ಮೂರು ಸಾವಿರ ಮಹಿಳೆಯರನ್ನು ವಿತರಣಾ ಪಾಲುದಾರರನ್ನಾಗಿ ನೇಮಕಗೊಳಿಸಲಿದೆ ಜೈಪ್ ಎಲೆಕ್ಟ್ರಿಕ್
ಎಲೆಕ್ಟ್ರಿಕ್ ವೆಹಿಕಲ್ ಲಾಜಿಸ್ಟಿಕ್ಸ್ ಡೆಲಿವರಿ ಸ್ಟಾರ್ಟ್ಅಪ್ ಕಂಪನಿಯಾಗಿರುವ ಜೈಪ್ ಎಲೆಕ್ಟ್ರಿಕ್ ಇವಿ ವಾಹನ ಬಳಕೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಮುಂಬರುವ ಕೆಲವೇ ವರ್ಷಗಳಲ್ಲಿ ಇವಿ ವಾಹನ ಉದ್ಯಮದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಜೈಪ್ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಕೊನೆಯ ಮೈಲಿ ತನಕದ ಗೂಡ್ಸ್ ವಿತರಣೆಗಾಗಿ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಂಡ ಮೊದಲ ಡೆಲಿವರಿ ಕಂಪನಿಯಾಗಿದ್ದು, ಇ-ಕಾಮರ್ಸ್ ಕಂಪನಿಗಳಿಗೆ ವ್ಯಾಪಕವಾದ ವಿತರಣಾ ಸೇವೆಗಳನ್ನು ಒದಗಿಸುತ್ತಿದೆ. ಕಂಪನಿಯು ಈಗಾಗಲೇ ಪ್ರಮುಖ ಕಂಪನಿಗಳೊಂದಿಗೆ ವಿವಿಧ ರೇಂಜ್ ಹೊಂದಿರುವ ಇವಿ ವಾಹನಗಳನ್ನು ಬಳಕೆ ಮಾಡುತ್ತಿದ್ದು, ಈ ವರ್ಷದ ವರ್ಷದಲ್ಲಿ ಬರೋಬ್ಬರಿ 1 ಲಕ್ಷ ಇವಿ ವಾಹನಗಳನ್ನು ಅಳವಡಿಸಿಕೊಳ್ಳುವ ಯೋಜನೆಯಲ್ಲಿದೆ.

ಹೊಸ ಯೋಜನೆಗಾಗಿ ಕಂಪನಿಯು ಈ ವರ್ಷಾಂತ್ಯಕ್ಕೆ ತನ್ನ ಲಾಜಿಸ್ಟಿಕ್ಸ್ ನೆಟ್‌ವರ್ಕ್‌ನಲ್ಲಿ ತನ್ನ ಚಾಲಕ ಪಾಲುದಾರರ ಸಂಖ್ಯೆಯನ್ನು 25,000ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಈಗಾಗಲೇ 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ವಿತರಣಾ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಟ್ಟು ಉದ್ಯೋಗಿಗಳಲ್ಲಿ ಕನಿಷ್ಠ 50 ಪ್ರತಿಶತದಷ್ಟು ಮಹಿಳೆಯರನ್ನು ಹೊಂದುವ ದೀರ್ಘಾವಧಿಯ ಗುರಿಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಜೈಪ್ ಕಂಪನಿಯು ಈ ವರ್ಷಾಂತ್ಯಕ್ಕೆ ಕನಿಷ್ಠ 3 ಸಾವಿರ ಮಹಿಳೆಯರನ್ನು ವಿತರಣಾ ಪಾಲುದಾರರನ್ನಾಗಿ ನೇಮಕ ಮಾಡುವ ಗುರಿಹೊಂದಿದೆ.

ವಿತರಣಾ ಫ್ಲೀಟ್‌ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಮಹಿಳೆಯರಿಗೂ ಸಮಾನ ಅವಕಾಶಗಳನ್ನು ಒದಗಿಸಲು ಸಲವಾಗಿ ಜೈಪ್ ಕಂಪನಿಯು ವಿತರಣಾ ಪಾಲುದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದು, ವಿತರಣಾ ಪಾಲುದಾರರಿಗೆ ಕಂಪನಿಯೇ ಇವಿ ವಾಹನಗಳನ್ನು ಒದಗಿಸುವುದರಿಂದ ಎಲ್ಲಾ ರೀತಿ ತರಬೇತಿಗಳನ್ನು ನೀಡಿ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡುವುದಾಗಿ ಮಾಹಿತಿ ಹಂಚಿಕೊಂಡಿದೆ.

ದೆಹಲಿ ಮೂಲದ ಜೈಪ್ ಎಲೆಕ್ಟ್ರಿಕ್ ಸ್ಮಾರ್ಟ್ ಇವಿ ಕಂಪನಿಯು ವಿತರಣಾ ವಲಯದಲ್ಲಿನ ಸೇವೆಗಳಿಗಾಗಿ ವಿಶೇಷವಾದ ಹೊಸ ಇವಿ ವಾಹನಗಳ ಉತ್ಪಾದನೆಗೂ ಕೂಡಾ ಚಾಲನೆ ನೀಡಿದ್ದು, ಜೈಪ್ ಕಂಪನಿಯು ಇವಿ ವಾಹನ ಉದ್ಯಮ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕಂಪನಿಯ ಮೇಲೆ ಭಾರೀ ಪ್ರಮಾಣದ ಹೂಡಿಕೆಯಾಗಿದೆ.

ಬ್ಯುಸಿನೆಸ್ ಟು ಬ್ಯುಸಿನೆಸ್(ಬಿಟುಬಿ) ಉದ್ದೇಶಗಳಿಗೆ ಹೆಚ್ಚಿನ ಸಂಖ್ಯೆಯ ಇವಿ ವಾಹನಗಳನ್ನು ಒದಗಿಸುತ್ತಿರುವ ಜೈಪ್ ಕಂಪನಿಯು ಪ್ರಮುಖ ಇ-ಕಾರ್ಮಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ದೇಶಾದ್ಯಂತ ತನ್ನ ಫ್ಲೀಟ್‌ನಲ್ಲಿ ಒಂದು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದೆ.

ಪ್ರಸ್ತುತ ಜೈಪ್ ಎಲೆಕ್ಟ್ರಿಕ್ ಕಂಪನಿಯು ದೆಹಲಿ-ಎನ್‌ಸಿಆರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದ್ದು, ಜೈಪ್ ಕಂಪನಿಯ ಸೀರಿಸ್ ಎ ಬಂಡವಾಳ ಹೂಡಿಕೆಯಲ್ಲಿ ವಿವಿಧ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡಿವೆ.

ಭವಿಷ್ಯದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲಿರುವ ಜೈಪ್ ಎಲೆಕ್ಟ್ರಿಕ್ ಇವಿ ವಾಹನ ಮಾದರಿಗಳಿಗಾಗಿ ಹೊಸದಾಗಿ ಸುಮಾರು ರೂ. 52 ಕೋಟಿಯಷ್ಟು ಹೂಡಿಕೆಯಾಗಿದ್ದು, ಈ ಮೂಲಕ ಜೈಪ್ ಕಂಪನಿಯ ಮೇಲೆ ಇದುವರೆಗೆ ಸುಮಾರು ರೂ. 94 ಕೋಟಿ ಬಂಡವಾಳ ಹೂಡಿಕೆಯಾದಂತಾಗಿದೆ.

ಹೊಸ ಬಂಡವಾಳ ಹೂಡಿಕೆಯೊಂದಿಗೆ ಕಂಪನಿಯು ತನ್ನ ಉದ್ಯಮ ವ್ಯಾಪ್ತಿ ವಿಸ್ತರಿಸುವುದರ ಜೊತೆಗೆ ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಹೊರತರುವ ಸಿದ್ದತೆಯಲ್ಲಿದ್ದು, 2022ರಲ್ಲಿ ಜೈಪ್ ಆದಾಯವು 5 ಪಟ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.

ಇ-ಕಾಮರ್ಸ್ ಕಂಪನಿಗಳ ಸರಕಗಳನ್ನು ಗ್ರಾಹಕರಿಗೆ ತಲುಪಿಸಲು ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಜೈಪ್ ಕಂಪನಿಯು ಕೊನೆಯ ಹಂತದ ಮೈಲಿ ತನಕ ಸೇವೆಗಳನ್ನು ನೀಡಲಿದ್ದು, ಹೊಸ ಬಂಡವಾಳ ಹೂಡಿಕೆಯು ಉದ್ಯಮ ವಿಸ್ತರಣೆಗೆ ಸಾಕಷ್ಟು ಸಹಕಾರಿಯಾಗಲಿದೆ.

ಜೈಪ್ ಕಂಪನಿಯು ಹೊಸ ಸ್ಕೂಟರ್ ಮಾದರಿಗಳನ್ನು ವಿಶೇಷವಾಗಿ ಬಿಟುಬಿ ಉದ್ದೇಶಗಳಿಗಾಗಿ ಅಭಿವೃದ್ದಿಗೊಳಿಸುತ್ತಿದ್ದು, 2017 ರಲ್ಲಿ ಆರಂಭವಾದ ಜೈಪ್ ಕಂಪನಿಯನ್ನು ಆಕಾಶ್ ಗುಪ್ತಾ ಮತ್ತು ರಾಶಿ ಅಗರ್‌ವಾಲ್ ಎಂಬುವವರು ಸ್ಥಾಪನೆ ಮಾಡಿದರು.

ಆರಂಭದಲ್ಲಿ ಕಡಿಮೆ ಬಂಡವಾಳದೊಂದಿಗೆ ಆರಂಭವಾದ ಜೈಪ್ ಕಂಪನಿಯು ಇದೀಗ ಸುಮಾರು ರೂ. 94 ಕೋಟಿಯಷ್ಟು ಬಂಡವಾಳ ಪಡೆದುಕೊಂಡ ಹೊಸ ಇವಿ ಸ್ಕೂಟರ್ ಉದ್ಯಮ ಕಂಪನಿಯಾಗಿ ಹೊರಹೊಮ್ಮಿದ್ದು, ಎ ಸೀರಿಸ್‌ನಲ್ಲಿ ಮಾರ್ಕ್ಯೂ ಇಕ್ವಿಟಿ, ನಾನಾವತಿ ಫ್ಯಾಮಿಲಿ ಆಫೀಸ್, ವಿ ಫೌಂಡರ್ ಸರ್ಕಲ್, ರಿಸೋ ಕ್ಯಾಪಿಟಲ್, ಧೋಲಾಕಿಯಾ ವೆಂಚರ್ಸ್, ಐಎಎನ್ ಫಂಡ್, ವೇರ್‌ಹೌಸ್ ನೌ ಸಂಸ್ಥೆಯ ತರುಣ್ ಸರಾಫ್, ಎಡಬ್ಲ್ಯುಎಲ್ ಲಾಜಿಸ್ಟಿಕ್ಸ್‌ನ ರಾಹುಲ್ ಖೇರಾ ಮತ್ತು ಉದ್ಯಮಿಗಳಾದ ಅರ್ಜುನ್ ಸೇಠ್ ಮತ್ತು ಮಾರ್ಕ್ ಜೋಸೆಫ್ ಜೈಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

ಬ್ಯುಸಿನೆಸ್ ಟು ಬ್ಯುಸಿನೆಸ್ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಪೆಟ್ರೋಲ್ ಸ್ಕೂಟರ್‌ಗಳ ನಿರ್ವಹಣಾ ವೆಚ್ಚವು ಕಳೆದ ಕೆಲ ತಿಂಗಳಿನಲ್ಲಿ ಸಾಕಷ್ಟು ಏರಿಕೆಯಾಗುತ್ತಿರುವುದರಿಂದ ಜೈಪ್ ಇವಿ ಕಂಪನಿಯು ಉದ್ಯಮ ವ್ಯವಹಾರಗಳಿಗೆ ಪೂರಕವಾಗಿ ಹೊಸ ವಾಣಿಜ್ಯ ಬಳಕೆಯ ಇವಿ ಸ್ಕೂಟರ್‌ಗಳನ್ನು ಅಳವಡಿಸಿಕೊಂಡಿದೆ.


Click it and Unblock the Notifications