ್ರಿಯೆಯು ಈ ತಿಂಗಳು 25ರಿಂದ ಪುನಾರಂಭಗೊಳ್ಳಲಿದೆ.

ಉತ್ಪಾದನಾ ಪ್ರಮಾಣವನ್ನು ಆಧರಿಸಿ ಬುಕಿಂಗ್ ಪ್ರಕ್ರಿಯೆಯನ್ನು ಕೈಗೊಳ್ಳುವ ರಿವೋಲ್ಟ್ ಕಂಪನಿಯು ಉತ್ಪಾದನಾ ಪ್ರಮಾಣ ಹೆಚ್ಚಳದೊಂದಿಗೆ ಇದೀಗ ಮತ್ತೆ ಬುಕಿಂಗ್ ಪ್ರಕ್ರಿಯೆಗೆ ಮರುಚಾಲನೆ ನೀಡುತ್ತಿದ್ದು, ಕಳೆದ ಬಾರಿ ದಾಖಲಾದ ಬುಕಿಂಗ್ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ದಾಖಲಾಗುವ ಸಾಧ್ಯತೆಗಳಿವೆ.

ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಹೊಸ ವಾಹನ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ಆಸಕ್ತಿ ತೋರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಮೇಲೆ ವಿಶೇಷ ಆಸಕ್ತಿಯೊಂದಿಗೆ ವಿವಿಧ ಮಾದರಿಯ ಇವಿ ವಾಹನಗಳನ್ನು ಪರಿಚಯಿಸುತ್ತಿವೆ.

ಈ ನಿಟ್ಟಿನಲ್ಲಿ ವಿನೂತನ ಇವಿ ಉತ್ಪನ್ನದೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ರಿವೋಲ್ಟ್ ಕಂಪನಿಯು ದೇಶದ ಪ್ರಮುಖ ನಗರಗಳಿಗೆ ಮಾರಾಟ ಸೌಲಭ್ಯವನ್ನು ವಿಸ್ತರಿಸಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯ ಬೇಡಿಕೆ ದಾಖಲಾಗುವ ಸಾಧ್ಯತೆಗಳಿವೆ.

ಆರಂಭದಲ್ಲಿ ರಿವೋಲ್ಟ್ ಕಂಪನಿಯು ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಹೆಚ್ಚಿನ ಮಟ್ಟದ ಮಾರಾಟ ಮಳಿಗೆಗಳನ್ನು ತೆರೆದಿತ್ತು. ಇದೀಗ ಕಂಪನಿಯು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದ್ದು, ಕಳೆದ ಕೆಲ ತಿಂಗಳ ಹಿಂದಷ್ಟೇ ನಮ್ಮ ಬೆಂಗಳೂರಿನಲ್ಲೂ ಮಾರಾಟ ಮಳಿಗೆ ಆರಂಭಿಸಿದ್ದ ಕಂಪನಿಯು ಇದೀಗ ಆಂಧ್ರಪ್ರದೇಶದಲ್ಲಿ ಮತ್ತೆರಡು ಹೊಸ ಶೋರೂಂಗಳಿಗೆ ಚಾಲನೆ ನೀಡಿದೆ.

ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಸದ್ಯ ರಿವೋಲ್ಟ್ ಮೋಟಾರ್ಸ್ ಕಂಪನಿಯು ಅಗ್ರಸ್ಥಾನದಲ್ಲಿದ್ದು, ದೇಶಾದ್ಯಂತ ಪ್ರಮುಖ ರಾಜ್ಯಗಳಲ್ಲಿ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದು ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲು ಸಹಕಾರಿಯಾಗಿದೆ.

ಕಂಪನಿಯು ಸದ್ಯ ದೇಶದ ಪ್ರಮುಖ ಮೆಟ್ರೊ ನಗರಗಳಲ್ಲಿ ಇವಿ ಬೈಕ್ ಮಾರಾಟ ಸೌಲಭ್ಯವನ್ನು ತೆರೆಯುತ್ತಿದ್ದು, ಈ ವರ್ಷಾಂತ್ಯಕ್ಕೆ ಕಂಪನಿಯು ಹೊಸದಾಗಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ 40 ಹೊಸ ಮಾರಾಟ ಮಳಿಗೆಗಳನ್ನು ತೆರೆಯುವ ಗುರಿಹೊಂದಿದೆ.

ಹೊಸ ಮಾರಾಟ ಮಳಿಗೆಗಳನ್ನು ವಿನೂತನವಾಗಿ ವಿನ್ಯಾಸಗೊಳಿಸಿರುವ ಕಂಪನಿಯು ಹೊಸ ಮಾರಾಟ ಮಳಿಗೆಯನ್ನು ರಿವೋಲ್ಟ್ ಕೆಫೆ ಎಂದು ಹೆಸರಿಸಿದ್ದು, ಹೊಸ ಮಾರಾಟ ಮಳಿಗೆಗಳೊಂದಿಗೆ ಕಂಪನಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಿವೋಲ್ಟ್ ಕಂಪನಿಯು ಆರ್‌ವಿ400 ಇವಿ ಬೈಕ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯನ್ನು ಆಧರಿಸಿ ಆರ್‌ವಿ300 ಮಾದರಿಯನ್ನು ಸ್ಥಗಿತಗೊಳಿಸಿ ಆರ್‌ವಿ400 ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ಫೇಮ್ 2 ಯೋಜನೆಯಡಿ ಗರಿಷ್ಠ ಸಬ್ಸಡಿಯೊಂದಿಗೆ ರಿವೋಲ್ಟ್ ಬೈಕ್ ಮಾದರಿಗಳು ಮಾರಾಟಗೊಳ್ಳುತ್ತಿದ್ದು, ಆರಂಭದಲ್ಲಿ ಆರ್‌ವಿ300 ಮತ್ತು ಆರ್‌ವಿ400 ಮಾದರಿಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯು ಸದ್ಯಕ್ಕೆ ಆರ್‌ವಿ400 ಮಾದರಿಯ ಮೇಲೆ ಹೆಚ್ಚಿನ ಗಮನಹರಿಸಿದೆ.

ಕೇಂದ್ರ ಸರ್ಕಾರ ಫೇಮ್ 2 ಸಬ್ಸಡಿ ಒಳಗೊಂಡು ಹೊಸ ಬೈಕ್ ಮಾದರಿಯು ರೂ. 1.25 ಲಕ್ಷ ಬೆಲೆ ಹೊಂದಿದ್ದು, ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ಕೆಲವು ರಾಜ್ಯಗಳು ತಮ್ಮ ರಾಜ್ಯದ ವಾಹನ ಖರೀದಿದಾರರಿಗಾಗಿ ಹೆಚ್ಚಿನ ಮಟ್ಟದ ಸಬ್ಸಡಿ ಒದಗಿಸುತ್ತವೆ.

ಹೊಸ ಆರ್‌ವಿ400 ಮಾದರಿಯು ರೆಬಲ್ ರೆಡ್, ಮಿಸ್ಟ್ ಗ್ರೆ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ.

ಆರ್‌ವಿ400 ಮಾದರಿಯು ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡಲಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಈ ಬೈಕಿನಲ್ಲಿವೆ.

ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಹೊಸ ಇವಿ ಬೈಕ್‌ನಲ್ಲಿ ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ಪ್ರಮುಖವಾಗಿವೆ.

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಇದಲ್ಲದೆ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಅಳವಡಿಸಿದ್ದು, ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ.


Click it and Unblock the Notifications








