100 ಕಿಮೀ ರೇಂಜ್ ನೀಡುವ ಜೆಮೊಪೈ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್: ಬೆಲೆಯು ಕಡಿಮೆ
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಅದಕ್ಕೆ ತಕ್ಕಂತೆ ವಾಹನ ತಯಾರಕ ಕಂಪನಿಗಳು ಹಲವು ಬೈಕ್, ಸ್ಕೂಟರ್‌ಗಳನ್ನು ಲಾಂಚ್ ಮಾಡುತ್ತಿರುತ್ತವೆ. ಕೆಲವೊಂದು ಆಕರ್ಷಕ ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಇದೀಗ, ಜೆಮೊಪೈ ತನ್ನ ನವೀಕರಿಸಿದ ಸ್ಕೂಟರ್ ಬಿಡುಗಡೆ ಮಾಡಿದೆ.
ನೋಯ್ಡಾ ಮೂಲದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಜೆಮೊಪೈ (Gemopai), ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ರೈಡರ್ ಸೂಪರ್‌ಮ್ಯಾಕ್ಸ್ (Ryder Supermax) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಇದು ರೂ.79,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹತ್ತಾರು ನವೀನ ವೈಶಿಷ್ಟ್ಯ ಹಾಗೂ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, ಹೆಚ್ಚಿನ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು.

ಆಸಕ್ತ ಗ್ರಾಹಕರು, ಅಧಿಕೃತ ವೆಬ್‌ಸೈಟ್ ಇಲ್ಲವೇ, ಮಾರ್ಚ್ 10ರಿಂದ ಅಧಿಕೃತ ಡೀಲರ್‌ಶಿಪ್‌ಗೆ ಭೇಟಿ ನೀಡಿ, ರೂ.2,999ರ ಆರಂಭಿಕ ಮೊತ್ತ ಪಾವತಿಸುವ ಮೂಲಕ ಈ ಜೆಮೊಪೈ ರೈಡರ್ ಸೂಪರ್‌ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಬಹುದು. ಈ ಸ್ಕೂಟರ್ ಒಟ್ಟು ಆರು ಬಣ್ಣಗಳ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗಲಿದೆ. ಅವುಗಳೆಂದರೆ, ಜಾಝಿ ನಿಯಾನ್, ಎಲೆಕ್ಟ್ರಿಕ್ ಬ್ಲೂ, ಬ್ಲೇಜಿಂಗ್ ರೆಡ್, ಸ್ಪಾರ್ಕ್ಲಿಂಗ್ ವೈಟ್, ಗ್ರ್ಯಾಫೈಟ್ ಗ್ರೇ ಹಾಗೂ ಫ್ಲೋರೊಸೆಂಟ್ ಯೆಲ್ಲೋ.
ನೂತನ ರೈಡರ್ ಸೂಪರ್‌ಮ್ಯಾಕ್ಸ್ ಸ್ಕೂಟರ್ ಪವರ್ ಟ್ರೇನ್ ಬಗ್ಗೆ ಮಾತನಾಡುವುದಾದರೆ, 1.8 kW AIS-156 ಕಂಪ್ಲೈಂಟ್ ಬ್ಯಾಟರಿ ಹಾಗೂ ಚಾರ್ಜರ್ ಹೊಂದಿದೆ. BLDC ಹಬ್ ಮೋಟಾರ್ ನಿಂದ ಕಾರ್ಯ ನಿರ್ವಹಿಸಲಿದ್ದು, 2.7 kW ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 100 ಕಿಮೀ ರೇಂಜ್ ನೀಡಲಿದ್ದು, 60 Kmph ಟಾಪ್ ಸ್ವೀಡ್ ಹೊಂದಿದೆ.

ರೈಡರ್ ಸೂಪರ್‌ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡುರುವ ಜೆಮೊಪೈನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ಅಮಿತ್ ರಾಜ್ ಸಿಂಗ್ ಅವರು, 'ನವೀಕರಣದೊಂದಿಗೆ ಈ ಸ್ಕೂಟರ್ ಲಾಂಚ್ ಮಾಡುತ್ತಿರುವುದು ಸಂತೋಷ ತಂದಿದೆ. ಇತ್ತೀಚಿನ ತಂತ್ರಜ್ಞಾನ ಹಾಗೂ ಅತ್ಯತ್ತಮ ಕಾರ್ಯಕ್ಷಮತೆ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ನೀಡುತ್ತಿದ್ದೇವೆ. ನಮ್ಮ ಖರೀದಿದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೊಳ್ಳುವರು ಎಂಬ ನೀರಿಕ್ಷೆಯಿದೆ' ಎಂದು ಹೇಳಿದ್ದಾರೆ.
ಜೆಮೊಪೈ ಭಾರತದ ಮಾರುಕಟ್ಟೆಯಲ್ಲಿ ರೈಡರ್ ಸೂಪರ್‌ಮ್ಯಾಕ್ಸ್ ಮಾತ್ರವಲ್ಲದೆ, ಆಸ್ಟ್ರಿಡ್ ಲೈಟ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದ್ದು, ಬೆಂಗಳೂರಿನಲ್ಲಿ ರೂ.1,01,418 ಆನ್-ರೋಡ್ ದರವನ್ನು ಪಡೆದಿದೆ. ಸಂಪೂರ್ಣ ಚಾರ್ಜಿನಲ್ಲಿ 90 Km ರೇಂಜ್ ನೀಡಲಿದ್ದು, 65 Kmph ಟಾಪ್ ಸ್ವೀಡ್ ಹೊಂದಿದ್ದು, ಕೇವಲ 3-4 ಗಂಟೆಯಲ್ಲಿ ಇದರ ಬ್ಯಾಟರಿ ಚಾರ್ಜ್ ಆಗುತ್ತದೆ. ಸೆಂಟ್ರಲ್ ಲಾಕ್, ಯುಎಸ್‌ಬಿ ಚಾರ್ಜಿಂಗ್, ಕೀಲೆಸ್ ಎಂಟ್ರಿ, ಎಲ್‌ಇಡಿ ಲೈಟ್‌ನ್ನು ಪಡೆದಿದೆ.
ಜೆಮೊಪೈ ರೈಡರ್ ಎಂಟ್ರಿ ಲೆವೆಲ್ ಸ್ಕೂಟರ್ ಆಗಿದ್ದು, ರೂ.76,750 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಇದು ಕೂಡ ಸಂಪೂರ್ಣ ಚಾರ್ಜಿನಲ್ಲಿ 90 Km ರೇಂಜ್ ನೀಡಲಿದ್ದು, 25 Kmph ಟಾಪ್ ಸ್ವೀಡ್ ಹೊಂದಿದೆ. ಈ ಸ್ಕೂಟರ್ ಐದು ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಅವುಗಳೆಂದರೆ, ರೆಡ್, ಬ್ಲೂ, ಗ್ರೇ, ಗೋಲ್ಡ್ ಹಾಗೂ ವೈಟ್. ಆಂಟಿ-ಥೆಫ್ಟ್ ಅಲಾರ್ಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಜೆಮೊಪೈ ರೈಡರ್ ಸೂಪರ್‌ಮ್ಯಾಕ್ಸ್ ಅದರ ಬೆಲೆಗೆ ತಕ್ಕಂತೆ ಗರಿಷ್ಠ ರೇಂಜ್ ನೀಡಲಿದೆ. ಜೊತೆಗೆ ಹತ್ತಾರು ನವೀನ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ಬಹುತೇಕ ಯುವ ಗ್ರಾಹಕರು ಖರೀದಿಸಲು ಮನಸ್ಸನ್ನು ಮಾಡಬಹುದು. ಆದರೆ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಯಾವ ರೀತಿ ಪೈಪೋಟಿ ನೀಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.


Click it and Unblock the Notifications








