ತೀರಾ ಕಡಿಮೆ ಬೆಲೆಗೆ 'Enigma' ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆ: ವಿಶೇಷತೆಗಳೇನು?
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರೀ ಜನಪ್ರಿಯತೆಗಳಿಸುತ್ತಿವೆ. ತಿಂಗಳಿಗೆ ಕನಿಷ್ಠವೆಂದರೂ ಎರಡರಿಂದ ಮೂರು ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆಯಾಗುತ್ತವೆ. ಇದೀಗ, ಎನಿಗ್ಮಾ (Enigma) ದೇಶೀಯ ಮಾರುಕಟ್ಟೆಯಲ್ಲಿ ತನ್ನ ಎರಡು ಹೈ-ಸ್ವೀಡ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಆ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ ಬನ್ನಿ.
ಎನಿಗ್ಮಾ, ಜಿಟಿ 450 ಪ್ರೊ ಮತ್ತು ಕ್ರಿಂಕ್ ವಿ1 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇವೆರೆಡು ಕ್ರಮವಾಗಿ ರೂ.89,000 ಮತ್ತು ರೂ.94,000 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಆಸಕ್ತ ಗ್ರಾಹಕರು, ಎನಿಗ್ಮಾ ಶೋರೂಂಗೆ ಭೇಟಿ ನೀಡುವ ಮೂಲಕ ಖರೀದಿ ಮಾಡಬಹುದು. ಕಂಪನಿಯು ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿಯೇ ಆನ್‌ಲೈನ್ ಆರ್ಡರ್ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೊದಲಿಗೆ ಜಿಟಿ 450 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡೋಣ. ಇದರಲ್ಲಿ 40 AH ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 120 km ರೇಂಜ್ ನೀಡಲಿದೆ. ಜೊತೆಗೆ ಈ ಎಲೆಕ್ಟ್ರಿಕ್ ಸ್ಕೂಟರ್ 60 kmph ಟಾಪ್ ಸ್ವೀಡ್ ಹೊಂದಿದ್ದು, 10 Amp ಚಾರ್ಜರ್ ಬಳಕೆಯಲ್ಲಿ ಇದರ ಬ್ಯಾಟರಿ ಕೇವಲ 3.5 ಗಂಟೆಯಲ್ಲಿ ಚಾರ್ಜ್ ಆಗುತ್ತದೆ.
ಎನಿಗ್ಮಾ ಜಿಟಿ 450 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದರೂ ಸುಮಾರು 200 ಕೆಜಿ ಲೋಡ್ ಸಾಗಿಸುವ ಸಾಮರ್ಥ್ಯ ಹೊಂದಿದೆ. 68 ಕೆಜಿ (ಬ್ಯಾಟರಿ ಇಲ್ಲದೆ) ತೂಕವಿದೆ. ಈ ಸ್ಕೂಟರ್ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ ಡಿಸ್ಕ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಇದಿಷ್ಟೇ ಅಲ್ಲದೆ, ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕ್ರಿಂಕ್ ವಿ1 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು 36 AH ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದೆ. ಸಂಪೂರ್ಣ ಚಾರ್ಜಿನಲ್ಲಿ 140 km ರೇಂಜ್ ನೀಡಲಿದ್ದು, ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಕಮ್ಮಿ ಇಲ್ಲದಂತೆ 70 kmph ಟಾಪ್ ಸ್ವೀಡ್ ಹೊಂದಿದೆ.
ಈ ಸ್ಕೂಟರ್, 210 kg ಲೋಡ್ ಸಾಗಿಸುವ ಸಾಮರ್ಥ್ಯ ಹೊಂದಿದೆ. ಕಂಪನಿ ನೀಡುವ 10 Amp ಚಾರ್ಜರ್ ಬಳಕೆಯಲ್ಲಿ ಇದರ ಬ್ಯಾಟರಿ 0-100 ಚಾರ್ಜ್ ಆಗಲು 3.5 ಗಂಟೆ ಬೇಕು. ಬ್ರೇಕಿಂಗ್ ಸಿಸ್ಟಮ್ ನೋಡುವುದಾದರೆ, ಫ್ರಂಟ್ ಡಿಸ್ಕ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಇವೆರೆಡು ಸ್ಕೂಟರ್ ಗಳು ಗ್ರೇ, ಗೋಲ್ಡ್, ವೈಟ್, ಸಿಲ್ವರ್, ಬ್ಲೂ, ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಸಿಗಲಿವೆ.

ಈ ಸ್ಕೂಟರ್ ಗಳ ಬಿಡುಗಡೆ ಬಗ್ಗೆ ಮಾತನಾಡಿರುವ ಎನಿಗ್ಮಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಅನ್ಮೋಲ್ ಬೋಹ್ರೆ, 'ಜಿಟಿ 450 ಪ್ರೊ ಮತ್ತು ಕ್ರಿಂಕ್ ವಿ1 ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗಳಿಸುತ್ತಿರುವುದು ಸಂತೋಷ ತಂದಿದೆ. ಅದರಲ್ಲಿ ಕ್ರಿಂಕ್ ವಿ1 ಸ್ಕೂಟರ್ ರೆಟ್ರೋ ಲುಕ್ ಹೊಂದಿದ್ದು, ಹೆಚ್ಚಿನ ಯುವ ಖರೀದಿದಾರರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಹೊಂದಿದ್ದೇವೆ' ಎಂದು ಹೇಳಿದ್ದಾರೆ.
ಇನ್ನು, ಎನಿಗ್ಮಾ ಕಂಪನಿಯ ದೇಶೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಸಾಲು ಸಾಲು ಪ್ರತಿಸ್ಪರ್ಧಿಗಳಿವೆ. ಅದರಲ್ಲೂ ಓಲಾ, ಎಥರ್, ಟಿವಿಎಸ್ ಹಾಗೂ ಹೀರೋ ಕಂಪನಿ ಸ್ಕೂಟರ್ ಗಳಿಗೆ ಪ್ರಬಲ ಫೈಟ್ ನೀಡಬೇಕಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








