ಸುಧಾರಿತ ತಂತ್ರಜ್ಞಾನ ಪ್ರೇರಿತ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಳ್ಳಲಿದೆ ಸಿಂಪಲ್ ಒನ್ ಇವಿ ಸ್ಕೂಟರ್
ಸಿಂಪಲ್ ಎನರ್ಜಿ ಕಂಪನಿಯು ತನ್ನ ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಗೊಳಿಸಿ ವಿತರಣೆಗೆ ಸಿದ್ದವಾಗುತ್ತಿದ್ದು, ಕಂಪನಿಯು ಹೊಸ ಸ್ಕೂಟರ್ ವಿತರಣೆಗೂ ಮುನ್ನ ಎಲೆಕ್ಟ್ರಿಕ್ ಮೋಟಾರ್ ಉನ್ನತೀಕರಿಸುತ್ತಿರುವ ಮಾಹಿತಿ ಹಂಚಿಕೊಂಡಿದೆ.

ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ತಾಂತ್ರಿಕ ಅಂಶಗಳಲ್ಲಿ, ಬ್ಯಾಟರಿ ರೇಂಜ್ ಮತ್ತು ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯುತ್ತಿದ್ದು, ಕಂಪನಿಯು ಈಗಾಗಲೇ ಅನಾವರಣಗೊಳಿಸಲಾಗಿರುವ ಸಿಂಪಲ್ ಒನ್ ಮಾದರಿಗಿಂತಲೂ ಸುಧಾರಿತ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸುಳಿವು ನೀಡಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿ ಬುಕ್ಕಿಂಗ್ ಆರಂಭಿಸಿರುವ ಸಿಂಪಲ್ ಎನರ್ಜಿ ಕಂಪನಿಯು ಮುಂಬರುವ ಜೂನ್‌ನಿಂದ ವಿತರಣೆ ಆರಂಭಿಸುವುದಾಗಿ ಹೇಳಿಕೊಂಡಿದ್ದು, ವಿತರಣೆ ಆರಂಭಕ್ಕೂ ಮುನ್ನ ಹೊಸ ಸ್ಕೂಟರ್‌ನಲ್ಲಿ ಇನ್ನು ಕೆಲವು ಪ್ರಮುಖ ಬದಲಾವಣೆಗಳನ್ನು ತರಲು ನಿರ್ಧರಿಸಿದೆ.

ಕಳೆದ ಅಗಸ್ಟ್‌ನಲ್ಲಿ ಅನಾವರಣಗೊಳಿಸಿದ ಮಾದರಿಗಿಂತಲೂ ಸದ್ಯ ಉನ್ನತೀಕರಿಸುತ್ತಿರುವ ಮಾದರಿಯು ಇನ್ನು ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿರುವ ಬಗ್ಗೆ ಕಂಪನಿಯು ಮಾಹಿತಿ ನೀಡಿದ್ದು, ಉನ್ನತೀಕರಿಸಿದ ಎಲೆಕ್ಟ್ರಿಕ್ ಮೋಟಾರ್‌ನಲ್ಲಿ ಉತ್ತಮ ದಕ್ಷತೆಗಾಗಿ ಥರ್ಮಲ್ ಮ್ಯಾನೇಜ್‌ಮೆಂಟ್‌ನೊಂದಿಗೆ ಅಭಿವೃದ್ದಿಪಡಿಸಿದೆ.

ಥರ್ಮಲ್ ಮ್ಯಾನೇಜ್‌ಮೆಂಟ್‌ನೊಂದಿಗೆ ಸಿಂಪಲ್ ಒನ್ ಇವಿ ಸ್ಕೂಟರ್ ಕಾರ್ಯಕ್ಷಮತೆ ಸುಧಾರಿಸುವುದರ ಜೊತೆಗೆ ಬಾಳ್ವಿಕೆ ಅವಧಿಯು ಹೆಚ್ಚಳವಾಗಲಿದ್ದು, ಹೊಸ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಸದ್ಯ ವಿವಿಧ ಹಂತದ ಟೆಸ್ಟಿಂಗ್ ಪೂರ್ಣಗೊಳಿಸಿರುವ ಕಂಪನಿಯು ಶೀಘ್ರದಲ್ಲಿಯೇ ಉತ್ಪಾದನೆ ಆರಂಭಿಸಲಿದೆ.

ಸಿಂಪಲ್ ಎನರ್ಜಿ ಕಂಪನಿಯು ಸಿಂಪಲ್ ಒನ್ ಇವಿ ಸ್ಕೂಟರ್ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷಕ್ಕೆ ನಿಗದಿಪಡಿಸಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ತ್ರಿಕೊನಾಕಾರದ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಹೆಡ್‌ಲ್ಯಾಂಪ್, ಸೈಡ್ ಬೈ ಟರ್ನ್ ಸಿಗ್ನಲ್ ಇಂಡಿಕೇಟರ್, ಫ್ಲ್ಯಾಟ್ ಫುಟ್‌ಬೋರ್ಡ್, ಅಯಾಲ್ ವ್ಹೀಲ್, ಸ್ಪೋರ್ಟಿ ರಿಯರ್ ವ್ಯೂ ಮಿರರ್, 30-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ.

ಸಿಂಪಲ್ ಎನರ್ಜಿ ಇವಿ ಸ್ಕೂಟರ್‌ನಲ್ಲಿ 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಮಾಡಿದ್ದು, ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಪ್ರತಿ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಸಿಂಪಲ್ ಒನ್ ಸ್ಕೂಟರ್ 72 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 2.95 ಸೆಕೆಂಡುಗಳಲ್ಲಿ ಸೊನ್ನೆಯಿಂದ 40ಕಿ.ಮೀ ಕ್ವಿಕ್ ಸ್ಪೀಡ್ ಪಡೆದುಕೊಳ್ಳಲಿದ್ದು, ಹೊಸ ಸ್ಕೂಟರ್ ಅನ್ನು ಸಿಂಪಲ್ ಕಂಪನಿಯು ಟ್ಯೂಬಲರ್ ಫ್ರೆಮ್ ಬಳಕೆ ಮಾಡಿದೆ.

ಜೊತೆಗೆ ಸಿಂಪಲ್ ಒನ್ ಸ್ಕೂಟರ್ ಮಾದರಿಯಲ್ಲಿ 1024x600 ಫಿಕ್ಸೆಲ್ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂಥ್ ಮತ್ತು 4ಜಿ ಇಂಟರ್‌ನೆಟ್ ಸಂಪರ್ಕಕ್ಕಾಗಿ ಕನೆಕ್ಟೆಡ್ ಟೆಕ್ನಾಲಜಿ ನೀಡಲಾಗಿದೆ. ಕನೆಕ್ಟೆಡ್ ಫೀಚರ್ಸ್‌ನಲ್ಲಿ ಜಿಯೋ ಫೆನ್ಸಿಂಗ್, ಮ್ಯೂಜಿಕ್ ಕಂಟ್ರೋಲ್, ಎಸ್ಒಎಸ್ ಮೆಸೇಜ್, ವೆಹಿಕಲ್ ಟ್ರ್ಯಾಕಿಂಗ್, ಡ್ಯಾಕುಮೆಂಟ್ ಸ್ಟೋರೇಜ್, ಫೈಂಡ್ ಮೈ ಬೈಕ್ ಸೌಲಭ್ಯಗಳಿವೆ.

ಸದ್ಯ ನಮ್ಮ ಬೆಂಗಳೂರಿನಲ್ಲಿಯೇ ಹೊಸ ಇವಿ ಸ್ಕೂಟರ್ ಮಾದರಿಯ ಉತ್ಪಾದನಾ ಪ್ರಕ್ರಿಯೆಯನ್ನು ನಡೆಸುತ್ತಿರುವ ಸಿಂಪಲ್ ಎನರ್ಜಿ ಕಂಪನಿಯು ಶೀಘ್ರದಲ್ಲಿಯೇ ಎರಡನೇ ಘಟಕವನ್ನು ತಮಿಳುನಾಡಿನ ಧರ್ಮಪುರಿಯಲ್ಲಿ ಆರಂಭಿಸುವ ಯೋಜನೆಯಲ್ಲಿದೆ.

ಆರಂಭಿಕ ಬಂಡವಾಳದೊಂದಿಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಈಗಾಗಲೇ ಮುಖ್ಯ ಕಚೇರಿ ಮತ್ತು ಉತ್ಪಾದನಾ ಘಟಕ ಹೊಂದಿರುವ ಸಿಂಪಲ್ ಎನರ್ಜಿ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಎರಡನೇ ಘಟಕದಲ್ಲೂ ಉತ್ಪಾದನೆ ಆರಂಭಿಸುವ ಸಿದ್ದತೆಯಲ್ಲಿದೆ.

ಎರಡನೇ ಉತ್ಪಾದನಾ ಘಟಕವು ಸುಮಾರು 600 ಎಕರೆ ವಿಸ್ತಾರವಾಗಿದ್ದು, ಹೊಸ ಘಟಕ ನಿರ್ಮಾಣ ಮತ್ತು ಹೊಸ ಇವಿ ವಾಹನಗಳ ಅಭಿವೃದ್ದಿಗಾಗಿ ಕಂಪನಿಯು ಸುಮಾರು ರೂ. 2,500 ಕೋಟಿ ಬಂಡವಾಳವನ್ನು ಹಂತ-ಹಂತವಾಗಿ ಹೂಡಿಕೆ ಮಾಡುತ್ತಿದೆ.

ಸಿಂಪಲ್ ಎನರ್ಜಿ ಕಂಪನಿಯು ರೂ.2,500 ಕೋಟಿ ಬಂಡವಾಳದಲ್ಲಿ ರೂ. 1 ಸಾವಿರ ಕೋಟಿಯನ್ನು ಎರಡನೇ ಉತ್ಪಾದನಾ ಘಟಕದ ನಿರ್ಮಾಣಕ್ಕಾಗಿ ಮತ್ತು ಇನ್ನುಳಿದ ರೂ. 1,500 ಕೋಟಿ ಬಂಡವಾಳವನ್ನು ಮುಂದಿನ ಐದು ವರ್ಷಗಳಿಗೆ ಹಂತ-ಹಂತವಾಗಿ ಆರ್ ಅಂಡ್ ಡಿ, ಟೆಸ್ಟಿಂಗ್ ಟ್ರ್ಯಾಕ್ ಸೇರಿದಂತೆ ಮಾರುಕಟ್ಟೆ ವಿಸ್ತರಣೆಯ ಮೇಲೆ ಹೂಡಿಕೆ ಮಾಡಲಿದೆ.

ಸಿಂಪಲ್ ಎನರ್ಜಿ ಕಂಪನಿಯು ದೇಶದ 13 ರಾಜ್ಯಗಳ ಪ್ರಮುಖ ನಗರಗಳಲ್ಲಿ ಸದ್ಯ ಮಾರಾಟ ಸೌಲಭ್ಯವನ್ನು ಆರಂಭಿಸುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿದಂತೆ ಇವಿ ಸ್ಕೂಟರ್ ಮಾರಾಟ ಸೌಲಭ್ಯವು ಹಂತ-ಹಂತವಾಗಿ ದೇಶದ ಪ್ರಮುಖ ದೇಶಗಳಲ್ಲಿ ವಿಸ್ತರಣೆಯಾಗಲಿದೆ.


Click it and Unblock the Notifications








