Bengaluru-Chennai Expressway: ಬೆಂಗಳೂರು-ಚೆನ್ನೈ ಕೇವಲ 2 ಗಂಟೆ, ವಿಮಾನಕ್ಕಿಂತ ರಸ್ತೆಯಲ್ಲೇ ವೇಗವಾಗಿ ಹೋಗಬಹುದು!
ಬಹುನೀರಿಕ್ಷಿತ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru Chennai Expressway) ಶೀಘ್ರದಲ್ಲಿಯೇ ಲೋಕಾರ್ಪಣೆಯಾಗಲಿದ್ದು, ಕೆಲವೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಾಯವಾಗಲಿದೆ. ಈ ಹೆದ್ದಾರಿ ನಿರ್ಮಾಣದಿಂದ ಇವೆರೆಡು ನಗರಗಳ ನಡುವಿನ ಪ್ರಯಾಣದ ಅವಧಿ ತುಂಬಾ ಕಡಿಮೆಯಾಗಲಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಹಿಂದೂಜಾದ ಅಂಗಸಂಸ್ಥೆ ಅಶೋಕ್ ಲೇಲ್ಯಾಂಡ್‌ನ 75ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾತನಾಡಿದ್ದಾರೆ. '262 ಕಿಲೋಮೀಟರ್ ಉದ್ದದ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಮುಂದಿನ ವರ್ಷದ (2024) ಜನವರಿಯಲ್ಲಿ ಸಿದ್ಧವಾಗಲಿದೆ. ಇದರಿಂದ ಪ್ರಯಾಣದ ಸಮಯ ಗಮನಾರ್ಹವಾಗಿ ಇಳಿಕೆಯಾಗಲಿದ್ದು, ಎರಡು ಗಂಟೆಯಷ್ಟು ಆಗಲಿದೆ' ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು 36 ಗ್ರೀನ್ ಎಕ್ಸ್‌ಪ್ರೆಸ್‌ವೇ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ಜನವರಿಯಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಆ ಕುರಿತು ಪರಿಶೀಲಿಸಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸೂರತ್ - ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ದೆಹಲಿ - ಚೆನ್ನೈ ನಡುವಿನ ಅಂತರ 300 ಕಿಲೋಮೀಟರ್ ಕಡಿಮೆಯಾಗುತ್ತದೆ. ಇದರಿಂದ ಸರಕು ಸಾಕಾಣಿಕೆ ವೆಚ್ಚವು ತುಂಬಾ ಕಡಿಮೆಯಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ಭಾಗವಾಗಿ ಭಾರತಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಈ ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಇದಕ್ಕೆ 2011ರಲ್ಲಿಯೇ ಯೋಜನೆಯನ್ನು ರೂಪಿಸಲಾಯಿತ್ತು. ಆದರೆ, ವಿವಿಧ ಕಾರಣಗಳಿಂದ ತಡವಾಗಿತ್ತು. ಕಳೆದ ವರ್ಷ (2022)ದ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಈ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಕರ್ನಾಟಕ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಎಕ್ಸ್‌ಪ್ರೆಸ್‌ವೇ ಹಾದುಹೋಗಲಿದ್ದು, ಯೋಜನೆ ಮುಗಿಯುವವರೆಗೂ ರೂ.17,000 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹೆದ್ದಾರಿಯಲ್ಲಿ ವಾಹನಗಳ ವೇಗ ಮಿತಿಯನ್ನು 120 kmph ಸೀಮಿತಗೊಳಿಸುವ ಸಾಧ್ಯತೆಯಿದ್ದು, ಇದರಿಂದ ಪ್ರಯಾಣದ ಅವಧಿ ತೀರಾ ಕಡಿಮೆಯಾಗುವ ಸಂಭವವಿದೆ. ಜೊತೆಗೆ ದೇಶದಲ್ಲಿ ಮೊದಲ ಹಸಿರು ಹೆದ್ದಾರಿ ಎಂಬ ಹೆಗ್ಗಳಿಕೆಗೂ ಈ ರಸ್ತೆ ಪಾತ್ರವಾಗಲಿದ್ದು, ಅದಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ.
ಈಗಾಗಲೇ, ಬೆಂಗಳೂರು - ಚೆನ್ನೈ ನಡುವೆ ಎರಡು ಪ್ರಮುಖ ರಸ್ತೆಗಳಿವೆ. ಮೊದಲನೆಯದು 335 ಕಿಮೀ ಉದ್ದದ ಹಳೆಯ ಮದ್ರಾಸ್ ರೋಡ್ (NH-75). ಇನ್ನೊಂದು, 372 ಕಿಲೋಮೀಟರ್ ಉದ್ದದ ಹೆದ್ದಾರಿ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೊಸೂರು, ಕೃಷ್ಣಗಿರಿ, ಅಂಬೂರು, ಕಾಂಚಿಪುರಂ, ಶ್ರೀಪೆರಂಬದೂರು ಮಾರ್ಗವಾಗಿ ಚೆನ್ನೈ ತಲುಪುತ್ತದೆ. ನೂತನ ಎಕ್ಸ್‌ಪ್ರೆಸ್‌ವೇ ಇವೆರೆಡು ಹೆದ್ದಾರಿಗಳ ನಡುವೆ ಹಾದು ಹೋಗುತ್ತದೆ.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ, ಹೊಸಕೋಟೆಯಲ್ಲಿ ಶುರುವಾಗಿ, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಮುಕ್ತಾಯವಾಗಲಿದೆ. ರಾಜ್ಯದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರದ ಚಿತ್ತೂರು ಮತ್ತು ತಮಿಳುನಾಡಿನ ರಾಣಿಪೇಟೆ, ಶ್ರೀಪೆರಂಬದೂರಿನಲ್ಲಿ ಈ ರಸ್ತೆಗಾಗಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ನಾಲ್ಕು ಪಥದ ಹೆದ್ದಾರಿ ಇದಾಗಿದ್ದು, ಎಂಟು ಪಥದವರೆಗೆ ವಿಸ್ತರಣೆ ಮಾಡಬಹುದು. ಅಷ್ಟರಮಟ್ಟಿಗೆ ಸ್ಥಳಾವಕಾಶವಿದೆ.
ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಬೆಂಗಳೂರು - ಚೆನ್ನೈ ನಗರಗಳ ನಿವಾಸಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈಗಿರುವ 5 - 6 ಗಂಟೆ ಪ್ರಯಾಣ ಅವಧಿ 2 ಗಂಟೆಗೆ ಇಳಿಯಲಿದ್ದು, ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಯಾಗುತ್ತದೆ. ಮುಂಬರುವ ಜನವರಿಯಲ್ಲಿ ಹೆದ್ದಾರಿ ಲೋಕಾರ್ಪಣೆಯಲಿದೆ ಎಂದು ಕೇಂದ್ರ ಸಚಿವರು ಹೇಳಿರುವುದು ಖುಷಿಯ ವಿಚಾರವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications