HEROದಿಂದ ಬಹು ಬೇಡಿಕೆಯ ಬೈಕ್, ಸ್ಕೂಟರ್‌ಗಳ ಬೆಲೆ ಹೆಚ್ಚಳ
ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ 'ಹೀರೋ ಮೋಟೊಕಾರ್ಪ್' ಗುರುತಿಸಿಕೊಂಡಿದ್ದು, ಇದೀಗ, ತನ್ನ ವಿವಿಧ ಬೈಕ್, ಸ್ಕೂಟರ್‌ಗಳ ಬೆಲೆಯನ್ನು ಏಪ್ರಿಲ್ 1ರಿಂದ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಎಷ್ಟು ದರ ಹೆಚ್ಚಳವಾಗಲಿದೆ. ಅದಕ್ಕೆ ಕಾರಣವೇನೆಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ದೇಶಾದ್ಯಂತ ಮುಂಬರುವ ದಿನಗಳಲ್ಲಿ (ಏಪ್ರಿಲ್ 1) ಅನುಷ್ಠಾನವಾಗಲಿರುವ BS6 ಹಂತ 2 ಎಮಿಷನ್ ಮಾನದಂಡಗಳ ಪ್ರಕಾರ, ಹೀರೋ ಮೋಟೊಕಾರ್ಪ್ ತನ್ನ ದ್ವಿಚಕ್ರ ವಾಹನಗಳ ಎಂಜಿನ್ ಮೇಲ್ದರ್ಜೆಗೇರಿಸಿದ್ದು, ತಯಾರಿಕ ವೆಚ್ಚವ್ವನ್ನು ಸರಿದೂಗಿಸಲು ಬೆಲೆ ಏರಿಸುತ್ತಿದೆ. ಆದರೆ, ಯಾವ ಮಾದರಿಗಳ ದರವೆಷ್ಟು ಹೆಚ್ಚಳವಾಗಲಿದೆ ಎಂಬುದರ ಬಗ್ಗೆ ಕಂಪನಿಯು ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಬಹುತೇಕ ಶೇಕಡ 2% ಬೆಲೆ ಅಧಿಕವಾಗಬಹುದು. ಪ್ರಮುಖವಾಗಿ ಸ್ಪ್ಲೆಂಡರ್ ಬೈಕ್, ಪ್ಲೆಶರ್ ಸ್ಕೂಟರ್ ದರ ಏರಿಕೆಯಾಗಲಿದೆ.

ಹೀರೋ, ಭಾರತದಲ್ಲಿ ಸ್ಪ್ಲೆಂಡರ್ ಬೈಕ್ ಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಇವುಗಳನ್ನು ಹೆಚ್ಚಿನ ಯುವ ಖರೀದಿದಾರರೂ ಇಷ್ಟಪಟ್ಟು ಖರೀದಿಸುತ್ತಾರೆ. ಕಳೆದ ಫೆಬ್ರವರಿ (2023)ಯಲ್ಲಿ 288,605 ಯುನಿಟ್ ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ 48.97% (94,874 ಯುನಿಟ್ ಹೆಚ್ಚು) ಪ್ರಗತಿ ಸಾಧಿಸಿದೆ. 2022ರ ಫೆಬ್ರವರಿಯಲ್ಲಿ 193,731 ಯುನಿಟ್ ಸ್ಪ್ಲೆಂಡರ್ ಬೈಕ್ ಮಾರಾಟ ಮಾಡಿತ್ತು.
ದೇಶೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಸರಣಿಯ ಯಾವೆಲ್ಲ ಬೈಕ್ ಗಳನ್ನು ಮಾರಾಟ ಮಾಡುತ್ತಿದೆ ಎಂಬುದನ್ನು ನೋಡುವುದಾದರೆ, ಕಳೆದ ಕೆಲವು ದಿನಗಳ ಹಿಂದೆ ಕೈಗೆಟುಕುವ ಬೆಲೆಯಲ್ಲಿ ಹೀರೋ ಸೂಪರ್ ಸ್ಪ್ಲೆಂಡರ್ XTECನ್ನು ಬಿಡುಗಡೆ ಮಾಡಿತ್ತು. ಇದು ರೂಪಾಂತರಗಳಿಗೆ ಅನುಗುಣವಾಗಿ ರೂ.83,368 - ರೂ.87,268 ಬೆಲೆಯಲ್ಲಿ ಖರೀದಿಗೆ ಸಿಗಲಿದೆ. LED ಹೆಡ್‌ಲ್ಯಾಂಪ್, USB ಚಾರ್ಜಿಂಗ್ ಪಾಯಿಂಟ್ ಹೊಸದಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ.
ಬಹುತೇಕರು ಲೈಕ್ ಮಾಡುವ 'ಹೀರೋ ಸ್ಪ್ಲೆಂಡರ್ ಪ್ಲಸ್' ಬೆಂಗಳೂರಿನಲ್ಲಿ ರೂ.91,233 ಆನ್-ರೋಡ್ ದರದಲ್ಲಿ ಲಭ್ಯವಿದೆ. ಇದು, 97.2 ಸಿಸಿ ಎಂಜಿನ್ ಹೊಂದಿದ್ದು, 7.91 bhp ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 60 kmpl ಮೈಲೇಜ್ ನೀಡಲಿದ್ದು, 9.8 ಲೀಟರ್ ಫ್ಯೂಯಲ್ ಟ್ಯಾಂಕ್ ಪಡೆದಿದೆ. ಮೂರು ರೂಪಾಂತರಗಳಲ್ಲಿ ಖರೀದಿಗೆ ಸಿಗಲಿದೆ. ಅಲಾಯ್ ವೀಲ್ಸ್, ಆಟೋ ಸ್ಟಾರ್ಟ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಸದ್ಯ, ಭಾರತದದಲ್ಲಿ ಮಾರಾಟವಾಗುವ ಹೀರೋ ಪ್ಲೆಶರ್ ಪ್ಲಸ್, ರೂ.68,368 ದಿಂದ ರೂ.77,268 ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ. 110.9 ಸಿಸಿ ಎಂಜಿನ್ ಹೊಂದಿದ್ದು, 8.1 PS ಪವರ್ ಹಾಗೂ 8.70 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 50 kmpl ಮೈಲೇಜ್ ನೀಡಲಿದ್ದು, ಟ್ಯೂಬ್ ಲೆಸ್ ಹಾಗೂ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಇನ್ನುಳಿದಂತೆ ಹೀರೋ ಬೈಕ್ ಗಳಾದ HF ಡಿಲಕ್ಸ್ ರೂ.49,999, Xtreme 160R ರೂ.1,17,786, ಗ್ಲಾಮರ್ ರೂ.80,768, Xpulse 200 4ವಿ ರೂ.1,38,496, ಪ್ಯಾಷನ್ ಪ್ರೊ ರೂ.74,058, ಪ್ಯಾಷನ್ Xtec ರೂ. 77,758, ಗ್ಲಾಮರ್ Xtec ರೂ.87,968, ಹಾಗೂ Xpulse 200T 4ವಿ ರೂ.1,25,726 ದರದಲ್ಲಿ ಸಿಗಲಿದೆ. ಸ್ಕೂಟರ್ ಗಳಾದ ಹೀರೋ ಜೂಮ್ ರೂ.68,599, ಮೆಸ್ಟ್ರೋ ಎಡ್ಜ್ 125 ರೂ.77,896, ಡೆಸ್ಟಿನಿ 125 ರೂ.71,608 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಹೀರೋ ಕಂಪನಿ, ತನ್ನ ವಿವಿಧ ಮಾದರಿ ದರವನ್ನು ರೂ.2000ದಷ್ಟು ಹೆಚ್ಚಿಸಬಹುದು. ಆದರೆ, ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ದೃಢಪಟ್ಟಿಲ್ಲ. ಏಪ್ರಿಲ್ 1ರಿಂದ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. ಆದರೆ, ಬೆಲೆ ಹೆಚ್ಚಳವಾಗುತ್ತಿರುವುದು ಗಾಹಕರಿಗೆ ಕೊಂಚ ಹೊರೆಯಾಗಬಹುದು. ಆದರೂ ಬೈಕ್, ಸ್ಕೂಟರ್ ಗಳ ಎಂಜಿನ್ ಅನ್ನು ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸುತ್ತಿದ್ದು, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರಲಿವೆ.


Click it and Unblock the Notifications